ಜಪಾನ್ ರಾಯಭಾರಿ ಕಚೇರಿಗೆ ಕಲ್ಲೆಸೆತ

ಟೋಕಿಯೊ, ಆ. ೨೯-ಜಪಾನ್‌ನ ಫುಕುಷಿಮಾ ಪರಮಾಣು ಸ್ಥಾವರದಿಂದ ತ್ಯಾಜ್ಯ ನೀರನ್ನು ಸಮುದ್ರಕ್ಕೆ ಬಿಡುವುದಕ್ಕೆ ಚೀನಾ ಸರಕಾರ ತೀವ್ರ ವಿರೋಧ ವ್ಯಕ್ತಪಡಿಸುತ್ತಿದ್ದಂತೆಯೇ ಚೀನಾದಲ್ಲಿನ ಜಪಾನ್ ರಾಯಭಾರಿ ಕಚೇರಿ ಹಾಗೂ ಶಾಲೆಗಳ ಮೇಲೆ ಕಲ್ಲೆಸೆತದ ಪ್ರಕರಣ ವರದಿಯಾಗಿದೆ.
ಚೀನಾದಲ್ಲಿರುವ ನಮ್ಮ ರಾಯಭಾರಿ ಕಚೇರಿಗೆ ನಿರಂತರ ಬೆದರಿಕೆ ಕರೆಗಳು ಬರುತ್ತಿವೆ. ಜತೆಗೆ ನಮ್ಮ ರಾಯಭಾರಿ ಕಚೇರಿಯ ಮೇಲೆ ಕಲ್ಲೆಸೆತದ ಘಟನೆಯೂ ನಡೆದಿದೆ. ಇದನ್ನು ಖಂಡಿಸಿ ಚೀನಾದ ರಾಯಭಾರಿಯನ್ನು ಕರೆಸಿ ಪ್ರತಿಭಟನೆ ಸಲ್ಲಿಸಲಾಗಿದೆ ಎಂದು ಜಪಾನ್ ಪ್ರಧಾನಿ ಫುಮಿಯೊ ಕಿಷಿಡ ಹೇಳಿದ್ದಾರೆ. ಫುಕುಷಿಮಾ ಸ್ಥಾವರದ ತ್ಯಾಜ್ಯ ನೀರು ಸಾಗರಕ್ಕೆ ಬಿಡುವ ವಿಷಯದಲ್ಲಿ ಅನಗತ್ಯವಾಗಿ ಸಾರ್ವಜನಿಕರಲ್ಲಿ ಆತಂಕ, ಗಾಭರಿಯನ್ನು ಹುಟ್ಟಿಸುವ ಕೆಲಸ ಮಾಡುವುದರ ಬದಲು ಚೀನಾವು ಸರಿಯಾದ ಮಾಹಿತಿ, ವಿಷಯವನ್ನು ಅವರಿಗೆ ಸ್ಪಷ್ಟಪಡಿಸಬೇಕು ಎಂದು ಸಹಾಯಕ ವಿದೇಶಾಂಗ ಸಚಿವ ಮಸಟಕ ಒಕಾನೊ ಹೇಳಿದ್ದಾರೆ. ಪರಮಾಣು ಸ್ಥಾವರದಲ್ಲಿನ ನೀರನ್ನು ಸಮುದ್ರಕ್ಕೆ ಬಿಡುವುದರ ವಿರುದ್ಧ ಈಗಾಗಲೇ ಜಪಾನ್ ನೆರೆಹೊರೆಯ ದೇಶಗಳಲ್ಲಿ ಪ್ರತಿಭಟನೆ ಜೋರಾಗಿ ನಡೆಯುತ್ತಿದೆ.