ಟೋಕಿಯೋ (ಜಪಾನ್), ಜು.೧೩- ಎಲ್‌ಜಿಬಿಟಿ ಸಮುದಾಯದ ಪರ ಕಾನೂನು ಹೋರಾಟ ನಡೆಸಿ ಗಮನ ಸೆಳೆಯುತ್ತಿದ್ದ, ಟಿ.ವಿ ನಿರೂಪಕಿ, ರೂಪದರ್ಶಿ ರೈಯುಚೆಲ್ (೨೭) ಅವರು ಟೋಕಿಯೋದಲ್ಲಿನ ತಮ್ಮ ಕಚೇರಿಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ರೈಯುಚೆಲ್ ನಿಧನಕ್ಕೆ ನಿಖರ ಕಾರಣ ಇನ್ನೂ ತಿಳಿದು ಬಂದಿಲ್ಲ. ಪ್ರಕರಣ ಹಲವು ಅನುಮಾನಗಳಿಗೆ ಎಡೆನೀಡಿರುವ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ಮತ್ತಷ್ಟು ಚರುಕುಗೊಳಿಸಿದ್ದಾರೆ.
ಯೂಜಿ ಹಿಗಾ ಎಂಬ ನಿಜನಾಮ ಹೊಂದಿರುವ ರೈಯುಚೆಲ್ ಅವರು ೧೯೯೫ ರಲ್ಲಿ ಓಕಿನಾವಾ ಪ್ರಿಫೆಕ್ಚರ್‌ನ ಗಿನೋವಾನ್‌ನಲ್ಲಿ ಜನಿಸಿದ್ದರು. ಹೈಸ್ಕೂಲ್‌ನಿಂದ ಪದವಿ ಪಡೆದ ನಂತರ ಟೋಕಿಯೊದ ಹರಾಜುಕುದಲ್ಲಿ ಬಳಸಿದ ಬಟ್ಟೆ ಅಂಗಡಿಯಲ್ಲಿ ಕೆಲಸ ಮಾಡುವ ಕಾಯಕ ಆರಂಭಿಸಿದ್ದರು. ಇದೇ ಅವಧಿಯಲ್ಲಿ ಅವರು ಇನ್‌ಸ್ಟಾಗ್ರಾಮ್ ಮೂಲಕ ಜನಮನ್ನಣೆ ಪಡೆಯಲು ಆರಂಭಿಸಿದ್ದರು. ಅದೂ ಅಲ್ಲದೆ ಲಿಂಗರಹಿತ ಶೈಲಿಯ ಡ್ರೆಸ್ಸಿಂಗ್‌ನಿಂದಾಗಿ ಎಲ್ಲರ ಗಮನ ಸೆಳೆದು, ಪ್ರಚಾರ ಪಡೆದುಕೊಂಡಿದ್ದರು. ಅದೂ ಅಲ್ಲದೆ ವೃತ್ತಿಯಲ್ಲಿ ಇದ್ದುಕೊಂಡೇ ಎಲ್‌ಜಿಬಿಟಿ ಸಮುದಾಯದ ಪರ ಧ್ವನಿ ಎತ್ತುವ ಕಾರ್ಯವನ್ನು ಮುಂದುವರೆಸಿದ್ದರು. ಅಲ್ಲದೆ ಟೋಕಿಯೋ ರೇನ್‌ಬೋ ಪ್ರೈಡ್‌ನಲ್ಲಿ ಸಕ್ರಿಯವಾಗಿ ಭಾಗವಹಿಸಿಸಿ ಎಲ್ಲರ ಗಮನ ಸೆಳೆಯುತ್ತಿದ್ದರು. ೨೦೧೬ರಲ್ಲಿ ರೈಯುಚೆಲ್ ಅವರು ಸಹ ಮಾಡೆಲ್ ಪೆಕೊ ಅವರನ್ನು ವಿವಾಹವಾಗಿದ್ದು, ದಂಪತಿಗೆ ಒಬ್ಬ ಮಗನಿದ್ದನು. ಆದಾಗ್ಯೂ, ೨೦೨೨ರಲ್ಲಿ, ದಂಪತಿ ಸಾಮಾಜಿಕ ಮಾಧ್ಯಮದ ಮೂಲಕ ವಿಚ್ಛೇದನವನ್ನು ಘೋಷಿಸಿದರು. ಇದರ ಹೊರತಾಗಿಯೂ ಮಗುವನ್ನು ಒಟ್ಟಿಗೆ ಬೆಳೆಸುವುದನ್ನು ಮುಂದುವರೆಸಿದ್ದರು. ಈ ನಡುವೆ ಆನ್‌ಲೈನ್‌ನಲ್ಲಿ ಹೆಚ್ಚು ಟೀಕೆಗೆ ಗುರಿಯಾದ ಹಿನ್ನೆಲೆಯಲ್ಲಿ ಇನ್ನು ಮುಂದೆ ತಮ್ಮನ್ನು ಪುರುಷ ಎಂದು ಗುರುತಿಸಿಕೊಳ್ಳುವುದಿಲ್ಲ ಎಂದು ರೈಯುಚೆಲ್ ಬಹಿರಂಗವಾಗಿಯೇ ಘೋಷಿಸಿದ್ದರು. ಇನ್ನು ರೈಯುಚೆಲ್ ಅವರ ಸಾವು ಹತ್ತು ಹಲವು ಅನುಮಾನಗಳಿಗೆ ಎಡೆಮಾಡಿ ಕೊಟ್ಟಿದೆ.