ಜನೋತ್ಸವ ರದ್ದು ಮಾಡಿ ಮರ್ಯಾದೆ ಉಳಿಸಿಕೊಂಡ ಸರ್ಕಾರ ಹೆಚ್‌ಡಿಕೆ ವ್ಯಂಗ್ಯಬೆಂಗಳೂರು, ಜು. ೨೮- ಜನೋತ್ಸವ ಕಾರ್ಯಕ್ರಮವನ್ನು ರದ್ದು ಮಾಡಿ ಸರ್ಕಾರ ಮುಖ ಉಳಿಸಿಕೊಂಡಿದೆ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಹೇಳಿದರು.
ಬಿಜೆಪಿ ಸರ್ಕಾರದ ಜನೋತ್ಸವ ರದ್ಧಾದ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಸಾವಿನ ಮನೆಯಲ್ಲಿ ಸಂಭ್ರಮಿಸುವ ವಿಕೃತ ಬೇಡವೆಂದು ನಾನು ಹೇಳಿದ್ದೆ. ಪಾಪ ರಾಜ್ಯ ಬಿಜೆಪಿ ಸರ್ಕಾರಕ್ಕೆ ಮಧ್ಯರಾತ್ರಿಯಲ್ಲಿ ಜ್ಞಾನೋದಯವಾಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಸಾವುಗಳನ್ನೇ ಸಾಧನೆಗಳನ್ನಾಗಿ ಮಾಡಿಕೊಂಡು ಅವುಗಳನ್ನೆ ಅಧಿಕಾರದ ಏಣಿಯನ್ನಾಗಿ ಮಾಡಿಕೊಂಡವರಿಗೆ ಪಾಪಪ್ರಜ್ಞೆ ಕಾಡಿದೆ. ಸರ್ಕಾರ ಕೊನೆಗೂ ಜನೋತ್ಸವ ರದ್ದು ಮಾಡಿ ಮುಖ ಉಳಿಸಿಕೊಂಡಿದೆ ಎಂದು ಟ್ವೀಟ್ ಮಾಡಿದ್ದಾರೆ.
ಸರ್ಕಾರದ ಕಾಳಜಿಯಲ್ಲಿ ಸಾಚಾತನವಿಲ್ಲ. ಸಾವಿನಲ್ಲೂ ಸಿಂಪಥಿ ಗಿಟ್ಟಿಸುವ ವ್ಯರ್ಥ ಪ್ರಯತ್ನ ವಾಕರಿಕೆ ತರಿಸುತ್ತಿದೆ. ಸಾಧನಾ ಸಮಾಲೇಶ ನಿಂತಿತಲ್ಲ ಎಂಬ ಹಕತಾಶೆ ಕಾಣುತ್ತಿದೆ. ರಾಜ್ಯದಲ್ಲಿ ಸಾವುಗಳ ಮೆರವಣಿಗೆ ನಡೆಯುತ್ತಿರುವುದಷ್ಟೇ ಬಿಜೆಪಿ ಸರ್ಕಾರದ ವರ್ಷದ ಸಾಧನೆ ಎಂದು ಲೇವಡಿ ಮಾಡಿದ್ದಾರೆ.
ಜಾತಿ, ಧರ್ಮ, ಆಚಾರ, ವಿಚಾರ, ಆಹಾರ, ವ್ಯಾಪಾರ, ಉಡುಗೆ-ತೊಡುಗೆ ನೆಪದಲ್ಲಿ ರಾಜ್ಯವನ್ನು ಭಾವನಾತ್ಮಕವಾಗಿ ಛಿದ್ರ ಛಿದ್ರ ಮಾಡಿದ್ದೇ ಸಾಧನೆಯೇ ಎಂದು ಪ್ರಶ್ನಿಸಿರುವ ಅವರು, ತಿನ್ನುವ ಅನ್ನದಲ್ಲಿ, ಕಲಿಯುವ ಅಕ್ಷರದಲ್ಲಿ, ಉರಿಯುವ ಮನೆಯಲ್ಲಿ ಮತಕ್ಕಾಗಿ ಕೋಮು ಗಳ ಇರಿಯುವುದೇ ಸಾಧನೆಯೇ ಎಂದು ಪ್ರಶ್ನಿಸಿದ್ದಾರೆ.
ಪ್ರವೀಣ್ ಹತ್ಯೆಯಿಂದ ಹರಿದ ಪ್ರವೀಣ್ ನೆತ್ತರು ನಾಡಿನ ಆತ್ಮಸಾಕ್ಷಿಯನ್ನು ಕಳಚಿದೆ. ಒಂದೇ ಊರಿನಲ್ಲಿ ಎಂಟೇ ದಿನದಲ್ಲಿ ಎರಡು ಕೊಲೆ ನಡೆದಿದೆ ಎಂದರೆ ಸರ್ಕಾರ ಬದುಕಿದೆಯಾ, ಸತ್ತಿದೆಯಾ ಎಂದು ಅವರು ಪ್ರಶ್ನಿಸಿದ್ದಾರೆ.
ಏನು ಸಾಧನೆ ಎಂದು ಈ ಸರ್ಕಾರ ಜನರಿಗೆ ಹೇಳುತ್ತದೆ. ಶೇ. ೪೦ ರಷ್ಟು ಕಮೀಷನ್, ಕೊವಿಡ್ ಹೆಸರಲ್ಲಿ ಕೊಳ್ಳೆ, ಅಧಿಕಾರದ ವರ್ಗದಲ್ಲಿ ಪೇಮೆಂಟ್ ಕೋಟಾ, ಪಿಎಸ್‌ಐ ನೇಮಕಾದಲ್ಲಿ ಕಾಸಿನಾಟ, ಸಹಾಯಕ ಪ್ರಾಧ್ಯಾಪಕರ ನೇಕಾತಿಯಲ್ಲಿ ನೋಟಿನಾಟ ಜೇಬು ತುಂಬಿಸಿಕೊಳ್ಳುವ ಧನದಾಹ ಬಿಟ್ಟರೆ ಜನರಿಗೆ ಈ ಸರ್ಕಾರ ಮಾಡಿದ್ದೇನು ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.