ಜನೋತ್ಸವದ ಮೇಲೆ ಕತ್ತಿ ಸಾವಿನ ಸೂತಕದ ಛಾಯೆ

ಬೆಂಗಳೂರು,ಸೆ.೭- ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ನಾಳೆ ದೊಡ್ಡಬಳ್ಳಾಪುರದಲ್ಲಿ ನಡೆಯಬೇಕಿದ್ದ ಸರ್ಕಾರದ ಸಾಧನೆಯ ಜನೋತ್ಸವ ಸಮಾವೇಶದ ಮೇಲೆ ಸೂತಕದ ಛಾಯೆ ಆವರಿಸಿದ್ದು, ಸಮಾವೇಶ ನಡೆಯುತ್ತದೆಯೋ ಇಲ್ಲವೋ ಎಂಬ ಅನುಮಾನಗಳು ಮೂಡಿವೆ.
ಈ ಹಿಂದೆ ಜು. ೨೮ ರಂದು ಜನೋತ್ಸವವನ್ನು ನಡೆಸಲು ನಿರ್ಧರಿಸಲಾಗಿತ್ತಾದರೂ ಮಂಗಳೂರಿನಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆ ಹಿನ್ನೆಲೆಯಲ್ಲಿ ಜನೋತ್ಸವವನ್ನು ಮುಂದೂಡಲಾಗಿತ್ತು. ಈಗ ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ಜನೋತ್ಸವವನ್ನು ಮುಂದೂಡಲಾಗುತ್ತದೆ ಎಂದು ಹೇಳಲಾಗುತ್ತಿದೆ.
ನಾಳಿನ ಜನೋತ್ಸವ ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ ನಡ್ಡಾ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಸೇರಿದಂತೆ ಹಲವು ರಾಷ್ಟ್ರೀಯ ನಾಯಕರು ಪಾಲ್ಗೊಳ್ಳುತ್ತಿದ್ದು, ಈ ಸಮಾವೇಶ ನಡೆಯುವ ಅನುಮಾನಗಳು ಉಂಟಾಗಿವೆ.
ಸಚಿವ ಉಮೇಶ್ ಕತ್ತಿ ಅವರ ನಿಧನದಿಂದ ಸಮಾವೇಶ ಮಾಡುವುದು ಬೇಡ, ಸೂತಕದ ಮಧ್ಯೆ ಸಮಾವೇಶ ನಡೆಸುವುದು ಸೂಕ್ತವಲ್ಲ. ಈ ಸಂದರ್ಭದಲ್ಲಿ ಸಮಾವೇಶ ನಡೆಸಿದರೆ ವಿಪಕ್ಷಗಳಿಗೂ ಟೀಕಾಸ್ತ್ರ ಕೊಟ್ಟಂತಾಗುತ್ತದೆ. ಸಮಾವೇಶವನ್ನು ಮುಂದೂಡಿ ಎಂದು ಬಿಜೆಪಿಯ ಕೆಲ ಮುಖಂಡರು ಮುಖ್ಯಮಂತ್ರಿಗಳಿಗೆ ಸಲಹೆ ಮಾಡಿದ್ದಾರೆ ಎಂದು ಹೇಳಲಾಗಿದೆ.
ಜನೋತ್ಸವಕ್ಕೆ ಎಲ್ಲ ಸಿದ್ಧತೆಗಳು ಆಗಿದ್ದು, ಈ ಸಂದರ್ಭದಲ್ಲಿ ಜನೋತ್ಸವವನ್ನು ಮುಂದೂಡಬೇಕೇ ಬೇಡವೇ ಎಂಬ ದ್ವಂದ್ವದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಇದ್ದು, ಬೊಮ್ಮಾಯಿ ಅವರ ನಿರ್ಧಾರದ ಮೇಲೆಯೇ ಜನೋತ್ಸವ ಸಮಾವೇಶ ನಿಂತಿದೆ. ಇದುವರೆಗೂ ಮುಖ್ಯಮಂತ್ರಿಗಳು ಈ ಬಗ್ಗೆ ಇನ್ನೂ ಯಾವುದೇ ತೀರ್ಮಾನ ಮಾಡಿಲ್ಲ.