
ಬಂಗಾರಪೇಟೆ:,ಆ,೧೨- ತಾಲ್ಲೂಕು ಸರ್ವೆ ಇಲಾಖೆಯಲ್ಲಿ ರೈತರಿಗೆ ಸಂಬಂಧಿಸಿದ ಜಮೀನುಗಳು ಸರ್ವೆ ವಿಚಾರದಲ್ಲಿ ಸಾಕಷ ವಿಳಂಬವಾಗುತ್ತಿದ್ದು, ಸರ್ವೆ ಅಧಿಕಾರಿಗಳು ದಾಖಲೆಗಳ ಹೆಸರಿನಲ್ಲಿ ರೈತರನ್ನು ತೀವ್ರ ಶೋಷಣೆ ಮಾಡಿ ಅವರಿಂದ ಅಕ್ರಮ ಸಂಭಾವನೆ ಪಡೆಯುತ್ತಿದ್ದು, ಈ ಬಗ್ಗೆ ಸಮಗ್ರವಾಗಿ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕೂಡಲೇ ರೈತರ ಜಮೀನುಗಳಿಗೆ ಸಂಬಂಧಿಸಿದ ಸರ್ವೆ ಕೆಲಸಗಳನ್ನು ಅತಿ ಜರೂರಾಗಿ ಮಾಡಿಕೊಡಬೇಕು.
ಗ್ರಾಮಗಳಿಂದ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ರೈತರ ನಕಾಶೆಯಲ್ಲಿರುವ ಸಾರ್ವಜನಿಕ ರಸ್ತೆಯು ಒತ್ತುವರಿಯಾಗಿದ್ದು, ಇದನ್ನು ಕೂಡಲೇ ತೆರವುಗೊಳಿಸಿ ರಸ್ತೆ ಸಂಪರ್ಕ ಕಲ್ಪಿಸಬೇಕು ಎಂದು ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ, ತಹಸೀಲ್ದಾರ್ ರಶ್ಮಿ ಅವರ ಮುಖಾಂತರ ಉಪವಿಭಾಗಾಧಿಕಾರಿಗಳಿಗೆ ಮನವಿ ಸಲ್ಲಿಸಿ ಒತ್ತಾಯಿಸಲಾಯಿತು.
ತಾಲ್ಲೂಕು ಕಛೇರಿ ಮುಂಭಾಗ ಪ್ರತಿಭಟನೆ ನಡೆಸಿ, ಜಿಲ್ಲಾಧ್ಯಕ್ಷ ಟಿ.ಎನ್.ರಾಮೇಗೌಡ ಮಾತನಾಡಿ, ಬಂಗಾರಪೇಟೆ ತಾಲ್ಲೂಕು ಕಚೇರಿಯಲ್ಲಿ ಈಗಾಗಲೇ ಸಾಗುವಳಿ ಚೀಟಿಯನ್ನು ಪಡೆದಿರುವ ರೈತರನ್ನು ಪರಿಶೀಲಿಸಿ ಅರ್ಹ ರೈತರಿಗೆ ಕೂಡಲೇ ಪಹಣಿಯನ್ನು ವಿತರಣೆ ಮಾಡಬೇಕು, ಜಮೀನು ಪಡೆಯಲು ಫಾರಂ ನಂ.೫೩ ಅರ್ಜಿ ಸಲ್ಲಿಕೆ ಮಾಡಿರುವ ಎಲ್ಲಾ ಭೂ ರಹಿತರಿಗೆ ಕೂಡಲೇ ಭೂಮಿ ಮಂಜೂರು ಮಾಡಬೇಕು, ತಾಲ್ಲೂಕಿನಾದ್ಯಂತ ಒತ್ತುವರಿಯಾಗಿರುವ ಸರ್ಕಾರಿ ಕೆರೆ, ಗುಂಡುತೋಪು, ರಾಜಕಾಲುವೆ, ಗೋಮಾಳ ಹಾಗೂ ಪಟ್ಟಣದಲ್ಲಿ ಪ್ರಭಾವಿ ವ್ಯಕ್ತಿಗಳು ಒತ್ತುವರಿ ಮಾಡಿಕೊಂಡಿರುವ ಜಮೀನುಗಳು, ರಾಜಕಾಲುವೆ, ರಾಜಕಾಲುವೆಗಳ ಮೇಲೆ ಮನೆಗಳು ಮತ್ತು ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿಕೊಂಡಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಕೂಡಲೇ ಒತ್ತುವರಿ ತೆರವು ಗೊಳಿಸಬೇಕು.
ತಾಲ್ಲೂಕಿನ ಗಡಿ ಭಾಗದಲ್ಲಿರುವ ಕಾಮಸಮುದ್ರ, ಬೂದಿಕೋಟೆ ಹೋಬಳಿ ವ್ಯಾಪ್ತಿಗೆ ಸೇರುವ ಗ್ರಾಮಗಳಲ್ಲಿ ಕಾಡಾನೆಗಳ ಹಾವಳಿ ಹೆಚ್ಚಾಗಿದ್ದು, ಆನೆಗಳ ದಾಳಿಯಿಂದ ರೈತರು ಕೃಷಿ ಚಟುವಟಿಕೆ ಮಾಡಲು ಆಗುತ್ತಿಲ್ಲ. ಹಾಗೂ ಮಾಡಿದ ಬೆಳೆಗಳು ಆನೆಗಳ ದಾಳಿಗೆ ತುತ್ತಾಗುತ್ತಿವೆ. ಆನೆಗಳ ನಿಯಂತ್ರಣಕ್ಕೆ ವಿಶೇಷ ಕಾರಿಡಾರ್ ಯೋಜನೆ ರೂಪಿಸಬೇಕು. ಹಾಗೂ ಆನೆಗಳ ದಾಳಿಯಿಂದ ಮೃತಪಟ್ಟ ಕುಟುಂಬಗಳಿಗೆ ಕೂಡಲೇ ಪರಿಹಾರ ವಿತರಣೆ ಮಾಡಬೇಕು ಬೇಡಿಕೆಗಳನ್ನಿಟ್ಟರು.
ರಾಜ್ಯ ಕಾರ್ಯದರ್ಶಿ ಎಸ್.ಜಿ.ವೀರಭದ್ರಸ್ವಾಮಿ, ಜಿಲ್ಲಾ ಕಾರ್ಯದರ್ಶಿ ರಾಮಸಂದ್ರ ರವಿ, ತಾಲ್ಲೂಕು ಅಧ್ಯಕ್ಷ ಮುರಳಿ, ತಾಲ್ಲೂಕು ಸಂಚಾಲಕ ವಿ.ರಮೇಶ್, ಮುನಿವೆಂಕಟಪ್ಪ, ಕೆ.ಪಿ.ನಾರಾಯಣಸ್ವಾಮಿ, ವೆಂಕಟೇಶಪ್ಪ, ವಿ.ಮಂಜುನಾಥ್, ಪಿ.ಮುನಿವೆಂಕಟಪ್ಪ, ಉದಯ್‌ಕುಮಾರ್, ಯಲ್ಲಪ್ಪ, ರಾಮಕೃಷ್ಣ, ಶ್ರೀನಿವಾಸ.ಎನ್, ವೆಂಕಟಮುನಿಯಪ್ಪ, ಶ್ರೀನಿವಾಸಪ್ಪ, ಪ್ರೇಮ್‌ಕುಮಾರ್.ಎಸ್, ಕೆ.ಎಂ.ನಾರಾಯಣಸ್ವಾಮಿ ಸೇರಿದಂತೆ ಇತರರು ಉಪಸ್ಥಿತರಿದ್ದರು.