ಜಮಿಸ್ತಾನಪುರ ಅರಣ್ಯ ಪ್ರದೇಶದಲ್ಲಿ ಅಕಸ್ಮಿಕ ಬೆಂಕಿ

ಬೀದರ:ಎ.1: ಆಕಸ್ಮಿಕ ಬೆಂಕಿ ತಗುಲಿ ಬೀದರ್ ತಾಲ್ಲೂಕಿನ ಜಮಿಸ್ತಾನಪುರ ಹಿಂದುಗಡೆಯ ಅರಣ್ಯ ಪ್ರದೇಶದಲ್ಲಿ ಮರ ಗಿಡಗಳಿಗೆ ಹಾನಿಯಾಗಿದೆ.

ಅರಣ್ಯ ಪ್ರದೇಶದಲ್ಲಿ ದಟ್ಟ ಹೊಗೆ ಕಾಣಿಸಿಕೊಂಡ ಪ್ರಯುಕ್ತ ಸಾರ್ವಜನಿಕರೊಬ್ಬರು ಅಗ್ನಿಶಾಮಕ ದಳಕ್ಕೆ ಮಾಹಿತಿ ಮುಟ್ಟಿಸಿದರು. ತಕ್ಷಣ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ನೆರವಿನೊಂದಿಗೆ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು.

ಎರಡು ಎಕರೆ ಪ್ರದೇಶದಲ್ಲಿ ಬೆಂಕಿ ವ್ಯಾಪಿಸಿಕೊಂಡಿತು. ದಾರಿಯಲ್ಲಿ ಗಿಡ ಗಂಟಿಗಳು ಇದ್ದ ಕಾರಣ ಅಗ್ನಿಶಾಮಕ ವಾಹನಕ್ಕೆ ಬೆಂಕಿ ತಗುಲಿದ ಸ್ಥಳದವರೆಗೂ ಹೋಗಲು ಸಾಧ್ಯವಾಗಲಿಲ್ಲ. ಸಾಧ್ಯವಾದ ಪ್ರದೇಶದಲ್ಲಿ ಅಗ್ನಿ ಶಾಮಕ ಸಿಬ್ಬಂದಿ ನೀರು ಚಿಮ್ಮಿಸಿ ಬೆಂಕಿ ನಿಯಂತ್ರಿಸಿದರು. ಉಳಿದೆಡೆ ಅರಣ್ಯ ಇಲಾಖೆ ಸಿಬ್ಬಂದಿಯೊಂದಿಗೆ ಗಿಡದ ತಪ್ಪಲುಗಳನ್ನು ಬಳಸಿ ಬೆಂಕಿ ಆರಿಸಿದರು.
ಪ್ರಮುಖ ಅಗ್ನಿಶಾಮಕ ರವಿ, ಚಾಲಕ ನಾರಂದ ಬಸಪ್ಪ, ಅಗ್ನಿ ಶಾಮಕರಾದ ಶ್ರೀಕಾಂತ ಮೇತ್ರೆ, ರಂಜೀತ್ ಹಾಗೂ ಅರಣ್ಯ ಇಲಾಖೆಯ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.