ಜಮೀನು ಸರ್ವೇಗೆ ಲಂಚ ಪಡೆದಿದ್ದ ಭೂ ಮಾಪಕನಿಗೆ 4 ವರ್ಷ ಜೈಲು ಶಿಕ್ಷೆ ವಿಧಿಸಿದ ಕೋರ್ಟ್

ಬೀದರ್: ಸೆ.8: ಜಮೀನು ಸರ್ವೇ ಮಾಡಲು ಲಂಚ ಸ್ವೀಕರಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಆರೋಪಿತ ನೌಕರನಿಗೆ ಬೀದರ್ ಜಿಲ್ಲಾ ಮತ್ತು ಸತ್ರ ವಿಶೇಷ ನ್ಯಾಯಾಲಯ 4 ವರ್ಷ ಜೈಲು ಶಿಕ್ಷೆ, 50 ಸಾವಿರ ರೂ.ದಂಡ ವಿಧಿಸಿದೆ.

ಬಸವಕಲ್ಯಾಣದ ತಹಶೀಲ್ದಾರ್ ಕಚೇರಿಯಲ್ಲಿ ದ್ವಿತೀಯ ದರ್ಜೆ ಭೂ ಮಾಪಕರಾಗಿರುವ ಅಬ್ದುಲ್ ರಹಿಂ ಬಡೇಸಾಬ್ ಶಿಕ್ಷೆಗೆ ಗುರಿಯಾದ ನೌಕರ.

ಭಷ್ಟಾಚಾರ ತಡೆ ಕಾಯ್ದೆಯ ಸೆಕ್ಷನ್ 13(2) ಅಡಿ ಮೂರು ವರ್ಷ ಕಾಯಾಗೃಹ ಶಿಕ್ಷೆ ಮತ್ತು 25 ಸಾವಿರ ರೂ.ದಂಡ ವಿಧಿಸಿ ಕೋರ್ಟ್ ಆದೇಶಿಸಿದೆ.

ಜತೆಗೆ ಕಲಂ 7ರಡಿ ಒಂದು ವರ್ಷ ಶಿಕ್ಷೆ ಮತ್ತು 25 ಸಾವಿರ ದಂಡ ವಿಧಿಸಿದ್ದು, ದಂಡ ಭರಿಸಲು ತಪ್ಪಿದ್ದಲ್ಲಿ ಆರು ತಿಂಗಳು ಜೈಲು ಶಿಕ್ಷೆಗೆ ಒಳಗಾಗುವಂತೆ ನ್ಯಾಯಾಲಯ ಆದೇಶಿಸಿದೆ.

ಬಸವಕಲ್ಯಾಣ ತಾಲೂಕಿನ ಹೊನ್ನಾಳಿ ಗ್ರಾಮದ ದಿಲೀಪ್ ಕಿಶನರಾವ್ ಅವರಿಗೆ ಸೇರಿದ ಜಮೀನು ಉಜಳಂಬನಲ್ಲಿದ್ದು, ಜಮೀನು ಒಟ್ಟುಗೂಡಿಸಲು ಅರ್ಜಿ ಸಲ್ಲಿಸಿದ್ದರು. ಈ ಜಮೀನಿನ ಸರ್ವೇ ಮಾಡಲು ಅಬ್ದುಲ್ ರಹಿಂ ಬಡೇಸಾಬ್ ಲಂಚಕ್ಕೆ ಬೇಡಿಕೆ ಇಟ್ಟು 1500 ರೂ.ಹಣವನ್ನು 2010ರ ಫೆ.10ರಂದು ಪಡೆಯುವಾಗ ಲೋಕಾಯುಕ್ತ ಅಧಿಕಾರಿಗಳಿಗೆ ಸಿಕ್ಕಿ ಬಿದ್ದಿದ್ದರು.