ಜಮೀನಿನಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಮಾದೇಶ್ ಬಂಧನ

ಹನೂರು: ನ.02- ಕಾಡಂಚಿನ ಗ್ರಾಮಗಳ ಜಮೀನುಗಳಲ್ಲಿ ವಿವಿಧ ಬೆಳೆಗಳ ಮಧ್ಯೆ ಗಾಂಜಾ ಗಿಡಗಳನ್ನು ಬೆಳೆಯುತ್ತಿದ್ದವರ ಹೆಡಮುರಿ ಕಟ್ಟುವಲ್ಲಿ ಮಲೆಮಹದೇಶ್ವರ ಬೆಟ್ಟ ಪೊಲೀಸರು ಯಶಸ್ವಿಯಾಗಿದ್ದಾರೆ.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದಿವ್ಯ ಸಾರಾ ಥಾಮಸ್ ಎಸ್ಪಿ ಆಗಿ ಅಧಿಕಾರ ವಹಿಸಿಕೊಂಡ ನಂತರ ಅಕ್ರಮ ಗಾಂಜಾ ಬೆಳೆಯುವವರು ಮತ್ತು ಮಾರಾಟ ಮಾಡುವವರನ್ನು ಪತ್ತೆ ಹಚ್ಚಿ ಬಂಧಿಸುವ ನಿಟ್ಟಿನಲ್ಲಿ ಸೂಚನೆ ನೀಡಿರುವುದು ಮತ್ತು ಪ್ರಕರಣಗಳನ್ನು ಪತ್ತೆ ಹಚ್ಚುವ ಪೊಲೀಸರ ಕಾರ್ಯವನ್ನು ಶ್ಲಾಘಿಸುತ್ತಿರುವುದು ಸೇರಿದಂತೆ ನೂತನ ಡಿವೈಎಸ್‍ಪಿ ನಾಗರಾಜು ಅವರ ಮಾರ್ಗದರ್ಶನ ಹಾಗೂ ಮ.ಮ.ಬೆಟ್ಟ ಪೊಲೀಸ್ ಇನ್ಸ್‍ಪೆಕ್ಟರ್ ಜಿ.ಎನ್.ರಮೇಶ್ ಅವರ ನೇತೃತ್ವದಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವ ಕಾರ್ಯದಲ್ಲಿ ತೊಡಗಿರುವುದು. ಈ ಭಾಗದಲ್ಲಿ ಗಾಂಜಾ ಪ್ರಕರಣಗಳಲ್ಲಿ ಭಾಗಿಯಾಗಿರುವವರ ಎದೆಯಲ್ಲಿ ನಡುಕ ಶುರುವಾಗುವಂತೆ ಮಾಡಿದೆ.
ಮಲೆಮಹದೇಶ್ವರ ಬೆಟ್ಟ ಗ್ರಾ.ಪಂ.ವ್ಯಾಪ್ತಿಯ ಪಡಸಲನತ್ತ ಗ್ರಾಮದ ಜಮೀನೊಂದರಲ್ಲಿ ಅಕ್ರಮವಾಗಿ ಗಾಂಜಾ ಬೆಳೆದಿದ್ದ ಮಾದೇಶ್ ಎಂಬುವನನ್ನು ಬಂಧಿಸಿ 7 ಕೆ.ಜಿ.500 ಗ್ರಾಂ. ಗಾಂಜಾವನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‍ಪಿ ನಾಗರಾಜು ಅವರ ನೇತೃತ್ವದಲ್ಲಿ ಇನ್ಸ್‍ಪೆಕ್ಟರ್ ಜಿ.ಎನ್.ರಮೇಶ್ ಹಾಗೂ ಸಿಬ್ಬಂದಿಗಳ ತಂಡ ಈ ಕಾಡಂಚಿನ ಗ್ರಾಮದಲ್ಲಿ ಗಾಂಜಾ ಬೆಳೆಯುತ್ತಿದ್ದ ವ್ಯಕ್ತಿಯನ್ನು ಬಂಧಿಸಿದ್ದಾರೆ.
ದಾಳಿಯಲ್ಲಿ ಪೊಲೀಸ್ ಪೇದೆಗಳಾದ ರಾಚಪ್ಪ, ಪ್ರಭು, ಬಾಬು, ಹಕ್ಕಲ್, ಪರಶಿವ, ಫಾರೆಸ್ಟ್ ಗಾರ್ಡ್ ಮಲ್ಲಿಕಾರ್ಜುನ, ಗ್ರಾ.ಪಂ.ಮಹದೇವಸ್ವಾಮಿ ಭಾಗಿಯಾಗಿದ್ದರು.
ಕಾಡಂಚಿನ ಜಮೀನುಗಳೇ ಗಾಂಜಾ ಬೆಳೆಯಲು ವರದಾನ: ಗಾಂಜಾ ಪ್ರಕರಣಗಳು ಆಗಿಂದಾಗೆ ರಾಜ್ಯದಲ್ಲಿ ಸದ್ದು ಮಾಡುತ್ತಿರುವುದು ಸರ್ವೇ ಸಾಮಾನ್ಯವಾಗಿದೆ. ಗಾಂಜಾ ಬೆಳೆಯಲು ಕಾಡಂಚಿನ ಗ್ರಾಮಗಳ ಜಮೀನಿಗಳು ಪೂರಕವಾಗಿದ್ದು, ಜನ ಜಂಗುಳಿ ಇಲ್ಲದ ನಿರ್ಜನ ಪ್ರದೇಶಗಳಾಗಿರುವುದರಿಂದ ವರದಾನವಾಗಿದೆ. ಈ ಹಿನ್ನಲೆಯಲ್ಲಿ ಇಂತಹ ಪ್ರಕರಣಗಳನ್ನು ಪತ್ತೆ ಹಚ್ಚುವುದು ಪೊಲೀಸರಿಗೆ ಸುಲಭವಾದ ಕೆಲಸವಲ್ಲ. ಈ ಹಿನ್ನಲೆಯಲ್ಲಿ ನೋಡಿದರೆ ಹನೂರು, ರಾಮಾಪುರ, ಮಲೆಮಹದೇಶ್ವರ ಬೆಟ್ಟ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬಹುತೇಕ ಗ್ರಾಮಗಳು ಕಾಡಂಚಿನಿಂದ ಕೂಡಿವೆ. ಇಂತಹ ಕುಗ್ರಾಮಗಳು ಹಾಗೂ ಹಾಡಿಗಳಿಗೆ ಕಾಡುಮೇಡು ಹತ್ತಿ ಪತ್ತೆ ಹಚ್ಚುವುದು ಸಾಹಸದ ಕೆಲಸ ಎಂದರೆ ತಪ್ಪಗಲಾರದು. ಈ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಸ್ಥಳಿಯರ ಸಹಕಾರ ಅಗತ್ಯವಿದ್ದು ಅವರ ವಿಶ್ವಾಸವನ್ನು ಸಂಪಾದಿಸಿ ಇಂತಹ ಪ್ರಕರಣಗಳನ್ನು ಹೊರಕ್ಕೆ ತರಲಾಗುತ್ತಿರುವುದು ಆರೋಗ್ಯಕರ ಸಮಾಜದ ನಿರ್ಮಾಣಕ್ಕೆ ದಾರಿಯಾಗಿದೆ. ಈ ದಿಸೆಯಲ್ಲಿ ಪೊಲೀಸ್ ಇಲಾಖೆಯ ಕಾರ್ಯ ಅಕ್ಷರಶಃ ಶ್ಲಾಘನೀಯ.