ಜಪಾನ್ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದ ಉ.ಕೊರಿಯಾ

ಟೋಕಿಯೋ, ಮಾ.೨೫- ಸತತ ಕ್ಷಿಪಣಿ ಪರೀಕ್ಷೆಗಳ ಮೂಲಕ ನೆರೆಯ ರಾಷ್ಟ್ರಗಳ ನಿದ್ದೆಗೆಡಿಸಿರುವ ಕಿಮ್ ಜಾಂಗ್ ಉನ್ ನೇತೃತ್ವದ ಉತ್ತರ ಕೊರಿಯಾವು ಇದೀಗ ಜಪಾನ್ ಸಮುದ್ರದಲ್ಲಿ ಎರಡು ಬ್ಯಾಲೆಸ್ಟಿಕ್ ಕ್ಷಿಪಣಿಗಳ ಪರೀಕ್ಷೆ ನಡೆಸಿದೆ. ಎರಡು ದಿನಗಳ ಹಿಂದೆಯಷ್ಟೇ ಕ್ಷಿಪಣಿ ಪರೀಕ್ಷೆ ನಡೆಸಿ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್‌ಗೆ ಮೊದಲ ಆಘಾತ ನೀಡಿದ್ದ ಕಿಮ್ ಜಾಂಗ್ ಉನ್ ಇದೀಗ ತನ್ನ ಕ್ಷಿಪಣಿ ಪರೀಕ್ಷೆ ದಾಹವನ್ನು ಮತ್ತಷ್ಟು ವಿಸ್ತರಿಸಿದ್ದಾನೆ.
ಯುಎನ್ ಭದ್ರತಾ ಸಮಿತಿಯ ನಿರ್ಣಯದ ಅನ್ವಯ ಬಾಲೆಸ್ಟಿಕ್ ಕ್ಷಿಪಣಿ ಪರೀಕ್ಷೆ ನಡೆಸುವುದು ನಿಷಿದ್ಧವಾಗಿದೆ. ಆದರೂ ಉತ್ತರ ಕೊರಿಯಾ ಯಾವುದೇ ನಿರ್ಣಯವನ್ನು ಪರಿಗಣನೆಗೆ ತೆಗೆದುಕೊಳ್ಳದೆ ಜಪಾನ್ ಸಮುದ್ರದಲ್ಲಿ ಕ್ಷಿಪಣಿ ಪರೀಕ್ಷೆ ನಡೆಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಅಮೆರಿಕಾದ ಫೆಸಿಪಿಕ್ ಕಮಾಂಡ್, ಉತ್ತರ ಕೊರಿಯಾದ ಅಕ್ರಮ ಶಸ್ತ್ರಾಸ್ತ್ರ ಪರೀಕ್ಷೆಗಳು ನೆರೆಯ ರಾಷ್ಟ್ರಗಳು ಹಾಗೂ ವಿಶ್ವ ಸಮುದಾಯಕ್ಕೆ ಮಾರಕವಾಗಿ ಪರಿಣಮಿಸಿದೆ ಎಂದು ಆತಂಕ ವ್ಯಕ್ತಪಡಿಸಿದೆ. ಇನ್ನು ಬ್ಯಾಲೆಸ್ಟಿಕ್ ಕ್ಷಿಪಣಿ ಪರೀಕ್ಷೆಯ ಅವಶೇಷಗಳು ಜಪಾನ್‌ನ ವ್ಯಾಪ್ತಿಗೆ ಒಳಪಡುವ ಸಮುದ್ರಕ್ಕೆ ಬಿದ್ದಿಲ್ಲ ಎಂದು ಜಪಾನ್ ತಿಳಿಸಿದೆ.