ಅಥಣಿ :ಸೆ.26: ನಾನು ತಾಲೂಕಾ ಮಟ್ಟದ ಪ್ರಗತಿ ಪರಿಶೀಲನಾ ಸಭೆ ಮಾಡುವದು ಪ್ರಚಾರಕ್ಕಲ್ಲ. ಸರ್ಕಾರಿ ಅಧಿಕಾರಿಗಳು ಜನಸ್ನೇಹಿ ಮಾಡಿರಬೇಕು ನಮ್ಮ ತಾಲೂಕಾ ಆಡಳಿತ ವ್ಯವಸ್ಥೆಯು ಜಿಲ್ಲೆಯಲ್ಲಿಯೇ ಮಾದರಿಯಾಗಿರಬೇಕು. ಯಾವ ಅಧಿಕಾರಿಗಳ ಮೇಲೆ ನನಗೆ ದ್ವೇಷವಿಲ್ಲ. ಜನ ಪ್ರತಿನಿಧಿಗಳಾಗಲಿ ಸರಕಾರಿ ನೌಕರರಾಗಲಿ ನಾವಿಬ್ಬರು ಜನಸೇವಕರು. ಎಂದು ಶಾಸಕ ಲಕ್ಷ್ಮಣ ಸವದಿ ಹೇಳಿದರು.
ಅವರು ಪಟ್ಟಣದಲ್ಲಿರುವ ತಾಲೂಕಾ ಪಂಚಾಯತ ಸಭಾಭವನದಲ್ಲಿ ಸೋಮವಾರ ನಡೆದ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ತಾಲೂಕು ಮಟ್ಟದ ಅಧಿಕಾರಿಗಳ ಕಾರ್ಯವೈಖರಿ ಕುರಿತು ಮಾತನಾಡುತ್ತಿದ್ದರು, ಎಲ್ಲ ಇಲಾಖೆಗಳಲ್ಲಿ ಕೆಲಸ ಪಾರದರ್ಶಕ ವಾಗಿರಬೇಕು. ಜನ ಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಬೇಕು. ಸ್ವಚ್ಚ ಆಡಳಿತ ಇರಬೇಕು. . ತಮ್ಮ ಕರ್ತವ್ಯವನ್ನು ನಿಷ್ಠೆಯಿಂದ ಮತ್ತು ಜನರ ಪರವಾಗಿ ಕೆಲಸ ಮಾಡಿದರೆ ಸಾಕು. ಇಲ್ಲವಾದರೇ ನಿಮಗೆ ನಮ್ಮೊಂದಿಗೆ ಕೆಲಸ ಮಾಡಲು ತೊಂದರೆ ಆಗುತ್ತಿದ್ದರೇ ಅವರು ಬೇರೆ ಕಡೆಗೆ, ವರ್ಗ ಮಾಡಿಕೊಂಡು ಹೋಗಿ ಸಂತೋಷವಾಗಿ ಬಿಳ್ಕೋಡುತ್ತೇನೆ ಎಂದು ತಾಲೂಕಿನ ಅಧಿಕಾರಿಗಳಿಗೆ ಸೂಕ್ಷ್ಮವಾಗಿ ಎಚ್ಚರಿಕೆ ನೀಡಿದರು.
ಮೇಲಾಧಿಕಾರಿಗಳು ಹಾಗೂ ಸಿಬ್ಬಂದಿ ಮಧ್ಯ ಸಮನ್ವಯ ರೀತಿಯಲ್ಲಿ ಕೆಲಸ ಮಾಡಬೇಕು. ಒಬ್ಬ ಅಧಿಕಾರಿ ಒಳ್ಳೆಯ ಹಾಗೂ ಜನಪರ ಕೆಲಸ ಮಾಡುವ ಇಚ್ಛೆ ಇದ್ದರೇ ಎಂಥ ಕೆಲಸವನ್ನಾದರೂ ಸುಲಭವಾಗಿ ಮಾಡಬಹುದಾಗಿದೆ, ಜಿಲ್ಲೆಯಲ್ಲಿ ಅಥಣಿ ಮತಕ್ಷೇತ್ರವನ್ನು ಮಾದರಿ ಕ್ಷೇತ್ರವೆಂದು ಗುರುತಿಸುವಂತಾದರೆ. ನಾನು ನಿಮ್ಮೆಲ್ಲರಿಗೂ ಹೆಮ್ಮೆಯಿಂದ ಗೌರವಿಸಿ ಅಭಿನಂದಿಸುತ್ತೇನೆ. ಎಂದರು.
ಈ ವೇಳೆ ಹೆಸ್ಕಾಂ ಇಲಾಖೆಯ ಅಧಿಕಾರಿಗಳು ಸರಿಯಾದ ಸಂಪೂರ್ಣ ವಿವರಣೆ ಇಲ್ಲದಕ್ಕೆ ಹೆಸ್ಕಾಂ ಅಧಿಕಾರಿಗಳ ಮೇಲೆ ಆಕ್ರೋಶಗೊಂಡ ಶಾಸಕರು, ಮೂರು ದಿನದೊಳಗೆ ತಾಲೂಕಿನಲ್ಲಿ ಅಕ್ರಮ ಪಂಪಸೆಟ್‍ಗಳು ಎಷ್ಟಿವೆ ?. ಅಕ್ರಮ ಪಂಪಸೆಟ್‍ಗಳನ್ನು ಸಕ್ರಮ ಮಾಡಲು ಬಂದ ಅರ್ಜಿಗಳು ಎಷ್ಟು?. ಹಾಗೂ ಒಟ್ಟು ಎಷ್ಟು ಪಂಪಸೆಟ್‍ಗಳು ಸಕ್ರಮವಾಗಿವೆ ಎಂಬ ವಿವರವಾದ ಸರ್ವೆ ವರದಿಯನ್ನು ತಮಗೆ ನೀಡಲು ಸೂಚನೆ ನೀಡಿದರು. ನಿಮ್ಮ ಇಲಾಖೆ ಮೇಲೆ ಸಾಕಷ್ಟು ಸಾರ್ವಜನಿಕರಿಂದ ಮತ್ತು ರೈತರಿಂದ ದೂರುಗಳಿವೆ. ಮೂರು ತಿಂಗಳೊಳಗಾಗಿ ಸುಧಾರಿಸಿಕೊಳ್ಳಿ ಎಂದು ಖಡಕ್ ಎಚ್ಚರಿಕೆ ನೀಡಿದರು
ಈ ಸಂದರ್ಭದಲ್ಲಿ ಕೆಲವು ಇಲಾಖೆಗಳ ಅಧಿಕಾರಿಗಳು ಕಾರ್ಯವೈಖರಿಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಾಸಕ ಸವದಿ ಅವರು ಸಣ್ಣ ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ಲಿಫ್ಟ್ ಇರಿಗೇಷನ್ ಗೆ ವಿದ್ಯುತ್ ಸಮಸ್ಯೆ ಬಗ್ಗೆ ವಿಚಾರಿಸಿದರು. ಬಾಂದಾರಗಳ ಕಾಮಗಾರಿ ಕುರಿತು ಮತ್ತು ಕೆರೆ ತುಂಬುವ ಯೋಜನೆ ಯಾವ ಎಂಬ ಮಾಹಿತಿ ಪಡೆಯುವ ವೇಳೆ ಬಾಡಗಿ ಗ್ರಾಮದಲ್ಲಿ ನಿರ್ಮಿಸುತ್ತಿರುವ ಕೆರೆ ಜಾಗ ಹಸ್ತಾಂತರದ ಬಗ್ಗೆ ಅರಣ್ಯ ಇಲಾಖೆ ಆರಂಭದಿಂದಲೇ ತಪ್ಪು ಮಾಹಿತಿ ನೀಡುತ್ತಿದ್ದಾರೆ. ಎರಡು ಇಲಾಖೆಗಳ ನಡುವೆ ಹೊಂದಾಣಿಕೆ ಇಲ್ಲ ಎರಡು ಇಲಾಖೆಯ ಅಧಿಕಾರಿಗಳು ಈ ಬಗ್ಗೆ ಸಮನ್ವಯ ಸಾಧಿಸಬೇಕು. ಬೆಂಗಳೂರು ಹಂತದಲ್ಲಿ ಮುಗಿಯುವ ಕೆಲಸಕ್ಕೆ ವಿಳಂಬವೇಕೆ ಎಂದು ಪ್ರಶ್ನಿಸಿದರು.
ನೀರಾವರಿ ಇಲಾಖೆಯ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡು ಶಾಸಕರು ಕೆನಾಲ್ ಹೂಳು ಎತ್ತದ ಅಧಿಕಾರಿಗಳು ಕಮಾಂಡಿಂಗ್ ಏರಿಯಾದಲ್ಲಿ ನೀರು ಕೊಡದಿದ್ದರೇ ರೈತರಿಂದ ದೂರು ದಾಖಲಿಸಲಾಗುತ್ತದೆ. ರೈತರು ಎಚ್ ಬಿಸಿಯನ್ನು ನಂಬಿ ಬಿತ್ತಿದ ಬೆಳೆ ಹಾನಿಯಾದರೆ ಅದಕ್ಕೆ ನೀವೇ ಹೊಣೆ. ರೈತರಿಗೆ ಕಾನೂನಿನ ಅರಿವಿಲ್ಲ. ನೀವು ಬಚಾವಾಗಿದ್ದೀರಿ. ಅಂದರಲ್ಲದೇ ಕಳೆದ 11 ವರ್ಷಗಳಿಂದ ಪ್ರವಾಹ ಸಂತ್ರಸ್ತರ ಪುನರ್ವಸತಿ ಕೇಂದ್ರಗಳ ನಿರ್ಮಾಣ ಮಾಡದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು. ನಿಮ್ಮ ಇಲಾಖೆಯ ಪ್ರತ್ಯಕ ಸಭೆ ನಡೆಸುವದಾಗಿ ಹೇಳಿದರು.
ಪುರಸಭೆ ಮುಖ್ಯಾಧಿಕಾರಿ ಅಶೋಕ ಗುಡಿಮನಿ ಬಗ್ಗೆ ಪ್ರಶಂಸೆ :-
ಅಥಣಿ ಪುರಸಭೆ ಮುಖ್ಯಾಧಿಕಾರಿಯಾಗಿ ಅಶೋಕ ಗುಡಿಮನಿ ಅವರು ಅಥಣಿಗೆ ಬಂದು 75 ದಿನವಾಯಿತು. ಅವರ ಕೆಲಸವನ್ನು ಪಟ್ಟಣದ ಜನರು ಮುಕ್ತ ಕಂಠದಿಂದ ಶ್ಲಾಘಿಸುವ ಕೆಲಸ ನಡೆಯುತ್ತಿದೆ ಎಂದರೆ ಅವರ ಕಾರ್ಯವೈಖರಿ ನೋಡಿ ಕಲಿಯಿರಿ ಎಂದು ಇತರೆ ಅಧಿಕಾರಿಗಳಿಗೆ ಶಾಸಕ ಲಕ್ಷ್ಮಣ ನೀತಿ ಪಾಠ ಹೇಳಿದರು. ಅಶೋಕ ಗುಡಿಮನಿ ಅವರು ಪಟ್ಟಣದ ಜೊಡಿ ಕೆರೆಗಳ ಅಭಿವೃದ್ಧಿ, ದೊಡ್ಡ ನಾಲಾ ಸ್ವಚ್ಛತೆ ಕಾರ್ಯದಲ್ಲಿ ದಕ್ಷತೆಯನ್ನು ತೊರಿ ನಾಲ್ಕು ದಶಕಗಳಿಂದ ಆಗದ ಕೆಲಸವನ್ನು ಮಾಡಿ ತೊರಿಸಿರುವುದು ಶ್ಲಾಘನೀಯ ಕಾರ್ಯವಾಗಿದೆ. ನಾನು ನಿಮ್ಮಿಂದ ಅಂತಹ ಕಾರ್ಯವನ್ನು ನಾನು ನಿರೀಕ್ಷಿಸುತ್ತೇನೆ ಎಂದು ತಾಲೂಕಾ ಮಟ್ಟದ ಅಧಿಕಾರಿಗಳಿಗೆ ತಿಳಿಸಿದರು.
ಈ ಸಂದರ್ಭದಲ್ಲಿ ಚಿಕ್ಕೋಡಿ ಉಪವಿಭಾಗಧಿಕಾರಿ ಮಾಧವ ಗಿತ್ತೆ, ತಾಲೂಕು ಮಟ್ಟದ ಅಧಿಕಾರಿಗಳಾದ ತಾಪಂ ಅಧಿಕಾರಿ ಶಿವಾನಂದ ಕಲ್ಲಾಪುರ, ತಹಸೀಲ್ದಾರ್ ರಾಜೇಶ್ ಬುರ್ಲಿ, ಸಿಪಿಐ ರವೀಂದ್ರ ನಾಯ್ಕೋಡಿ, ಪಿಎಸ್ ಐ ಶಿವಶಂಕರ ಮುಕರಿ. ಬಿ.ಎಸ್.ಯಾದವಾಡ, ಮಹಾಂತೇಶ ಬಂಡಗರ, ಜಯಾನಂದ ಹಿರೇಮಠ, ವೀರಣ್ಣ ವಾಲಿ, ಡಾ.ಬಸಗೌಡ ಕಾಗೆ, ನಿಂಗನಗೌಡ ಬಿರಾದಾರ, ಶ್ರೀಕಾಂತ ಮಾಕಾಣಿ ಸೇರಿ ಅನೇಕ ಅಧಿಕಾರಿಗಳು ಉಪಸ್ಥಿತರಿದ್ದರು.