ಜಮೀನಿನಲ್ಲಿ ಬೋನಿಗೆ ಬಿದ್ದ ಚಿರತೆ

ಮದ್ದೂರು : ಏ.10:- ಜಮೀನೊಂದರಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳಿಟ್ಟಿದ್ದ ಬೋನಿಗೆ ಚಿರತೆಯೊಂದು ಸೆರೆಯಾಗಿರುವ ಘಟನೆ ತಾಲೂಕಿನ ಕೊತ್ತನಹಳ್ಳಿ ಗ್ರಾಮದಲ್ಲಿ ಭಾನುವಾರ ಜರುಗಿದೆ.
ತಾಲೂಕಿನ ಕೊತ್ತನಹಳ್ಳಿ ಗ್ರಾಮದ ಶಂಕರ್ ರವರ ಫಾರಂ ಹೌಸ್‍ನಲ್ಲಿ ಕಳೆದ ಹಲವು ದಿನಗಳ ಹಿಂದೆ ಇಟ್ಟಿದ್ದ ಬೋನಿಗೆ ಸುಮಾರು 6 ವರ್ಷದ ಗಂಡು ಚಿರತೆ ಸೆರೆಸಿಕ್ಕಿದ್ದು ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಳೆದ ಹಲವು ದಿನಗಳ ಹಿಂದೆ ಈ ವ್ಯಾಪ್ತಿಯ ಹಲವೆಡೆ ಚಿರತೆ ಕಂಡು ಬರುತ್ತಿರುವ ಹಿನ್ನೆಲೆಯಲ್ಲಿ ಸ್ಥಳೀಯ ಗ್ರಾಮಸ್ಥರ ಒತ್ತಾಯದ ಮೇರೆಗೆ ಬೋನ್ ಇಟ್ಟಿದ್ದು ಎಂದಿನಂತೆ ಜಮೀನಿಗೆ ತೆರಳಿದ ರೈತರು ಬೋನಿನಲ್ಲಿ ಚಿರತೆ ಸೆರೆಸಿಕ್ಕಿರುವ ವಿಷಯವನ್ನು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಸುದ್ಧಿ ಮುಟ್ಟಿಸಿದ್ದಾರೆ.
ಸ್ಥಳಕ್ಕಾಗಮಿಸಿದ ಉಪ ವಲಯ ಅರಣ್ಯಾಧಿಕಾರಿ ರತ್ನಾಕರ್, ಅರಣ್ಯ ಪಾಲಕ ಸುದರ್ಶನ್ ಸೆರೆಸಿಕ್ಕ ಚಿರತೆಯ ಆರೋಗ್ಯ ತಪಾಸಣೆ ನಡೆಸಿ ಬಳಿಕ ಬಂಡೀಪುರ ಅಭಯಾರಣ್ಯಕ್ಕೆ ಬಿಡುವುದಾಗಿ ಪತ್ರಿಕೆಗೆ ತಿಳಿಸಿದ್ದಾರೆ.
ಚಿರತೆ ಸೆರೆಸಿಕ್ಕ ವಿಷಯ ಅರಿತ ಸುತ್ತಮುತ್ತಲಿನ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ ಚಿರತೆ ವೀಕ್ಷಣೆ ಮಾಡುತ್ತಿದ್ದರಲ್ಲದೇ ತಮ್ಮ ಮೊಬೈಲ್‍ನಲ್ಲಿ ಕ್ಲಿಕ್ಕಿಸಿಕೊಳ್ಳಲು ಮುಗಿಬಿದ್ದ ಘಟನೆ ಜರುಗಿತಲ್ಲದೇ ಸ್ಥಳೀಯ ಪೊಲೀಸರು ಜನರನ್ನು ನಿಯಂತ್ರಿಸಲು ಹರಸಾಹಸ ಪಡಬೇಕಾದ ಸ್ಥಿತಿ ನಿರ್ಮಾಣವಾಯಿತು.