ಜನ ಸಮಾನ್ಯರಿಗೆ ಒಣ ಮೆಣಸಿನಕಾಯಿ ಬೆಲೆ ಖಾರವೋ ಖಾರ! 800 ರೂ.ಗೆ ಕೆಜಿ ಬ್ಯಾಡಗಿಕಾಯಿ”


ಸಿ.ಶಿವರಾಮ ಸಿರಿಗೇರಿ
ಸಿರಿಗೇರಿ ನ23. ದಿನನಿತ್ಯದ ಅಡುಗೆಯಲ್ಲಿ ಕೆಂಪುಖಾರದ ಪಾತ್ರ ವಿಶೇಷವಾದದ್ದು. ಕೆಂಪುಖಾರಪುಡಿ ಇಲ್ಲದೇ ಯಾವ ಅಡುಗೆ ಪೂರ್ಣವಾಗುವುದಿಲ್ಲ. ಅಡುಗೆ ಪದಾರ್ಥಗಳಲ್ಲಿ ರಾಜನ ಪಟ್ಟದಲ್ಲಿ ಈಗ ನಿತ್ಯವೂ ಅಗತ್ಯವಿರುವ ಒಣಮೆಣಸಿನಕಾಯಿ ಮೆರೆಯುತ್ತಿದೆ. ಕಳೆದೆರಡು ವರ್ಷಗಳಿಂದ ಬಳ್ಳಾರಿ ಜಿಲ್ಲೆಯಲ್ಲಿ ರೈತರು ಜಮೀನುಗಳಲ್ಲಿ ಕಣ್ಣಿಗೆ ಕಾಣುವವರೆಗೆ ಬರೀ ಮೆಣಸಿನಕಾಯಿ ಬೆಳೆಯನ್ನೇ ಬೆಳೆದಿರುತ್ತಾರೆ. ಆರೀತಿ ನೋಡಿದರೆ ಕೆಂಪುಖಾರದ ಧರವು ಸಾಮಾನ್ಯರಿಗೂ ಕೈಗೆಟುಕುವಂತಿರಬೇಕು. ಆದರೆ ಗ್ರಾಮೀಣ, ಪಟ್ಟಣ, ನಗರ ಪ್ರದೇಶಗಳ ವಾರದ ಮತ್ತು ದಿನದ ಸಂತೆ ಮಾರುಕಟ್ಟೆಗಳಲ್ಲಿ ವಿಶೇಷವಾಗಿ ತರಕಾರಿ ಸಂತೆಯಲ್ಲಿ ಬೆರಳೆಣಿಕೆಯಷ್ಟೇ ಮಾರಾಟಗಾರರು ಇಟ್ಟುಕೊಂಡು ಮಾರುವ ಪದಾರ್ಥವೆಂದರೆ ಅದು ಒಣ ಮೆಣಸಿನಕಾಯಿ ಆಗಿದೆ.
ಮಾರುವವರಿಗೂ ತುಟ್ಟಿ: ಯಾವುದೇ ತರಕಾರಿ ಪದಾರ್ಥ, ಅಡುಗೆ ಪದಾರ್ಥಗಳನ್ನು ಸಂತೆಯಲ್ಲಿ ಮಾರಾಟ ಮಾಡುವ ವ್ಯಾಪಾರಿಗಳಿಗೆ ಬೆಳಿಗ್ಗೆ ಮಾರುಕಟ್ಟೆಯಲ್ಲಿ ಕೈಗೆಟಕುವ ದರದಲ್ಲಿ ತಂದು ತಮ್ಮ ಲಾಭಾಂಶವನ್ನು ನಿಗದಿ ಮಾಡಿಕೊಂಡು ವ್ಯಾಪರದಿಂದ ಕೂಲಿ ಅಥವಾ ಲಾಭವನ್ನು ಗಿಟ್ಟಿಸಿಕೊಳ್ಳುತ್ತಾರೆ. ಆದರೆ ಕೈಗೆ ಸಿಗದಂತೆ ಧರದಲ್ಲಿ ವಹಿವಾಟಿನಲ್ಲಿ ಮೆರೆಯುತ್ತಿರುವ ಒಣಮೆಣಸಿನಕಾಯಿ ಮಾರಾಟಗಾರರು ಇದರ ಮಾರಾಟದ ತಂಟೆ ಬೇಡವೆಂದು ಬೇರೆ ಪದಾರ್ಥಗಳನ್ನು ತಂದು ಮಾರಿಕೊಳ್ಳುವ ಮಟ್ಟಿಗೆ ಏರಿಕೆಯಾಗಿದೆ. ಇದನ್ನು ಸ್ವತಹ ಒಣಮೆಣಸಿನಕಾಯಿ ಮಾರಾಟಗಾರರು ಹೇಳುತ್ತಾರೆ. ಉತ್ತಮ ಮಟ್ಟದ ಬ್ಯಾಡಿಗೆ ಮೆಣಸಿನಕಾಯಿ 1ಕೆಜಿಗೆ 600 ರೂ. ನಿಂದ 800 ರೂ.ವರೆಗೆ ಏರಿಕೆಯಾಗಿದೆ. ಸಿಜೆಂಟಾ ಬ್ಯಾಡಿಗಿಕಾಯಿ 400ರೂ.ನಿಂದ 500 ರೂ.ಗೆ 1ಕೆಜಿ ಧರವಿದೆ. ಗುಂಟೂರು ಮತ್ತು ಇತರೆ ಮದ್ಯಮ ತಳಿಗಳ ಮೆಣಸಿನಕಾಯಿ 350 ರೂ. ನಿಂದ 400 ರೂ.ಗೆ ಮಾರುಕಟ್ಟೆಯಲ್ಲಿ ಮಾರಲಾಗುತ್ತಿದೆ. ಇದು ಬಡಬಗ್ಗರಿಗೆ ತುಂಬಾ ಖಾರವಾಗಿ ಪರಿಣಮಿಸಿದೆ.
ಶ್ರೀಸಾಮಾನ್ಯನಿಗೆ ಹಸಿ ಮೆಣಸಿನಕಾಯಿ ಗತಿ: ತುಂಬಾ ದುಬಾರಿಯಾಗಿರುವ ಕೆಂಪುಖಾರದ ಗೊಡವೆಯನ್ನು ಗ್ರಾಮೀಣ ಭಾಗದ ದುಡಿಯುವ ಮತ್ತು ಮದ್ಯಮವರ್ಗದವರು ಧರ ಏರಿಕೆಯಾದ ಪರಿಣಾಮ, ಹೆಚ್ಚಾಗಿ ಹಸಿ ಮೆಣಸಿನಕಾಯಿ ಖಾರಕ್ಕೆ ಮೊರೆ ಹೋಗುತ್ತಿದ್ದಾರೆ. ಕುಟುಂಬಗಳಲ್ಲಿ ಹೆಚ್ಚು ಸದಸ್ಯರಿದ್ದವರು ಹಸಿಮೆಣಸಿನಕಾಯಿ ಪಲ್ಯ, ಸಾರು, ಚಟ್ನಿ, ಮಾಡಿಕೊಂಡು ಮೂರೊತ್ತಿನ ಊಟಗಳನ್ನು ಸರಿದೂಗಿಸಿಕೊಳ್ಳುತ್ತಿದ್ದಾರೆ. ಹಸಿಮೆಣಸಿನಕಾಯಿ ಮಾರಾಟದಲ್ಲಿಯೂ ವ್ಯಾಪಾರಿಗಳು ತಮ್ಮ ಲಾಭವನ್ನೇ ದೃಷ್ಟಿಯಲ್ಲಿಟ್ಟುಕೊಂಡು ಮಾರುತ್ತಿದ್ದು, ರೈತರಿಂದ 16 ರೂ. ನಿಂದ 20 ರೂ.ಗೆ ಕೊಂಡು, 40 ರೂ.ಗೆ 1ಕೆಜಿಯಂತೆ ಮಾರುತ್ತಿರುವುದು ಹಸಿ ಮೆಣಸಿನಕಾಯಿಯೂ ತುಟ್ಟಿಯಾಗಿ ಪರಿಣಮಿಸಿದ್ದು, ತರಕಾರಿ ಬೆಲೆಯೇನೂ ಕಮ್ಮಿ ಇಲ್ಲ ಬಿಡಿ, 50, 60 ರೂ.ಗೆ ಕೆಜಿ ಆಗಿದೆ ಎನ್ನುವುದು ಶ್ರೀಸಾಮಾನ್ಯನ ಬೇಸರದ ಸಂಗತಿಯಾಗಿದೆ.