ಜಮೀನು ಮಂಜೂರು ಮಾಡದಿರಲು ಒತ್ತಾಯಿಸಿ ಮನವಿ

ಬ್ಯಾಡಗಿ,ಸೆ.13: ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿ ಸಲ್ಲಿಕೆಯಾಗಿರುವ ಬ್ಯಾಡಗಿ ತಾಲೂಕಿನ ದುಮ್ಮಿಹಾಳ ಗ್ರಾಮದ ಸರ್ಕಾರಿ ಪಡಾದಲ್ಲಿ ಅಕ್ರಮ ಸಕ್ರಮ ಯೋಜನೆಯಡಿ ಫಲಾನುಭವಿಗಳ ಹೆಸರಲ್ಲಿ ಜಮೀನನ್ನು ಮಂಜೂರು ಮಾಡಬಾರದೆಂದು ಒತ್ತಾಯಿಸಿ ಗ್ರಾಮಸ್ಥರು ತಾಲೂಕು ಕಚೇರಿಯ ಮುಂದೆ ಸೋಮವಾರ ಪ್ರತಿಭಟನೆ ನಡೆಸಿ ತಹಶೀಲ್ದಾರ ತಿಪ್ಪೇಸ್ವಾಮಿ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರ ಪರವಾಗಿ ಮಾತನಾಡಿದ ಕಾಂಗ್ರೆಸ್ ಮುಖಂಡರಾದ ನ್ಯಾಯವಾದಿ ಡಿ.ಎಚ್ ಬುಡ್ಡನಗೌಡ್ರ ಅವರು, ಈಗಾಗಲೇ ದುಮ್ಮಿಹಾಳ ಗ್ರಾಮದಲ್ಲಿ ಭೂರಹಿತ ಬಡಜನರು ಈ ಹಿಂದಿನಿಂದ ಸರಕಾರಿ ಜಮೀನುಗಳನ್ನು ಸಾಗುವಳಿ ಮಾಡಿಕೊಂಡು ಬಂದಿದ್ದಾರೆ. ಹಿಂದಿನ ಸರ್ಕಾರದ ಅವಧಿಯಲ್ಲಿ ಅಕ್ರಮ ಸಕ್ರಮ ಸಮಿತಿಯ ಮೂಲಕ ಗ್ರಾಮದ 64 ಜನರಿಗೆ ಜಮೀನು ಮಂಜೂರು ಮಾಡಿ ಪಟ್ಟಾ ನೀಡಲಾಗಿತ್ತು. ಇನ್ನು ಕೆಲವರಿಗೆ ದಾಖಲೆಗಳ ಪರಿಶೀಲನೆ ಹಿನ್ನಲೆಯಲ್ಲಿ ತಡೆಯಾಗಿತ್ತು. ಅವರಿಗೂ ಸಹ ಸಾಗುವಳಿ ಮಾಡುತ್ತಿರುವ ಜಮೀನನ್ನು ಮಂಜೂರು ಮಾಡುವಂತೆ ಆಗ್ರಹ ಪಡಿಸಿದರು.
ಅನರ್ಹರಿಗೆ ಜಮೀನು ಮಂಜೂರು:
ಈಗಾಗಲೇ ದುಮ್ಮಿಹಾಳ ಗ್ರಾಮದಲ್ಲಿ ಕೆಲವೊಬ್ಬರು ಅಕ್ರಮ ಸಕ್ರಮ ಸಮಿತಿಗೆ ಫಾರ್ಮ ನಂ 57 ರಲ್ಲಿ ಅರ್ಜಿಗಳನ್ನು ಸಲ್ಲಿಸಿರುವುದಿಲ್ಲ. ಅಂಥವರಿಗೂ ಕೂಡಾ ಪಟ್ಟಾ ನೀಡಿ ಉತಾರ ನೀಡಲಾಗಿದೆ. ಇದೇ ವಿಷಯವಾಗಿ ಈಗಾಗಲೇ ಲೋಕಾಯುಕ್ತ ಕಛೇರಿಗಳಲ್ಲಿ ದೂರುಗಳನ್ನು ಸಲ್ಲಿಸಲಾಗಿದ್ದರೂ ಕೂಡಾ ಜಮೀನು ಮಂಜೂರು ಮಾಡುತ್ತಿರುವುದನ್ನು ಖಂಡನಾರ್ಹವಾಗಿದೆ. ಈ ಕೂಡಲೇ ತಹಶೀಲ್ದಾರರು ಹಾಗೂ ಜಿಲ್ಲಾಧಿಕಾರಿಗಳು ಸದರ ಜಮೀನುಗಳಲ್ಲಿ ಮಂಜೂರಾತಿ ತಡೆ ಹಿಡಿಯಬೇಕು. ಒಂದು ವೇಳೆ ಜಮೀನು ಮಂಜೂರು ಮಾಡಿದಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದ್ದಾರೆ.
ಗ್ರಾಪಂ ಸದಸ್ಯೆ ಸುಮಿತ್ರಮ್ಮ ನವಲೆ ಮಾತನಾಡಿ, ದುಮ್ಮಿಹಾಳ ಗ್ರಾಮದ ಸರ್ಕಾರಿ ಜಮೀನಿಗೆ ಸಂಬಂಧಿಸಿದಂತೆ 37ಜನ ಸಾಗುವಳಿ ರೈತರಿಂದ ಧಾರವಾಡದ ಉಚ್ಚ ನ್ಯಾಯಾಲಯದಲ್ಲಿ ರಿಟ್ ಅರ್ಜಿಗಳನ್ನು ಸಲ್ಲಿಸಲಾಗಿದೆ. ಸದರ ರಿಟ್ ಅರ್ಜಿಗಳ ವಿಷಯ ಮುಕ್ತಾಯವಾಗುವ ತನಕ ದುಮ್ಮಿಹಾಳ ಗ್ರಾಮದ ಜಮೀನುಗಳ ಮಂಜೂರಾತಿಗೆ ಕ್ರಮ ಕೈಗೊಳ್ಳದಂತೆ ತಹಶೀಲ್ದಾರ ಅವರನ್ನು ಒತ್ತಾಯಿಸಿದರಲ್ಲದೇ, ಸದರಿ ಜಮೀನುಗಳಲ್ಲಿ ಅಕ್ರಮವಾಗಿ ಪಟ್ಟಾ ನೀಡಿರುವುದನ್ನು ತನಿಖೆ ಮಾಡಿ ತಪ್ಪಿತಸ್ಥರ ಮೇಲೆ ಕಾನೂನು ಕ್ರಮ ಕೈಕೊಳ್ಳುವಂತೆ ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಿಗೆ ಬೆಂಬಲ ವ್ಯಕ್ತಪಡಿಸಿ ತಾಲೂಕಾ ಕಾಂಗ್ರೆಸ್ ಪಕ್ಷದ ಕಾರ್ಯದರ್ಶಿ ರಮೇಶ್ ಸುತ್ತಕೋಟಿ, ಗ್ರಾಪಂ ಸದಸ್ಯ ಬಾಷಾಸಾಬ ದೊಡ್ಡಮನಿ, ಗ್ರಾಮಸ್ಥರಾದ ಜಯಮ್ಮ ಅಂಗರಗಟ್ಟಿ, ಕಮಲಮ್ಮಹಾವೇರಿ, ಸುಶೀಲಮ್ಮ ವಾಸನದ, ವಿನೋದಾ, ಸರೋಜಾ, ಶಶಿಕಲಾ, ನಂದಾ, ಶಾಂತಮ್ಮ, ಸೋಮೇಶ್, ಬಸವರಾಜ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.