ಜನೌಷಧಿ ಮಳಿಗೆಗಳ ಮೂಲಕ 358 ಕೋಟಿ ರೂ. ಔಷಧ ಮಾರಾಟ: 600 ಕೋಟಿ ರೂ ಗುರಿ: ಡಿವಿಎಸ್

ನವದೆಹಲಿ, ನ.3-ಪ್ರಸಕ್ತ ಹಣಕಾಸು ವರ್ಷದ ಮೊದಲ ಏಳು ತಿಂಗಳಲ್ಲಿ 6600 ಜನೌಷಧಿ ಮಳಿಗೆಗಳ ಮೂಲಕ 358 ಕೋಟಿ ರೂ ಮೌಲ್ಯದ ಫಾರ್ಮಾ ಉತ್ಪನ್ನಗಳನ್ನು ಮಾರಾಟ ಮಾಡಲಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಸಚಿವ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ವರ್ಷಾಂತ್ಯದ ವೇಳೆಗೆ 600 ಕೋಟಿ ರೂ. ಗೂ ಹೆಚ್ಚು ಮಾರಾಟ ನಡೆಯುವ ಸಾಧ್ಯತೆಯಿದೆ ಎಂದು ತಿಳಿಸಿದರು

ಔಷಧಿಗಳಿಗಾಗಿ ಜನರ, ವಿಶೇಷವಾಗಿ ಬಡಜನರ ಖರ್ಚನ್ನು ಕಡಿಮೆ ಮಾಡುವ ಪ್ರಧಾನಿ ನರೇಂದ್ರ ಮೋದಿಯವರ ದೃಷ್ಟಿಕೋನವು ಅಂತಿಮವಾಗಿ ರೂಪು ಪಡೆಯುತ್ತಿದೆ ಎಂದರು.

ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನೆ ಯ ಸಮಗ್ರ ಪರಿಶೀಲನಾ ಸಭೆ ನಡೆಸಿ ಮಾತನಾಡಿದ ಅವರು ಕೋವಿಡ್-19 ರ ಸಂಕಷ್ಟದ ಸಮಯದಲ್ಲಿ ಜನರಿಗೆ ಕೈಗೆಟುಕುವ ದರದಲ್ಲಿ ಮುಖಗವಸುಗಳು, ಔಷಧಿಗಳು ಮತ್ತು ಇತರ ಉತ್ಪನ್ನಗಳ ಸರಬರಾಜನ್ನು ಖಾತ್ರಿಪಡಿಸಿದೆ ಎಂದರು.

ನವೀನ ಕ್ರಮಗಳನ್ನು ಅಳವಡಿಸಿಕೊಳ್ಳುವ ಮೂಲಕ ಪೂರೈಕೆ ಸರಪಳಿಗಳನ್ನು ಬಲಪಡಿಸಿ ಈ ಪ್ರಯೋಜನಗಳನ್ನು ಕ್ರೋಢೀಕರಿಸಲು ಬಿಪಿಪಿಐ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಜನೌಷಧಿಯ ಔಷಧಗಳ ಪರಿಣಾಮ ಮತ್ತು ಗುಣಮಟ್ಟದ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಬೇಕು, ದೂರದ ಮತ್ತು ಗ್ರಾಮೀಣ ಪ್ರದೇಶಗಳನ್ನು ಕೇಂದ್ರೀಕರಿಸಿ ಇವುಗಳ ವ್ಯಾಪ್ತಿಯನ್ನು ಹೆಚ್ಚಿಸಬೇಕು ಮತ್ತು ಪ್ರತಿ ಜನೌಷಧಿ ಅಂಗಡಿಯಲ್ಲೂ ಔಷಧಿಗಳ ಲಭ್ಯತೆಯನ್ನು ಖಚಿತಪಡಿಸಿಕೊಳ್ಳಬೇಕು ಎಂದು ಅವರು ಹೇಳಿದರು.. ಈ ಗುರಿಯನ್ನು ಸಾಧಿಸಲು ವಿವರವಾದ ಕ್ರಿಯಾ ಯೋಜನೆಯನ್ನು ಸಿದ್ಧಪಡಿಸಿ ಸಲ್ಲಿಸುವಂತೆ ಅವರು ಬಿಪಿಪಿಐಗೆ ಸೂಚಿಸಿದರು.

ನಾಗರಿಕರಿಗೆ ಕೈಗೆಟುಕುವ ದರದಲ್ಲಿ ಔಷಧಿಗಳನ್ನು ಒದಗಿಸುವ ಯೋಜನೆಯನ್ನು ಗುಣಮಟ್ಟದ ಜೆನೆರಿಕ್ ಔಷಧಿಗಳನ್ನು ಅಗ್ಗವಾಗಿ ಒದಗಿಸುವ ಮೂಲಕ ಭಾರತದ ಪ್ರತಿಯೊಬ್ಬ ನಾಗರಿಕನ ಆರೋಗ್ಯ ವೆಚ್ಚವನ್ನು ಕಡಿಮೆ ಮಾಡುವ ಉದ್ದೇಶದಿಂದ.ನರೇಂದ್ರ ಮೋದಿ ಅವರ ಮಾರ್ಗದರ್ಶನದಲ್ಲಿ 2015-16ರಲ್ಲಿ ಪ್ರಧಾನ ಮಂತ್ರಿ ಭಾರತೀಯ ಜನೌಷಧಿ ಪರಿಯೋಜನ ಯೋಜನೆಯಾಗಿ ಪರಿಷ್ಕರಿಸಲಾಯಿತು. ಕೈಗೆಟುಕುವ ಬೆಲೆಗಳ ಜೆನೆರಿಕ್ ಔಷಧಿಗಳನ್ನು ಮಾರಾಟ ಮಾಡುವ ಜನೌಷಧಿ ಮಳಿಗೆಗಳು 2014-15ರಲ್ಲಿ ಕೇವಲ 99 ಇದ್ದವು. ಪ್ರಸ್ತುತ 6600 ಮಳಿಗೆಗಳಿವೆ. ಇವುಗಳ ಮಾರಾಟವು 2014-15ರಲ್ಲಿದ್ದ 7.29 ಕೋಟಿ ರೂ.ಗಳಿಂದ 2019-20ರಲ್ಲಿ 433 ಕೋಟಿ ರೂ.ಗೆ ಏರಿಕೆಯಾಗಿದೆ ಎಂದರು.