
ಬೆಂಗಳೂರು,ಮಂಡ್ಯ,ಏ.೧೦- ಜಪಾನ್‌ನಲ್ಲಿ ಈ ತಿಂಗಳ ೨೩ರಿಂದ ನಡೆಯಲಿರುವ ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯದಲ್ಲಿ ಮಂಡ್ಯ ಜಿಲ್ಲೆಯ ಸಂಸ್ಕೃತಿ ಆಚಾರ,ವಿಚಾರವನ್ನು ಪರಿಚಯಿಸುವ ಅಪರೂಪದ ಕಾರ್ಯಕ್ರಮಕ್ಕೆ ತಾಲ್ಲೂಕಿನ ಸಿದ್ದಯ್ಯನ ಕೊಪ್ಪಲು ಗ್ರಾಮದ ರಿಪಬ್ಲಿಕ್ ಸೆಂಟ್ರಲ್ ಸ್ಕೂಲ್‌ನ ಇಬ್ಬರು ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ.
ಅಂತರಾಷ್ಟ್ರೀಯ ವಿದ್ಯಾರ್ಥಿ ವಿನಿಮಯ ಕೇಂದ್ರದಲ್ಲಿ ಜಿಲ್ಲೆಯ ಸಂಸ್ಕೃತಿಯನ್ನು ಬಿಂಬಿಸುವ ಕೆಲಸಕ್ಕೆ ವಿದ್ಯಾರ್ಥಿಗಳಾದ ಧನ್ಯ ಜಿ ಗೌಡ,ಮತ್ತು ಶಾನ್ ಸ್ಟೀವನ್ ಡಾಲ್ಮೇಡ ಆಯ್ಕೆಯಾಗಿದ್ದು ಮಂಡ್ಯ ಮತ್ತು ರಾಜ್ಯಕ್ಕೆ ಹೆಮ್ಮೆ ತಂದಿದ್ದಾರೆ ಎಂದು ಚಿತ್ರನಟರೂ ಹಾಗು ಶಾಲೆಯ ಅಧ್ಯಕ್ಷ ಮಂಜು ತಿಳಿಸಿದ್ಧಾರೆ.
ಜಪಾನ್‌ನಲ್ಲಿ ನಡೆಯಲಿರುವ ಕಾರ್ಯಕ್ರಮಕ್ಕೆ ಮಂಡ್ಯ ಜಿಲ್ಲೆಯ ನಾಲ್ಕು ಶಾಲೆಗಳು ಅರ್ಜಿ ಸಲ್ಲಿಸಿದ್ದವು.ಅದರಲ್ಲಿ ನಮ್ಮ ಶಾಲೆಯ ವಿದ್ಯಾರ್ಥಿಗಳು ಆಯ್ಕೆಯಾಗಿದ್ದಾರೆ. ಈ ಮೂಲಕ ಜಿಲ್ಲೆಯ ಜಾನಪದ, ದೇಗುಲ,ಸಂಸ್ಕೃತಿ,ಮದುವೆ ಪದ್ದತಿ,ಆಧುನಿಕ ಶಿಕ್ಷಣ, ಸೇರಿದಂತೆ ಮಣ್ಣಿನ ಸೊಗಡನ್ನು ಜಪಾನ್‌ನಲ್ಲಿ ಹಂಚಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ಭಾರತದ ಭಾವೈಕ್ಯತೆಯನ್ನು ವಿದೇಶಿ ನೆಲದಲ್ಲಿ ಸಾರುವುದು ಮತ್ತು ವಿಚಾರ ವಿನಿಮಯ ಮಾಡಿಕೊಳ್ಳುವುದು ಖುಷಿಯ ವಿಚಾರ. ಜೊತೆಗೆ ಶಿಕ್ಷಣದಲ್ಲಿ ತಂತ್ರಜ್ಞಾನದ ಬಳಕೆ ಮತ್ತು ಉಪಯೋಗದ ಅಧ್ಯಯನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ವಿನಿಮಯಕ್ಕೆ ಸಹಕಾರಿ:
ನಮ್ಮ ಶಾಲೆಯ ಮಕ್ಕಳು ಜಪಾನ್‌ನ ವಿವಿಧ ಶಾಲೆಗಳಲ್ಲಿ ಹಾಗು ಜಪಾನ್ ನ ಮಕ್ಕಳು ನಮ್ಮ ಶಾಲೆಯಲ್ಲಿ ಕಲಿಯಲು ಉತ್ತಮ ವೇದಿಕೆಯಾಗಿ ಅವಕಾಶ ಕಲ್ಪಿಸಿದೆ ಎಂದರು.
ಜಪಾನ್ ಪ್ರವಾಸಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಳಿಗೆ ಶಾಲೆಯ ವತಿಯಿಂದಲೇ ಪಾಸ್ ಪೊರ್ಟ್ ಮಾಡಿಕೊಡಲಾಗಿದೆ, ವೀಸಾ, ವಿಮಾನದ ವೆಚ್ಚ ಹಾಗು ಇತರೆ ಸೌಲಭ್ಯಗಳನ್ನು ಜಪಾನ್‌ನ ಇಥಾಮಿ ಇಂಟರ್ ನ್ಯಾಷನಲ್ ಕಲ್ಚರಲ್ ಸಂಸ್ಥೆ ಭರಿಸಲಿದೆ ಎಂದು ತಿಳಿಸಿದ್ದಾರೆ.