ಜಮೀರ್‌ಗೆ ಹೆಚ್‌ಡಿಕೆ ತರಾಟೆ

ಬೆಂಗಳೂರು, ಮಾ. ೩೧- ಬಸವಕಲ್ಯಾಣ ಉಪಚುನಾವಣೆಯಲ್ಲಿ ಮುಸ್ಲಿಂ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಕುಮಾರಸ್ವಾಮಿ ಬಿಜೆಪಿಯಿಂದ ಹಣ ಪಡೆದಿದ್ದಾರೆ ಎಂಬ ಶಾಸಕ ಜಮೀರ್ ಅಹಮದ್ ಖಾನ್ ಹೇಳಿಕೆಗೆ ತಿರುಗೇಟು ನೀಡಿರುವ ಕುಮಾರಸ್ವಾಮಿ, ಸರಣಿ ಟ್ವೀಟ್‌ನಲ್ಲಿ ಜಮೀರ್ ಖಾನ್ ವಿರುದ್ಧ ಚಾಟಿ ಬೀಸಿ ತರಾಟೆಗೆ ತೆಗೆದುಕೊಂಡಿದ್ದಾರೆ.
೨೦೦೫ ರಲ್ಲಿ ಎಸ್.ಎಂ. ಕೃಷ್ಣಾ ಅವರಿಂದ ತೆರವಾಗಿದ್ದ ಚಾಮರಾಜಪೇಟೆ ಉಪಚುನಾವಣೆಗೆ ಜೆಡಿಎಸ್ ಮುಸ್ಲಿಂ ಅಭ್ಯರ್ಥಿಯನ್ನು ಆಯ್ಕೆ ಮಾಡಿತ್ತು. ಅದರ ಖರ್ಚು ವೆಚ್ಚಗಳಿಗ ಜೆಡಿಎಸ್ ಬಿಜೆಪಿಯಿಂದ ದುಡ್ಡು ತಂದಿತ್ತೆ ಎಂದು ವಾಗ್ದಾಳಿ ನಡೆಸಿದ್ದಾರೆ.
೨೦೦೫ರ ಚಾಮರಾಜಪೇಟೆ ಉಪಚುನಾವಣೆಯಲ್ಲಿ ಅಭ್ಯರ್ಥಿಯಾಗಿದ್ದ ಇದೇ ಜಮೀರ್ ಅಹಮದ್ ಖಾನ್ ಅವರನ್ನು ಗೆಲ್ಲಿಸಲು ದೇವೇಗೌಡರು ಗಲ್ಲಿ ಗಲ್ಲಿ ಸುತ್ತಿ ಬೆವರು ಹರಿಸಿದ್ದರು. ಇದೆಲ್ಲಾ ಬಿಜೆಪಿಯನ್ನು ಗೆಲ್ಲಿಸಲೇ, ಇದಕ್ಕೆ ಸನ್ಮಿತ್ರರು ಆತ್ಮಸಾಕ್ಷಿಯಿಂದ, ಮನದಾಳದಿಂದ ಪ್ರಾಮಾಣಿಕ ಉತ್ತರ ಕೊಡಬಹುದೇ ಎಂದು ಅವರು ಟ್ವೀಟರ್‌ನಲ್ಲಿ ಜಮೀರ್ ಅಹಮದ್ ಖಾನ್ ಅವರಿಗೆ ಸವಾಲು ಹಾಕಿದ್ದಾರೆ.
ಚಾಮರಾಜಪೇಟೆ ಉಪಚುನಾವಣೆ ಮತದಾನಕ್ಕೆ ಎರಡು ದಿನ ಬಾಕಿ ಉಳಿದಿದ್ದಾಗ ನಮ್ಮ ಮುಸ್ಲಿಂ ಅಭ್ಯರ್ಥಿ ಜಮೀರ್ ಅಹಮದ್ ಏಕಾಏಕಿ ಕಾಣೆಯಾಗಿದ್ದರು. ಕಾರಣ ಹುಡುಕಿದಾಗ ಹಣದ ಕೊರತೆ ಎಂಬ ಅಂಶ ಗೊತ್ತಾಯಿತು. ಅಂದು ನಾನು ಶಿವಮೊಗ್ಗ ಪ್ರವಾಸದಲ್ಲಿದ್ದೆ ಓಡೋಡಿ ಬಂದು ಸಾಲ ಮಾಡಿ ಹಣ ಹೊಂದಿಸಿಕಟ್ಟಿದೆ. ಅಂದು ನಾನು ತಂದಿದ್ದ ಸಾಲದ ಹಣದ ಬಿಜೆಪಿಯ ಹಣವಾಗಿತ್ತೇ ಎಂಬುದನ್ನು ಜಮೀರ್ ಹೇಳಬೇಕು ಎಂದು ಅವರು ಟ್ವೀಟರ್‌ನಲ್ಲಿ ಹೇಳಿದ್ದಾರೆ.
ಚಾಮರಾಜಪೇಟೆ ಉಪಚುನಾವಣೆಯಲ್ಲಿ ಜಮೀರ್ ಅಹಮದ್ ಅವರನ್ನು ಗೆಲ್ಲಿಸದಿದ್ದರೆ ಆರೋಪ ಮಾಡಲು ಇಂದು ಅವರೇ ಇರುತಿರಲಿಲ್ಲ. ಇದನ್ನು ಅರ್ಥ ಮಾಡಿಕೊಳ್ಳಬೇಕು. ಜೆಡಿಎಸ್ ಪಕ್ಷದ ತ್ಯಾಗಕ್ಕಾಗಿ ಕಿಂಚಿತ್ತೂ ಕೃತಜ್ಞತೆ ಉಳಿಯದಿದ್ದರೆ ಹೇಗೆ ಎಂದು ಕುಮಾರಸ್ವಾಮಿ ಜಮೀರ್ ವಿರುದ್ಧ ಹರಿಹಾಯ್ದಿದ್ದಾರೆ.
ಸನ್ಮಿತ್ರ ಜಮೀರ್ ಅಹಮದ್ ಖಾನ್ ಜೆಡಿಎಸ್‌ನಲ್ಲಿದ್ದಾಗ ಅವರನ್ನು ಬೆಂಗಳೂರು ಕೇಂದ್ರ ಲೋಕಸಭೆಗೆ ಅಭ್ಯರ್ಥಿಯನ್ನಾಗಿಸಿ ಅವರ ಸಹೋದರನನ್ನು ಚಿಕ್ಕಪೇಟೆ ಅಭ್ಯರ್ಥಿಯನ್ನಾಗಿ ಮಾಡಲಾಯಿತು. ಇದನ್ನೆಲ್ಲಾ ಮಾಡಿದ್ದು, ಬಿಜೆಪಿಯನ್ನು ಗೆಲ್ಲಿಸಲೇ. ಜೆಡಿಎಸ್ ಪಕ್ಷ ಮತ್ತು ಕಾರ್ಯಕರ್ತರು ಎಲ್ಲರನ್ನು ಬೆಳೆಸಿದ್ದಾರೆ. ಪಕ್ಷದಿಂದ ಹೊರಗೆ ಹೋದವರನ್ನು ಅರಸಿದ್ದಾರೆ. ಕೃತಜ್ಞತೆ ಇರಲಿ ಎಂದು ಟ್ವೀಟ್‌ನಲ್ಲಿ ಪರೋಕ್ಷವಾಗಿ ಜಮೀರ್‌ಗೆ ಬುದ್ಧಿ ಹೇಳಿದ್ದಾರೆ.
೨೦೦೮ರ ಆಪರೇಷನ್ ಕಮಲದ ನಂತರ ನಡೆದ ೨೦ ಕ್ಕೂ ಹೆಚ್ಚು ಉಪಚುನಾವಣೆಯಲ್ಲಿ ಕಾಂಗ್ರೆಸ್ ಒಂದು ಸ್ಥಾನ ಗೆಲ್ಲದೆ ಮುಖಭಂಗ ಅನುಭವಿಸಿತು. ಅದರ ಹಿಂದೆ ಯಾವ ನಾಯಕರು ಇದ್ದರು, ಎಷ್ಟು ಹಣ ಪಡೆದಿದ್ದರೂ. ಯಾರೊಂದಿಗೆ ಒಪ್ಪಂದ ಮಾಡಿಕೊಂಡಿದ್ದರು ಎಂಬುದನ್ನು ಸನ್ಮಿತ್ರರು ತಿಳಿಯಲಿ. ಹೇಗೂ ಅವರ ಅಕ್ಕಪಕ್ಕದಲ್ಲೇ ಇದ್ದೀರಲ್ಲಾ ಕೇಳಿ ನೋಡಿ ಎಂದು ಪರೋಕ್ಷವಾಗಿ ಸಿದ್ಧರಾಮಯ್ಯ ಜತೆ ಇರುವ ಜಮೀರ್‌ಗೆ ಗೇಲಿ ಮಾಡಿದ್ದಾರೆ.
ಕ್ಯಾಬ್ ಚಾಲಕರ ರಕ್ಷಣೆಗೆ ಆಗ್ರಹ
ಕೆಎಸ್‌ಟಿಡಿಪಿ ಕ್ಯಾಬ್ ಪ್ರತಾಪ್ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಆರ್ಥಿಕ ಸಂಕಷ್ಟದಿಂದ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆಯೂ ಮತ್ತೊಂದು ಟ್ವೀಟ್ ಮಾಡಿರುವ ಕುಮಾರಸ್ವಾಮಿ ಅವರು ಕ್ಯಾಬ್ ಉದ್ಯಮದ ದರ ಸಮರ ಸರ್ಕಾರದ ನಿರ್ಲಕ್ಷ್ಯಕ್ಕೆ ಪ್ರತಾಪ್ ಜೀವ ಬಲಿಯಾಗಿದೆ ಎಂದು ದೂರಿದ್ದಾರೆ.
ಟ್ಯಾಕ್ಸಿ, ಕ್ಯಾಬ್‌ಗಳಿಗೆ ಸರ್ಕಾರ ೧ ಕಿ.ಮೀ.ಗೆ ೨೪ ರೂ. ನಿಗದಿ ಮಾಡಿದೆ. ಕೆಎಸ್‌ಟಿಡಿಪಿ ಚಾಲಕರು ಇದನ್ನು ಪಾಲಿಸುತ್ತಿದ್ದಾರೆ. ಖಾಸಗಿ ಕಂಪನಿಗಳು ನಿಯಮ ಗಾಳಿಗೆ ತೂರಿ ಗ್ರಾಹಕರನ್ನು ಆಕರ್ಷಿಸುತ್ತಿದ್ದಾರೆ. ಕೆಎಸ್‌ಟಿಡಿಪಿ ಚಾಲಕರು ಕೊರಗುತ್ತಿದ್ದಾರೆ ಎಂದು ಅವರು ಟ್ವೀಟ್‌ನಲ್ಲಿ ಹೇಳಿ, ಸರ್ಕಾರ ಕೂಡಲೇ ದರ ಸಮರದತ್ತ ಗಮನಹರಿಸಿ ಖಾಸಗಿ ಕಂಪನಿಗಳಿಗೆ ಎಚ್ಚರಿಕೆ ನೀಡಿ ಅಮಾಯಕ ಶ್ರಮಜೀವಿ ಕ್ಯಾಬ್ ಚಾಲಕರ ರಕ್ಷಣೆಗೆ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದ್ದಾರೆ..