ಜಮೀನು ಅಡವಿಟ್ಟು ಜನರ ಸಂಕಷ್ಟಕ್ಕೆ ಸ್ಪಂದಿಸಿದ ರೈತ


ಲಕ್ಷ್ಮೇಶ್ವರ,ಜೂ.1: ತಾನೇ ಕಷ್ಟದಲ್ಲಿರುವ ಸಂದರ್ಭದಲ್ಲಿ ತಾಲೂಕಿನ ಕುಂದ್ರಳ್ಳಿ ಗ್ರಾಮದ ಯುವ ರೈತನೋರ್ವ ಜಮೀನನ್ನು ಅಡವಿಟ್ಟು ಸಂಕಷ್ಟದಲ್ಲಿರುವವರಿಗೆ ಸಹಾಯಹಸ್ತ ಚಾಚಿ ಮಾನವೀಯತೆ ಮೆರೆದಿದ್ದಾನೆ.
ಲಕ್ಷ್ಮೇಶ್ವರ ತಾಲೂಕಿನ ಕುದ್ರಳ್ಳಿ ಗ್ರಾಮದ ರಮೇಶ್ ಮುಂದಿನಮನಿ ತನ್ನ ಎರಡು ಎಕರೆ ಜಮೀನಿನನ್ನೇ ಅಡವಿಟ್ಟು ಲಾಕ್‍ಡೌನ್ ಸಂಕಷ್ಟಕ್ಕೆ ಸಿಲುಕಿರುವ ಜನರಿಗೆ ಜೀವನಾವಶ್ಯಕ ವಸ್ತುಗಳ ಕಿಟ್‍ಗಳನ್ನು ವಿತರಿಸುವ ಮೂಲಕ ಸಹಾಯ ಮಾಡಿದ್ದಾನೆ.
ರಮೇಶ್ ಮುಂದಿನಮನಿ ಎರಡು ಎಕರೆ ಜಮೀನನು 80 ಸಾವಿರಕ್ಕೆ ಅಡವಿಟ್ಟು ಅದರಲ್ಲಿನ 40 ಸಾವಿರವನ್ನು ಗ್ರಾಮದ ಬಡವರು, ನಿರ್ಗತಿಕರಿಗೆ, ವಿಧವೆಯರು, ಹಾಗೂ ಅಂಗವಿಕಲರಿಗೆ ಸದ್ದಿಲ್ಲದೆ 200 ಕಿಟ್ ಗಳನ್ನು ವಿತರಿಸಿ ಹಸಿದವರ ನೆರವಿಗೆ ಧಾವಿಸುವ ಮೂಲಕ ಸೇವೆ ಮಾಡಿದ್ದು ಅವರ ಈ ಕಾರ್ಯವನ್ನು ಎಲ್ಲರೂ ಮೆಚ್ಚಿ ಶ್ಲ್ಯಾಘಿಸಿದ್ದಾರೆ.
ರಮೇಶ್ ಮುಂದಿನಮನಿ ಪ್ರತಿಕ್ರಿಯೆ ನೀಡಿ ತಾನೂ ಕೂಡ ಬಡತನ, ಹಸಿವು ಅನುಭವಿಸಿದ್ದು ಇಂತಹ ಸಂಕಷ್ಟದ ಸಂದರ್ಭದಲ್ಲಿ ನೊಂದವರ ನೋವು ತಿಳಿದು ಅಲ್ಪ ಸೇವೆ ಮಾಡಿದ್ದೇನೆಂದು ತಿಳಿಸಿದ್ದಾರೆ. ಬಟ್ಟೂರು ಗ್ರಾಪಂ ಮಾಜಿ ಉಪಾಧ್ಯಕ್ಷ ನಾಗರಾಜ್ ಪಾಟೀಲ್ ರಮೇಶ್‍ನ ಈ ಕಾರ್ಯ ಇತರರಿಗೆ ಮಾದರಿಯಾಗಿದೆ ಎಂದು ಶ್ಲ್ಯಾಘಿಸಿದ್ದಾರೆ.