ಕಲಬುರಗಿ,ಮಾ.27-ಬುದ್ಧ, ಬಸವ, ಅಂಬೇಡ್ಕರ್ ಅವರ ಜಯಂತೋತ್ಸವ ಸಮಿತಿಗೆ ಯೋಗ್ಯರು ಅಧ್ಯಕ್ಷರಾಗಿ ಆಯ್ಕೆಯಾಗಬೇಕು. ಅಸಮರ್ಥರು ಉತ್ಸವ ಸಮಿತಿ ಅಧ್ಯಕ್ಷರಾದರೆ ಬುದ್ಧ, ಬಸವ, ಅಂಬೇಡ್ಕರ್ ಅವರಿಗೆ ಅಪಮಾನ ಮಾಡಿದಂತೆ. ಬುದ್ಧ, ಬಸವ, ಅಂಬೇಡ್ಕರ್ ಅವರ ಬಗ್ಗೆ ಪೂರ್ಣವಾಗಿ ಅರಿತವರು, ಸಮಾಜದಲ್ಲಿ ಬದ್ಧತೆ ಇದ್ದವರು, ಕಡೆಯ ಪಕ್ಷ ಎರಡು ಡಿಗ್ರಿ ಓದಿದವರನ್ನಾದ್ರೂ ಉತ್ಸವ ಸಮಿತಿ ಅಧ್ಯಕ್ಷರನ್ನಾಗಿ ಆಯ್ಕೆಮಾಡಬೇಕು. ಇವರ ಆಯ್ಕೆಯಲ್ಲಿ ರಾಜಕಾರಣಿಗಳ ಹಸ್ತಕ್ಷೇಪ ಇರಕೂಡದು ಎಂಬುದು ನಾಗಮೂರ್ತಿ ಶೀಲವಂತ ಅವರ ಮಾತು.
ಡಾ. ಬಾಬಾ ಸಾಹೇಬ್ ಅಂಬೇಂಡ್ಕರ್ ಹೇಳಿದಂತೆ “ಇತಿಹಾಸ ಮರೆತವರು ಇತಿಹಾಸ ಸೃಷ್ಠಿಸಲಾರರು” ನಾವೂ ಇತಿಹಾಸ ಹೆಕ್ಕಿ ತೆಗೆಯಬೇಕೆ ಹೊರತು, ಸಗಣಿ ಸಾರಿಸೊ ಕೈಗಳಾಗಬಾರದು ಎಂಬುದು ಇವರ ಕಿವಿಮಾತು.
ಅಂದಹಾಗೆ ಇವರು ಆಳಂದ ತಾಲೂಕು ಪಂಚಾಯತ ರಾಜ್ ಇಲಾಖೆಯಲ್ಲಿ ಸಹಾಯಕ ಕಾರ್ಯ ನಿರ್ವಾಹಕ ಅಭಿಯಂತರರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ನೇರ ಮಾತು, ಮೃದು ಮನಸ್ಸು ಹೊಂದಿರುವ ಇವರು ಸರ್ಕಾರಿ ಸೇವೆ ಜೊತೆಗೆ ತಮ್ಮನ್ನು ಸಮಾಜ ಸೇವೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಸಮಾಜ ವೈಜ್ಞಾನಿಕ, ವೈಚಾರಿಕ ನೆಲೆಗಟ್ಟಿನಲ್ಲಿ ಬದುಕು ಕಟ್ಟಿಕೊಳ್ಳಬೇಕು ಎಂಬುದು ಇವರ ಆಶಯ.
-ಪ್ರಕಾಶ್ ವಗ್ಗೆ