ಜಮೀರ್ ಹೇಳಿಕೆ: ಶಿಸ್ತುಪಾಲನಾ ಸಮಿತಿಗೆ ವರ್ಗಾವಣೆ: ಡಿಕೆ ಶಿವಕುಮಾರ್‌

ಬೆಂಗಳೂರು,ಜು.23-ಪಕ್ಷಕ್ಕೆ ಧಕ್ಕೆಯಾಗುವ ರೀತಿ ಹೇಳಿಕೆ ನೀಡುವವರ ವಿರುದ್ಧ ಯಾವ ರೀತಿ ಕ್ರಮ ಕೈಗೊಳ್ಳಬೇಕು ಎನ್ನುವುದನ್ನು ಶಿಸ್ತು ಪಾಲನಾ ಸಮಿತಿ ನಿರ್ಧರಿಸುತ್ತದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.

ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿಕೆ ಸಂಭಂದ ಶಿಸ್ತು ಪಾಲನಾ ಸಮಿತಿಗೆ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಕನಕಪುರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಪಕ್ಷದ ಮೇಲೆ ಪ್ರೀತಿ ಇರುವ ಮಂದಿ ಆಯಾ ಪಕ್ಷದ ಸಮುದಾಯವನ್ನು ಸಂಘಟಿಸಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಬೇಕು
ಅದನ್ನು ಬಿಟ್ಟು ಬೇಕಾಬಿಟ್ಟಿ ಹೇಳಿಕೆ ನೀಡುವುದನ್ನು ಸಹಿಸಲ್ಲ ಎಂದು ಪರೋಕ್ಷವಾಗಿ ಜಮೀರ್ ಅಹಮ್ಮದ್ ಖಾನ್ ಅವರಿಗೆ ಎಚ್ಚರಿಕೆ ನೀಡಿದ್ದಾರೆ.

ಭ್ರಷ್ಟಾಚಾರದಲ್ಲಿ ಸರ್ಕಾರ: ಆರೋಪ
ಕನಕಪುರದಲ್ಲಿ ಇಂದು ಕೆಡಿಬಿ ಸಭೆ ನಡೆಸಿದ್ದೇನೆ. ಜನರ ಅಹವಾಲುಗಳನ್ನು ಆಲಿಸಿ ಅಧಿಕಾರಿಗಳ ಜತೆ ಪಾರದರ್ಶಕವಾಗಿ ಸಭೆ ನಡೆಸಿದ್ದೇನೆ. ಸರ್ಕಾರಿ ಕಚೇರಿಗಳ ಎಲ್ಲ ಇಲಾಖೆಯಲ್ಲಿ ಭ್ರಷ್ಟಾಚಾರ ಹೆಚ್ಚಾಗಿದೆ. ಅಧಿಕಾರಿಗಳ ಕೆಲಸ ಪರಾಮರ್ಶೆ ಮಾಡಲು, ಅಧಿಕಾರಿಗಳ ಕಾರ್ಯಕ್ರಮಗಳೇನು ಎಂಬ ಮಾಹಿತಿ ತಿಳಿಸಲು ಸೂಚನೆ ನೀಡಿದ್ದೇನೆ ಎಂದರು.

ಸಾರ್ವಜನಿಕರ ದೂರು ಹೆಚ್ಚಾಗಿದ್ದ ಪರಿಣಾಮ, ಶನಿವಾರ ರಜಾದಿನವಾದರೂ ಇಂದು ಬಂದು ಸಭೆ ಮಾಡಿದ್ದೇನೆ. ವ್ಯವಸ್ಥೆಯನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗಮನ ಹರಿಸುತ್ತೇನೆ ಎಂದರು

ಈ ಸಭೆಗೆ ಬಂದವರು ಬಿಜೆಪಿ ಘನ ಸರ್ಕಾರ ನೇಮಿಸಿರುವ ಸದಸ್ಯರಾಗಿದ್ದಾರೆ. ಸರ್ಕಾರ ಎಲ್ಲ ಹುದ್ದೆಗಳಿಗೆ ಬೆಲೆ ನಿಗದಿ ಮಾಡಿರುವ ಪರಿಣಾಮ ಈ ರೀತಿ ಆಗುತ್ತಿದೆ. ಸರ್ಕಾರಿ ಕಚೇರಿಗಳಲ್ಲಿ ಗೋಡೆ, ಮೇಜುಗಳನ್ನು ಮುಟ್ಟಿದರೆ ದುಡ್ಡು, ದುಡ್ಡು ಎಂಬ ಸದ್ದು ಬರುತ್ತಿದೆ. ಇದಕ್ಕೆ ನಮ್ಮ ತಾಲೂಕು ದೊಡ್ಡ ಸಾಕ್ಷಿಯಾಗಿದೆ ಎಂದಿದ್ದಾರೆ