ಜನ ಸಮೃದ್ಧಿ ಸಹಕಾರಿಗೆ ರೂ. 7.5 ಲಕ್ಷ ಲಾಭ

ಬೀದರ:ಜ.1: ಇಲ್ಲಿಯ ಜನ ಸಮೃದ್ಧಿ ಸೌಹಾರ್ದ ಪತ್ತಿನ ಸಹಕಾರಿ ನಿಯಮಿತವು 2019-20ನೇ ಸಾಲಿನಲ್ಲಿ ರೂ. 7.5 ಲಕ್ಷ ಲಾಭ ಗಳಿಸಿದೆ.
ನಗರದ ಪ್ರತಾಪನಗರದ ರಾಜ್ಯ ಸರ್ಕಾರಿ ನೌಕರರ ಸಮುದಾಯ ಭವನದಲ್ಲಿ ನಡೆದ ಸಹಕಾರಿಯ ದ್ವಿತೀಯ ವಾರ್ಷಿಕ ಮಹಾಸಭೆ ಹಾಗೂ ಅಭಿನಂದನಾ ಸಮಾರಂಭದಲ್ಲಿ ಸಹಕಾರಿ ಅಧ್ಯಕ್ಷ ರಾಜೇಂದ್ರಕುಮಾರ ಗಂದಗೆ ಈ ವಿಷಯ ತಿಳಿಸಿದರು.
ಸಹಕಾರಿಯ ಷೇರು ಬಂಡವಾಳ ರೂ. 63.81 ಲಕ್ಷ ಹಾಗೂ ದುಡಿಯುವ ಬಂಡವಾಳ ರೂ. 1.64 ಕೋಟಿ ಆಗಿದೆ. ರೂ. 71 ಲಕ್ಷ ಠೇವಣಿ ಹೊಂದಿದ್ದು, ಸದಸ್ಯರಿಗೆ ರೂ. 1.28 ಕೋಟಿ ಸಾಲ ವಿತರಿಸಲಾಗಿದೆ ಎಂದು ಹೇಳಿದರು.
ಸದಸ್ಯರಿಗೆ ತ್ವರಿತ ಸಾಲ ವಿತರಿಸಲಾಗುತ್ತಿದೆ. ಹಿರಿಯ ನಾಗರಿಕರು ಹಾಗೂ ಮಹಿಳೆಯರಿಗೆ ಠೇವಣಿ ಮೇಲೆ ಶೇ 0.50 ರಷ್ಟು ಅಧಿಕ ಬಡ್ಡಿ ಕೊಡಲಾಗುತ್ತಿದೆ. ವ್ಯಾಪಾರಿಗಳು, ಸರ್ಕಾರಿ ನೌಕರರು ಹಾಗೂ ಚಿನ್ನಕ್ಕೆ ಕಡಿಮೆ ಬಡ್ಡಿ ದರದಲ್ಲಿ ಸಾಲ ನೀಡಲಾಗುತ್ತಿದೆ ತಿಳಿಸಿದರು.
ಸಹಕಾರಿಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ. ಬರುವ ದಿನಗಳಲ್ಲಿ ಗ್ರಾಹಕರಿಗೆ ಇನ್ನೂ ಹೆಚ್ಚು ಸೌಕರ್ಯಗಳನ್ನು ಒದಗಿಸುವ ಉದ್ದೇಶ ಇದೆ ಎಂದು ಹೇಳಿದರು.
ವ್ಯಾಪಾರಿಗಳು ಹಾಗೂ ಇತರರು ಸೇರಿ ಸಹಕಾರಿ ರಚಿಸಿ ವ್ಯಾಪಾರಿಗಳಿಗೆ ಸಾಲ ಸೌಲಭ್ಯ ಕಲ್ಪಿಸುವ ಮೂಲಕ ವ್ಯಾಪಾರ ವೃದ್ಧಿಗೆ ನೆರವಾಗುತ್ತಿರುವುದು ಸಂತಸದ ಸಂಗತಿಯಾಗಿದೆ ಎಂದು ಜಿಲ್ಲಾ ಪಂಚಾಯಿತಿ ನೂತನ ಉಪಾಧ್ಯಕ್ಷ ವಿಜಯಕುಮಾರ ಪಾಟೀಲ ಗಾದಗಿ ನುಡಿದರು.
ರಾಜೇಂದ್ರಕುಮಾರ ಗಂದಗೆ ಕ್ರಿಯಾಶೀಲರಾಗಿದ್ದಾರೆ. ಎಲ್ಲ ಕ್ಷೇತ್ರಗಳಲ್ಲೂ ಉತ್ತಮ ಕೆಲಸ ಮಾಡುತ್ತಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಸಹಕಾರ ಕ್ಷೇತ್ರದಿಂದ ಜಿಲ್ಲೆಯಲ್ಲಿ ಬಹಳಷ್ಟು ಬದಲಾವಣೆ ತರಲು ಸಾಧ್ಯವಿದೆ. ಜಿಲ್ಲೆಯ ಅನೇಕ ಸಹಕಾರಿಗಳು ಈ ದಿಸೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವುದು ಉತ್ತಮ ಬೆಳವಣಿಗೆಯಾಗಿದೆ ಎಂದು ರಾಜ್ಯ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಡಾ. ಶೈಲೇಂದ್ರ ಬೆಲ್ದಾಳೆ ಹೇಳಿದರು.
ತಮ್ಮ ಅಧಿಕಾರ ಅವಧಿಯಲ್ಲಿ ಜಿಲ್ಲೆಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಹಂಬಲ ಇದೆ ಎಂದು ತಿಳಿಸಿದರು.
ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸಿ.ಎಸ್. ಫುಲೇಕರ್ ಮಾತನಾಡಿದರು. ವಿಜಯಕುಮಾರ ಪಾಟೀಲ ಗಾದಗಿ, ಡಾ. ಶೈಲೇಂದ್ರ ಬೆಲ್ದಾಳೆ ಹಾಗೂ ರೋಟರಿ ಕ್ಲಬ್ ಆಫ್ ನ್ಯೂ ಸೆಂಚುರಿಯ ಅಧ್ಯಕ್ಷ ಸೂರ್ಯಕಾಂತ ರಾಮಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. ಐವರು ಉತ್ತಮ ಗ್ರಾಹಕರನ್ನು ಗೌರವಿಸಲಾಯಿತು.
ಸಹಕಾರಿಯ ಉಪಾಧ್ಯಕ್ಷ ಶಿವಕುಮಾರ ಕೆ. ಪಾಟೀಲ, ನಿರ್ದೇಶಕರಾದ ಸಂತೋಷಕುಮಾರ ಕೆ. ಪಾಟೀಲ, ಸೂರ್ಯಕಾಂತ ಜಾಪೂರೆ, ಬಸವರಾಜ ದುಕಾನದಾರ್, ರಮೇಶ ರಂಜೇರಿ, ರಾಜಕುಮಾರ ಸೋನಾಳೆ, ಅಶೋಕ ಗಂದೆ, ಮಾಣಿಕಪ್ಪ ಕರ್ಪೂರ್, ಶೈಲೇಂದ್ರಕುಮಾರ ಝರೆಪ್ಪ, ಭುವನೇಶ್ವರಿ ರಾಜಾರಾಮ ಚಿಟ್ಟಾ, ಪಾಂಡುರಂಗ ಪಾಂಚಾಳ, ದಿಲೀಪ್ ಸಜ್ಜನಶೆಟ್ಟಿ, ಕೀರ್ತಿ ಸೂರ್ಯಕಾಂತ ರಾಮಶೆಟ್ಟಿ, ರಾಣಿ ಸತ್ಯಮೂರ್ತಿ, ವ್ಯವಸ್ಥಾಪಕ ವೀರಕುಮಾರ ಹಲಬರ್ಗಾ, ಸಿಬ್ಬಂದಿ ಶ್ರೀದೇವಿ ಇದ್ದರು.