
ಶ್ರೀನಗರ(ಜಮ್ಮು ಕಾಶ್ಮೀರ), ಮೇ.೨೦- ನಗರದಲ್ಲಿ ನಡೆಯಲಿರುವ ಜಿ ೨೦ ಸಭೆಗೂ ಮುನ್ನವೇ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಅಧಿಕಾರಿಗಳು ಜಮ್ಮು ಮತ್ತು ಕಾಶ್ಮೀರದ ಹಲವು ಜಿಲ್ಲೆಗಳಲ್ಲಿ ಭಯೋತ್ಪಾದಕ ಸಂಘಟನೆಗಳಿಗೆ ಸಹಕಾರ ನೀಡುತ್ತಿರುವ ಶಂಕಿತ ಸಹಚರರು ಮತ್ತು ಓವರ್‌ಗ್ರೌಂಡ್ ಕಾರ್ಮಿಕರ ಮೇಲೆ ದಾಳಿ ನಡೆಸಿದ್ದಾರೆ.
ಕಾಶ್ಮೀರ ವಿಭಾಗದ ಶ್ರೀನಗರ, ಪುಲ್ವಾಮಾ, ಕುಪ್ವಾರ, ಅವಂತಿಪೋರಾ ಮತ್ತು ಅನಂತನಾಗ್‌ನ ೧೬ಕ್ಕೂ ಹೆಚ್ಚು ಸ್ಥಳಗಳಲ್ಲಿ ಮತ್ತು ಜಮ್ಮು ವಿಭಾಗದ ಹಲವಾರು ಸ್ಥಳಗಳಲ್ಲಿ ಶೋಧ ತೀವ್ರಗೊಳಿಸಲಾಗಿದೆ.
ಎನ್‌ಐಎ ಅಧಿಕಾರಿಗಳು ದಕ್ಷಿಣ ಕಾಶ್ಮೀರದ ಗೂಸು, ನೆಹ್ಮಾ ಮತ್ತು ದಫರ್‌ಪುರ ಪ್ರದೇಶಗಳಲ್ಲಿ ಸಹ ದಾಳಿ ನಡೆಸಿದ್ದಾರೆ. ಜಮಾತ್-ಎ-ಇಸ್ಲಾಮಿ ಗೆ ಸಂಬಂಧಿಸಿದ ವ್ಯಕ್ತಿಗಳ ಮೇಲೆ ದಾಳಿ ನಡೆಸಲಾಗಿದ್ದು, ಶಂಕಿತ ಆರೋಪಿಗಳ ಬಳಿ ಇದ್ದ ದಾಖಲೆಗಳು, ಮೊಬೈಲ್ ಫೋನ್ ಹಾಗೂ ಇತರೆ ವಸ್ತುಗಳನ್ನು ಪರಿಶೀಲಿಸಲಾಗುತ್ತಿದೆ.
ಇಂದು ಬೆಳಗ್ಗೆ ಪುಲ್ವಾಮಾ ಜಿಲ್ಲೆಯಲ್ಲಿ ಎನ್‌ಐಎ ದಾಳಿ ಪ್ರಾರಂಭಿಸಿದಾಗ ಭದ್ರತಾ ದೃಷ್ಟಿಯಿಂದ ಹೆಚ್ಚಿನ ಸಂಖ್ಯೆಯ ಪೊಲೀಸರು ಮತ್ತು ಸಿಆರ್‌ಪಿಎಫ್ (ಕೇಂದ್ರ ಮೀಸಲು ಪೊಲೀಸ್ ಪಡೆ) ಪಡೆಯನ್ನು ನಿಯೋಜಿಸಲಾಗಿತ್ತು. ಕಳೆದ ಕೆಲ ದಿನಗಳ ಹಿಂದಷ್ಟೇ ರಾಷ್ಟ್ರೀಯ ತನಿಖಾ ಸಂಸ್ಥೆಯು ಭಯೋತ್ಪಾದಕರಿಗೆ ಆರ್ಥಿಕ ಸಹಾಯ ನೀಡುವ ಕೇಸ್?ಗೆ ಸಂಬಂಧಿಸಿದಂತೆ ಜಿಲ್ಲೆಗಳ ವಿವಿಧ ಪ್ರದೇಶಗಳಲ್ಲಿ ದಾಳಿ ನಡೆಸಿತ್ತು. ಈ ವೇಳೆ ಹೆಚ್ಚಿನ ತನಿಖೆಗಾಗಿ ಮೂವರನ್ನು ವಶಕ್ಕೆ ಪಡೆದ ಎನ್‌ಐಎ, ಇಂದು ಮತ್ತೆ ದಾಳಿ ಮುಂದುವರೆಸಿದೆ.ಮೇ ೨೨ ರಿಂದ ೨೪ ರವರೆಗೆ ಶ್ರೀನಗರದಲ್ಲಿ ಜಿ ೨೦ ಪ್ರವಾಸೋದ್ಯಮದ ವರ್ಕಿಂಗ್ ಗ್ರೂಪ್ ಸಭೆ ಕರೆಯಲಾಗಿದೆ. ಜಿ೨೦ ಸಭೆಗೂ ಮುಂಚಿತವಾಗಿ ಎನ್‌ಐಎ ತನ್ನ ದಾಳಿಗಳನ್ನು ತೀವ್ರಗೊಳಿಸಿದ್ದು, ಕಳೆದ ಮೂರು ವಾರಗಳಲ್ಲಿ ತನಿಖಾ ತಂಡವು ಭಯೋತ್ಪಾದನೆಗೆ ಸಂಬಂಧಿಸಿದವರನ್ನು ನಿಯಂತ್ರಿಸಲು ಜಮ್ಮು ಮತ್ತು ಕಾಶ್ಮೀರದ ವಿವಿಧ ಭಾಗಗಳ ೬೦ಕ್ಕೂ ಹೆಚ್ಚು ಸ್ಥಳಗಳಲ್ಲಿ ದಾಳಿ ನಡೆಸಿದೆ.
ಇಂದು ನಡೆಸಲಾದ ದಾಳಿಯು ಕಣಿವೆಯಲ್ಲಿ ತಮ್ಮ ಒಜಿಡಬ್ಲ್ಯೂ (ಓವರ್-ಗ್ರೌಂಡ್ ವರ್ಕರ್ಸ್) ಮತ್ತು ಕೇಡರ್‌ಗಳ ಮೂಲಕ ಕಾರ್ಯನಿರ್ವಹಿಸುತ್ತಿರುವ ಭಯೋತ್ಪಾದಕ ಸಂಘಟನೆಗಳ ಚಟುವಟಿಕೆಗಳ ಬಗ್ಗೆ ನಡೆಯುತ್ತಿರುವ ತನಿಖೆಯ ಭಾಗವಾಗಿದೆ ಎಂದು ಮೂಲಗಳು ತಿಳಿಸಿವೆ. ಈ ಭಯೋತ್ಪಾದಕ ಸಂಘಟನೆಗಳಲ್ಲಿ ಯುನೈಟೆಡ್ ಲಿಬರೇಶನ್ ಫ್ರಂಟ್ ಜಮ್ಮು ಮತ್ತು ಕಾಶ್ಮೀರ ಹಾಗೂ ಜಮ್ಮು ಮತ್ತು ಕಾಶ್ಮೀರ ಸ್ವಾತಂತ್ರ್ಯ ಹೋರಾಟಗಾರರು ಸೇರಿವೆ.
ಕಳೆದ ಮೂರು ದಿನಗಳ ಹಿಂದಷ್ಟೇ ಬಯೋತ್ಪಾದಕರು, ಮಾದಕ ವಸ್ತು ಕಳ್ಳಸಾಗಣೆದಾರರು ಮತ್ತು ದರೋಡೆಕೋರರ ಜೊತೆಗಿನ ನಂಟು ಪ್ರಕರಣಗಳಿಗೆ ಸಂಬಂಧಿಸಿದಂತೆ ಹರಿಯಾಣ, ಪಂಜಾಬ್, ರಾಜಸ್ಥಾನ, ಯುಪಿ, ಉತ್ತರಾಖಂಡ ಮತ್ತು ಮಧ್ಯಪ್ರದೇಶ ರಾಜ್ಯಗಳ ೧೦೦ಕ್ಕೂ ಹೆಚ್ಚು ಸ್ಥಳಗಳಲ್ಲಿ ರಾಷ್ಟ್ರೀಯ ತನಿಖಾ ಸಂಸ್ಥೆ ದಾಳಿ ಮಾಡಿತ್ತು. ಕ್ರಿಮಿನಲ್ ಕೇಸ್ ಹೊಂದಿರುವವರ ಮನೆಗಳ ಎನ್‌ಐಎ ಕಣ್ಣಿಟ್ಟಿದೆ ಎಂದು ಮೂಲಗಳು ತಿಳಿಸಿದ್ದವು. ಇದರ ಮುಂದುವರೆದ ಭಾಗವಾಗಿ ಇಂದು ಜಮ್ಮು ಮತ್ತು ಕಾಶ್ಮೀರದಲ್ಲಿ ಶೋಧ ಕೈಗೊಳ್ಳಲಾಗಿದೆ.