ಜನ ಸೇವೆ ನನ್ನ ಗುರಿ-ಮುಕ್ಬುಲ್ ಪಾಷಾ

ಕನಕಪುರ, ನ. ೧೭- ಅಧಿಕಾರ ಮುಖ್ಯವಲ್ಲ ಜನಸಾಮಾನ್ಯರ ಸೇವೆಯೇ ನನ್ನ ಗುರಿ ಎಂದು ನಗರಸಭಾ ಅಧ್ಯಕ್ಷರಾದಮಹಮದ್ ಮುಕ್ಬುಲ್ ಪಾಷ ಹೇಳಿದ್ದಾರೆ.
ನಗರದ ಕೋಟೆ ವಾರ್ಡಿನಲ್ಲಿ ಎಲ್ಲಾ ಪ್ರಮುಖ ಬೀದಿಗಳಲ್ಲಿ ಬೆಳೆದಿದ್ದ ಕಳೆ ಸೇರಿದಂತೆ ಕಸ ತೆಗೆಯುವ ಕೆಲಸವನ್ನು ವೀಕ್ಷಣೆ ಮಾಡಿ ನಗರಸಭೆಯ ಸಿಬ್ಬಂದಿಗಳೊಡಗೂಡಿ ಮಾತನಾಡಿದರು.
ನಮ್ಮ ನಗರಸಭೆಯ ಎಲ್ಲಾ ಪ್ರದೇಶಗಳನ್ನು ಇನ್ನು ಕೇವಲ ೮ ದಿನಗಳಲ್ಲಿ ಸ್ವಚ್ಚಗೊಳಿಸುವುದರ ಜೊತೆ ಕಸ ವಿಲೇವಾರಿಯನ್ನು ಅತಿಜರೂರಾಗಿ ಮಾಡಲಾಗುವುದು ಎಂದು ತಿಳಿಸಿದರು.
ನಮ್ಮ ಸಿಬ್ಬಂದಿಗಳಿಗೆ ಸ್ವಚ್ಚತೆಗೆ ಅವಶ್ಯಕವಾಗಿ ಬೇಕಾಗಿರುವ ವಸ್ತುಗಳನ್ನು ನೀಡಿದ್ದು ಜೊತೆ ಅವರ ಆರೋಗ್ಯದ ಹಿನ್ನೆಲೆಯಲ್ಲಿ ಮಾಸ್ಕ್, ಸ್ಯಾನಿಟೈಸರ್, ಕೈಚೀಲ, ಕಾಲಿಗೆ ಕವಚ ಜೊತೆ ಅವಶ್ಯವಿದ್ದಲ್ಲಿ ಪಿ.ಪಿ. ಕಿಟ್ ಕೂಡ ನೀಡಲಾಗುತ್ತಿದೆ ಎಂದು ಈಸಂದರ್ಭದಲ್ಲಿ ಹೇಳಿದರು.
ನಗರದ ಒಂದನೇ ವಾರ್ಡಿನಿಂದ ಕೆಲಸ ಆರಂಭವಾಗಿದ್ದು ಈಗಾಗಲೇ ಸ್ವಚ್ಚತಾ ಕಾರ್‍ಯಕ್ರಮವನ್ನು ಆರಂಭ ಮಾಡಿದ್ದು ಉಳಿದ ಎಲ್ಲಾ ವಾರ್ಡುಗಳ ಕಳೆ ಕೀಳುವುದು, ಮೋರಿಗಳಲ್ಲಿ ಕಟ್ಟಿಕೊಂಡಿರುವ ಕಸ, ತೆಗೆದು ಸರಾಗವಾಗಿ ನೀರು ಹರಿದುಹೋಗುವ ರೀತಿ ಮಾಡಲಾಗುತ್ತಿದೆ ಎಂದರು.
ನಗರದ ಪ್ರತಿಯೊಂದು ಮನೆಯ ಮಹಿಳೆಯರು ಬೀದಿಯ ಮೇಲೆ ಬರುವ ಕಸದ ವಾಹನಗಳಿಗೆ ಪ್ರತಿದಿನ ಹಸಿ ಕಸ ಒಣಕಸವನ್ನು ಪ್ರತ್ಯೇಕವಾಗಿ ವಿಂಗಡಣೆ ಮಾಡಿ ಹಾಕಬೇಕೆಂದು ಮನವಿ ಮಾಡಿದರು.
ಹಾಗೆಯೇ ನೀರನ್ನು ಮಿತವಾಗಿ ಬಳಕೆ ಮಾಡಿ ನೀರು ಅತ್ಯಮೂಲ್ಯವಾದ್ದು ಪ್ರಕೃತಿ ಮಾನವನಿಗೆ ನೀಡಿರುವ ಕೊಡುಗೆಯಾಗಿದೆ ಯಾರೂ ಸಹ ಅಗತ್ಯಕ್ಕಿಂತ ಹೆಚ್ಚು ನೀರು ಬಳಕೆ ಮಾಡಬೇಡಿ ಪ್ರತಿಯೊಂದು ಮನೆಯ ಮುಂದೆ ಟ್ಯಾಪ್‌ಗಳನ್ನು ನಿಮ್ಮ ಮನೆಯ ನೆಲ್ಲಿಗಳಿಗೆ ಅಳವಡಿಸಿಕೊಳ್ಳಿ ಯಾರೂ ಟ್ಯಾಪ್‌ಗಳನ್ನುಅಳವಾಡಿಸಿಕೊಂಡಿಲ್ಲ ಅಂತವರ ಮನೆಗೆ ದಂಡವನ್ನು ವಿಧಿಸಲಾಗುವುದು ಮತ್ತು ನೆಲ್ಲಿಯ ಸಂಪರ್ಕವನ್ನು ಕಡಿತಗೊಳಿಸಲಾಗುವುದು ಎಂದು ಈಸಂದರ್ಭದಲ್ಲಿ ತಿಳಿಸಿದರು.
ಈ ಸಂದರ್ಭದಲ್ಲಿ ನಗರಸಭಾ ಉಪಾದ್ಯಕ್ಷ ಗುಂಡಣ್ಣ, ಸದಸ್ಯರಾದ ಹೇಮರಾಜು, ವಾರ್ಡಿನ ಪ್ರಮುಖರಾದ ಮುಕುಂದರಾವ್, ಶಿವಣ್ಣಿ, ಕೃಷ್ಣೆಗೌಡ, ನಗರಸಭೆಯ ಸಿಬ್ಬಂಧಿಗಳಾದ ರಾಮಚಂದ್ರು, ಸೇರಿದಂತೆ ಸಿಬ್ಬಂದಿಗಳು ಉಪಸ್ಥಿತರಿದ್ದರು.