ಜಪಾನ್ ಮತ್ಸೋದ್ಯಮಕ್ಕೆ ಚೀನಾ ಹೊಡೆತ

ಟೋಕಿಯೊ, ಸೆ.೫- ಫುಕುಶಿಮಾ ಅಣುಸ್ಥಾವರದ ವಿಕಿರಣಗಳಿಂದ ಕೂಡಿದ ನೀರಿನ ವಿಚಾರವನ್ನು ಮುಂದಿಟ್ಟುಕೊಂಡು ಜಪಾನ್‌ನ ಸಮುದ್ರಾಹಾರದ ಮೇಲಿನ ಚೀನಾದ ನಿಷೇಧ ವಿರುದ್ಧ ಇದೀಗ ಜಪಾನ್ ಸಹಜವಾಗಿಯೇ ಆಕ್ರೋಶ ವ್ಯಕ್ತಪಡಿಸಿದೆ. ಇದೊಂದು ಸಂಪೂರ್ಣವಾಗಿ ಸ್ವೀಕಾರಾರ್ಯವಲ್ಲ ಎಂದು ಜಪಾನ್ ತಿಳಿಸಿದೆ.
ಫುಕುಶಿಮಾ ಪರಮಾಣು ಸ್ಥಾವರದಿಂದ ಸಂಸ್ಕರಿಸಿದ ವಿಕಿರಣಶೀಲ ನೀರನ್ನು ಜಪಾನ್ ಬಿಡುಗಡೆ ಮಾಡಿದ ನಂತರ ಚೀನಾ ಈ ಕ್ರಮ ತೆಗೆದುಕೊಂಡಿದೆ. ಆಗಸ್ಟ್ ೩೧ರಿಂದ ಜಪಾನ್‌ನ ಸಮುದ್ರಾಹಾರದ ಮೇಲಿನ ನಿಷೇಧದ ಬಗ್ಗೆ ಚೀನಾವು ವಿಶ್ವ ವ್ಯಾಪಾರ ಸಂಸ್ಥೆ (ಡಬ್ಲ್ಯುಟಿಒ)ಗೆ ಅಧಿಸೂಚನೆ ಹೊರಡಿಸಿತ್ತು. ಇದಕ್ಕೆ ಪ್ರತಿಯಾಗಿ ಇದೀಗ ಜಪಾನ್ ತಾನು ಡಬ್ಲ್ಯುಟಿಎ ವಿಚಾರಗಳಿಗೆ ಬದ್ದವಾಗಿರುವುದಾಗಿ ಹಾಗೂ ಕೂಡಲೇ ಚೀನಾ ತನ್ನ ನಿಷೇಧವನ್ನು ಹಿಂಪಡೆಯಬೇಕೆಂದು ಆಗ್ರಹಿಸಿದೆ. ಮೂಲಗಳ ಪ್ರಕಾರ ಚೀನಾದ ನಿರ್ಣಯದ ವಿರುದ್ಧ ಜಪಾನ್ ಡಬ್ಲ್ಯುಟಿಒ ಮೆಟ್ಟಿಲೇರುವ ಸಾಧ್ಯತೆ ಕೂಡ ಇದೆ ಎಂದು ಹೇಳಲಾಗಿದೆ. ಅಲ್ಲದೆ ಜಪಾನ್ ನಿರ್ಣಯಕ್ಕೆ ಅಮೆರಿಕಾ ಕೂಡ ಬೆಂಬಲ ವ್ಯಕ್ತಪಡಿಸುವ ಸಾಧ್ಯತೆ ಕೂಡ ಇದೆ ಎನ್ನಲಾಗಿದೆ. ಅಲ್ಲದೆ ಈ ತಿಂಗಳು ಇಂಡೋನೇಷ್ಯಾದಲ್ಲಿ ನಡೆಯಲಿರುವ ಆಸಿಯಾನ್ ಶೃಂಗಸಭೆ ಮತ್ತು ಭಾರತದಲ್ಲಿನ ಜಿ೨೦ ಶೃಂಗಸಭೆ ಸೇರಿದಂತೆ ರಾಜತಾಂತ್ರಿಕ ವೇದಿಕೆಗಳಲ್ಲಿ ಬಿಡುಗಡೆಯಾದ ಫುಕುಶಿಮಾ ಪರಮಾಣು ಸ್ಥಾವರದ ನೀರಿನ ಸುರಕ್ಷತೆಯ ಬಗ್ಗೆ ಜಪಾನ್ ಸ್ಪಷ್ಟನೆ ನೀಡಲಿದೆ ಎಂದು ಮುಖ್ಯ ಕ್ಯಾಬಿನೆಟ್ ಕಾರ್ಯದರ್ಶಿ ಹಿರೊಕಾಜು ಮಾಟ್ಸುನೊ ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು.