ಜಮೀನಿನಲ್ಲಿ ಜಿಂಕೆ ಬೇಟೆ: ಇಬ್ಬರ ಬಂಧನ

ಸಂಜೆವಾಣಿ ವಾರ್ತೆ
ಹನೂರು ಜು 20:- ಅಕ್ರಮವಾಗಿ ಜಿಂಕೆಯನ್ನು ಬೇಟೆಯಾಡಿ ಅದರ ಮಾಂಸವನ್ನು ಬೇರ್ಪಡಿಸುತ್ತಿದ್ದಾಗ ಕೃಷ್ಣಮೂರ್ತಿ ಮತ್ತು ಅಜಿತ್ ಕುಮಾರ್ ಎಂಬ ವ್ಯಕ್ತಿಗಳಿಬ್ಬರನ್ನು ಅರಣ್ಯ ಅಧಿಕಾರಿಗಳು ಬಂಧಿಸಿದ್ದು ಮತ್ತೊಬ್ಬ ವ್ಯಕ್ತಿ ಪರಾರಿಯಾಗಿದ್ದಾನೆ.
ತಾಲೂಕಿನ ರಾಮಪುರ ಗ್ರಾಮದ ಕೃಷ್ಣಮೂರ್ತಿ ಅಲಿಯಾಸ್ ಮುತ್ತು, ಬಾಲಕ ಅಜಿತ್ ಕುಮಾರ್.ಕೆ ಇಬ್ಬರು ವ್ಯಕ್ತಿಗಳನ್ನು ಬಂಧಿಸಿದ್ದು ಮತ್ತೊಬ್ಬ ಗೆಜ್ಜಲನತ್ತ ಗ್ರಾಮದ ಆರ್ಮುಗಂ ಅಲಿಯಾಸ್ ಆರ್ ಕುಟ್ಟಿ ಆರೋಪಿ ಪರಾರಿಯಾಗಿದ್ದಾನೆ. ಕೌದಳ್ಳಿ ವಲಯದ ರಾಮಪುರ ಶಾಖೆಯ ಮುತ್ತುಶೆಟ್ಟಿಯೂರು ಗಸ್ತಿನ ವ್ಯಾಪ್ತಿಗೆ ಬರುವ ರಾಮಪುರ ಗ್ರಾಮದ ಸರ್ವೆ ನಂ. 105/1 ಮತ್ತು 105/2 ರ ಜಮೀನಿನಲ್ಲಿ ಕಾಡು ಪ್ರಾಣಿಯಾದ ಜಿಂಕೆಯನ್ನು ಬೇಟೆಯಾಡಿ ಮಾಂಸವನ್ನು ಸಾಗಾಣಿಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ದೊರಕಿದೆ.
ರಾಮಾಪುರ ವನ್ಯಜೀವಿ ವಲಯ ಕೌದಳ್ಳಿ ವಲಯ ಅರಣ್ಯಾಧಿಕಾರಿ ಸುಂದರ್ ಎಂ, ಉಪ ವಲಯ ಅರಣ್ಯಾಧಿಕಾರಿ ಮಧುಕುಮಾರ್ ಕೆಎಸ್, ಮತ್ತು ಗಸ್ತು ಅರಣ್ಯ ಪಾಲಕರಾದ ಬಿಲ್ಲಪ್ಪ ಹೆಚ್, ಗಣೇಶ್ ಪ್ರಸಾದ್ ಎಸ್, ಬೀರಪ್ಪ ಹಳ್ಳಿ ಹಾಗೂ ಕಳ್ಳಬೇಟೆ ತಡೆ ಶಿಬಿರದ ಸಿಬ್ಬಂದಿಗಳ ತಂಡ ದಾಳಿ ನಡೆಸಿದ್ದಾರೆ.
ಈ ವೇಳೆ ಕೃಷ್ಣಮೂರ್ತಿ ಅಲಿಯಾಸ್ ಮುತ್ತು ಬಿನ್ ಕಾಳಿಯಪ್ಪ, ಬಾಲಕ ಅಜಿತ್ ಕುಮಾರ್ ಕೆ ಬಿನ್ ಕೃಷ್ಣಮೂರ್ತಿ ಅಲಿಯಾಸ್ ಮುತ್ತು ಇವರನ್ನು ಬಂಧಿಸಿದ್ದು ಇವರಿಂದ ಜಿಂಕೆಯ ಮಾಂಸ ಉರುಳುಗಳು ಹಾಗೂ ಕೃತ್ಯಕ್ಕೆ ಬಳಸಿದ ಒಂದು ದ್ವಿಚಕ್ರವಾಹನವನ್ನು ವಶಪಡಿಸಿಕೊಳ್ಳಲಾಗಿದೆ.
ತಲೆಮರೆಸಿಕೊಂಡಿರುವ ಪ್ರಮುಖ ಆರೋಪಿ ಗೆಜ್ಜಲನತ್ತ ಗ್ರಾಮದ ಆರ್ಮುಗಂ ಅಲಿಯಾಸ್ ಆರ್ ಕುಟ್ಟಿ ಬಿನ್ ಮಾದಪ್ಪ ಎಂಬ ವ್ಯಕ್ತಿಯನ್ನು ಬಂಧಿಸಲು ಮುಂದಿನ ಕ್ರಮ ಕೈಗೊಳ್ಳಲಾಗಿದೆ.