
ಸಂಜೆವಾಣಿ ವಾರ್ತೆ
ಗಂಗಾವತಿ, ಅ.23: ಸ್ವಾತಂತ್ರ್ಯ ದಿನಾಚರಣೆ ಹಾಗೂ ಅಮೃತ ಮಹೋತ್ಸವ ಪ್ರಯುಕ್ತ ತಾಲೂಕು ಪಂಚಾಯತಿ ಆವರಣದಲ್ಲಿ ಮೇರಾ ಮಾಠಿ, ಮೇರಾ ದೇಶ್ “ನನ್ನ ಮಣ್ಣು, ನನ್ನ ದೇಶʼ ಕಾರ್ಯಕ್ರಮನ್ನು ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರ ನೇತೃತ್ವದಲ್ಲಿ ಎಲ್ಲ ಗ್ರಾಮ ಪಂಚಾಯತಿಗಳಿಂದ ಸಂಗ್ರಹಿಸಿದ ಮಣ್ಣನ್ನು ಅಮೃತ ಕಳಸಕ್ಕೆ ಹಾಕುವ ಮೂಲಕ ಯಶಸ್ವಿಯಾಗಿ ನಡೆಸಲಾಯಿತು.
ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿಗಳಾದ ಲಕ್ಷ್ಮೀದೇವಿ ಅವರು ಮಾತನಾಡಿ, ನನ್ನ ಮಣ್ಣು, ನನ್ನ ದೇಶ ಅಭಿಯಾನದಲ್ಲಿ ತಾಲೂಕಿನ 18 ಗ್ರಾ.ಪಂ. ಮಟ್ಟದಲ್ಲಿ ಕಾರ್ಯಕ್ರಮ ಮಾಡಿ, ಗ್ರಾಪಂಗಳಿಂದ ಮಣ್ಣು ಸಂಗ್ರಹಿಸಲಾಗಿದೆ. ಜನನಿ ಜನ್ಮ ಭೂಮಿ ಸ್ವರ್ಗಕ್ಕಿಂತ ದೊಡ್ಡದು. ಯುವ ಪೀಳಿಗೆ ಹಾಗೂ ಮಕ್ಕಳಲ್ಲಿ ದೇಶಾಭಿಮಾನ, ಮಣ್ಣಿನ ಮಹತ್ವದ ಅಭಿಮಾನ ಮೂಡಿಸಲು ನನ್ನ ಮಣ್ಣು, ನನ್ನ ದೇಶ ಅಭಿಯಾನ ಸಹಕಾರಿಯಾಗಿದೆ. ಎಲ್ಲರೂ ದೇಶಾಭಿಮಾನ ಬೆಳೆಸಿಕೊಳ್ಳಬೇಕು ಎಂದರು.
ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ವಸುಧಾ ವಂಧನ್ ವಾಟಿಕಾ ಕಾರ್ಯಕ್ರಮ್ರದಡಿ ಒಂದೊಂದು ಗ್ರಾಪಂ ವ್ಯಾಪ್ತಿಯಲ್ಲಿ 75 ಸಸಿಗಳನ್ನು ನೆಡಲಾಯಿತು. ಅಮೃತ ಸರೋವರ ದಡದಲ್ಲಿ ಧ್ವಜಾರೋಹಣ ಕೂಡ ನೆರವೇರಿಸಲಾಗಿದೆ. ಅಮೃತ ಕಳಸದ ಮಣ್ಣನ್ನು ಜಿಲ್ಲಾ ಪಂಚಾಯತ್ ಗೆ ಕಳಳುಹಿಸಿ ಬಳಿಕ ರಾಜಧಾನಿ ಬೆಂಗಳೂರಿಗೆ ಹೋಗಲಿದೆ. ಅಲ್ಲಿಂದ ದೆಹಲಿಗೆ ಹೋಗಿ ಪ್ರಧಾನ ಮಂತ್ರಿಗಳು ಸಸಿ ನೆಟ್ಟು ಎಲ್ಲ ಮಣ್ಣನ್ನು ಆ ಗಿಡಗಳನ್ನು ಬೆಳೆಸಲು ಹಾಗೂ ವೀರ ಮರಣ ಹೊಂದಿದ ಸ್ವಾತಂತ್ರ್ಯ ಹೋರಾಟಗಾರರು ಹಾಗೂ ವೀರಯೋಧರಿಗೆ ಸಮರ್ಪಿಸಲಿದ್ದಾರೆ ಎಂದು ಮಾಹಿತಿ ನೀಡಿದರು.
ತಾಪಂ ಸಹಾಯಕ ನಿರ್ದೇಶಕರಾದ ಮಹಾಂತಗೌಡ ಪಾಟೀಲ್, ತಾಪಂ ವ್ಯವಸ್ಥಾಪಕರಾದ ಶಾಂತವೀರಯ್ಯ, ಎಸ್ ಕೆಎನ್ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಡಾ.ಸೆಲ್ವರಾಜ, ತಾಪಂ ಸಿಬ್ಬಂದಿಗಳಾದ ರಾಘವೇಂದ್ರ, ಸುಮಂಗಲಾ, ರಂಗಮ್ಮ, ಬಸವರಾಜ ಜಟಗಿ, ಬಾಳಪ್ಪ ತಾಳಕೇರಿ, ನಾಗರಾಜ ಗಂಗನಾಳ, ವೀರನಗೌಡ, ಶ್ಯಾಮ್ ಸುಂದರ್, ಎನ್ ಸಿಸಿ ವಿದ್ಯಾರ್ಥಿಗಳು, ಬಿಎಫ್ ಟಿಗಳು, ಗ್ರಾಮ ಕಾಯಕ ಮಿತ್ರರು ಇದ್ದರು.