ಜಪಾನ್‌ನಲ್ಲಿ ಶರ್ಟ್ ಅಳವಡಿಸಿದ ಫ್ಯಾನ್

ಜಪಾನ್,ಜು.೨೬-ಜಪಾನ್‌ನಲ್ಲಿ ಫ್ಯಾನ್ ಅಳವಡಿಸಿರುವ ಶರ್ಟ್ ಧರಿಸಿರುವ ಟ್ರಾಫಿಕ್ ಪೊಲೀಸರೊಬ್ಬರ ವಿಡಿಯೊವೊಂದು ಈಗ ಎಲ್ಲೆಡೆ ಹರಿದಾಡುತ್ತಿದೆ. ಶರ್ಟ್‌ಗೂ ಫ್ಯಾನ್ ಬಂತಾ ಎಂದು ಜನರು ತಲೆ ಕೆಡಿಸಿಕೊಂಡಿದ್ದಾರೆ. ಜಪಾನ್ ದೇಶದಲ್ಲಿ ದಿನಕ್ಕೊಂದು ಹೊಸ ಹೊಸ ಆವಿಷ್ಕಾರಗಳು ನಡೆಯುತ್ತಲೇ ಇರುತ್ತದೆ. ಈಗ ಜಪಾನ್‌ನ ಐಲ್ಯಾಂಡ್‌ನಲ್ಲಿ ನಡೆದ ಇಂತಹದ್ದೇ ಒಂದು ಅನ್ವೇಷಣೆ ಸಾಕಷ್ಟು ವೈರಲ್ ಆಗುತ್ತಿದೆ.
ಫ್ಯಾನ್ ಅಳವಡಿಸಿರುವ ಶರ್ಟ್ ಧರಿಸಿರುವ ಜಪಾನ್ ಟ್ರಾಪಿಕ್ ಅಧಿಕಾರಿಯೊಬ್ಬರ ವಿಡಿಯೊವೊಂದು ಎಲ್ಲೆಡೆ ಹರಿದಾಡುತ್ತಿದೆ.ಟ್ವಿಟರ್ ಬಳಕೆದಾರರು ಈ ವಿಡಿಯೊವನ್ನು ಭಾನುವಾರ ಹಂಚಿಕೊಂಡಿದ್ದಾರೆ. ಅವರು ವಿಡಿಯೊದೊಂದಿಗೆ ನೋಡಿ ಜಪಾನ್‌ನಲ್ಲಿ ಏನೆಲ್ಲಾ ಕಂಡುಹಿಡಿತಾರೆ, ಬಿಸಿಲಿನ ತಾಪ ತಾಳಲು ಫ್ಯಾನ್ ಇರುವ ಶರ್ಟ್ ಕೂಡ ಬಂದಿದೆ. ಈ ಶರ್ಟ್ ದೇಹದ ಉಷ್ಣಾಂಶವನ್ನು ತಗ್ಗಿಸಿ, ದೇಹವನ್ನು ತಣ್ಣಗಾಗಿಸಲು ಸಹಾಯ ಮಾಡುತ್ತದೆ ಎಂದು ಬರೆದುಕೊಂಡಿದ್ದಾರೆ.
ಇವರ ಈ ಟ್ವೀಟ್‌ಗೆ ೩೫ ಸಾವಿರ ಮಂದಿ ಲೈಕ್ ಮಾಡಿದ್ದಾರೆ. ಇವರ ಈ ಟ್ವೀಟ್‌ಗೆ ಕಾಮೆಂಟ್ ಮಾಡಿರುವ ಟ್ವಿಟರ್ ಬಳಕೆದಾರರು ನಾನು ಕಳೆದ ಮೇ ತಿಂಗಳಿನಲ್ಲಿ ಸರ್ಜರಿಗೆ ಒಳಗಾಗಿದ್ದೆ. ಆಗ ಸರ್ಜರಿಗೆ ಕರೆದುಕೊಂಡು ಹೋಗುವ ಮೊದಲು ನನಗೂ ಇಂತಹದ್ದೇ ಗೌನ್ ನೀಡಿದ್ದರು. ಇದರಿಂದ ದೇಹಕ್ಕೆ ಗಾಳಿಯಾಡುತ್ತಿತ್ತು. ದೇಹ ತಂಪಾಗಿ ಆರಾಮದಾಯಕವಾಗಿತ್ತು. ಅದು ನಿಜಕ್ಕೂ ಅದ್ಭುತ ಅನುಭವ ಎಂದು ಹೇಳಿಕೊಂಡಿದ್ದರು.ಭಾರತದಂತಹ ದೇಶಗಳಲ್ಲೂ ಇಂತಹ ಪ್ರಯೋಗಗಳು ನಡೆಯಬೇಕು, ಹೊರಗಡೆ ದುಡಿಯುವವರಿಗೆ ಇದರಿಂದ ಸಾಕಷ್ಟು ಸಹಾಯವಾಗುತ್ತದೆ ಎಂದು ಇನ್ನೊಬ್ಬರು ಕಾಮೆಂಟ್ ಮಾಡಿದ್ದಾರೆ.ಜಪಾನ್‌ನ ಸಾರ್ವಜನಿಕ ಸಂಪರ್ಕ ಕಚೇರಿ ಬ್ಲಾಗ್‌ನಲ್ಲಿ ಬರೆದಿರುವಂತೆ ಈ ಫ್ಯಾನ್ ಶರ್ಟ್ ಅನ್ನು ಇಚಿಗಯಾ ಹಿರೋಶಿ ಎನ್ನುವವರು ಅಭಿವೃದ್ಧಿ ಪಡಿಸಿದ್ದಾರೆ.
ಅವರು ಮೊದಲು ಸೋನಿ ಕಂಪನಿಯಲ್ಲಿ ಉದ್ಯೋಗಿಯಾಗಿದ್ದರು. ಸದ್ಯ ಅವರು ತಮ್ಮದೇ ಕಚೋಫುಕು ಕಂ. ಲಿಮಿಟೆಡ್ ಅನ್ನು ನಡೆಸುತ್ತಿದ್ದಾರೆ. ಈ ಕಂಪನಿಯು ಕಾರ್ಬನ್ ಹೊರ ಸೂಸುವಿಕೆಯನ್ನು ಕಡಿಮೆಗೊಳಿಸುವ ಪರಿಣಾಮ ಮತ್ತು ಶಾಖದ ರಕ್ಷಣೆ ವೈಶಿಷ್ಟ್ಯಗಳಿಗಾಗಿ ಗ್ಲೋಬಲ್ ವಾರ್ಮಿಂಗ್ ಪ್ರಿವೆನ್ಷನ್ ಆಕ್ಟಿವಿಟಿ ಪ್ರಶಸ್ತಿ ಪಡೆದಿದೆ ಎನ್ನಲಾಗುತ್ತಿದೆ.