(ಸಂಜೆವಾಣಿ ವಾರ್ತೆ)
ಬಳ್ಳಾರಿ, ಏ.12: ಕೆಆರ್ ಪಿ ಪಕ್ಷದ ಗಂಗಾವತಿ ಕ್ಷೇತ್ರದ ಅಭ್ಯರ್ಥಿ ಮಾನ ಸಚಿವ ಗಾಲಿ ಜನಾರ್ಧನರೆಡ್ಡಿ ಅವರ ವಿರುದ್ಧ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಗೆ ಗಣಿ ಉದ್ಯಮಿ ಟಪಾಲ್ ಗಣೇಶ್ ಅವರು 347 ಪುಟಗಳ ದೂರನ್ನು ಸಲ್ಲಿಸಿದ್ದಾರಂತೆ.
ಈ ಬಗ್ಗೆ ಪತ್ರಿಕಾ ಹೇಳಿಕೆ ನೀಡಿರುವ ಟಪಾಲ್ ಗಣೇಶ್. ರೆಡ್ಡಿ ಅವರ ಮೇಲೆ ಅಕ್ರಮ ಗಣಿಗಾರಿಕೆಯ, ಮನಿ ಲಾಂಡ್ರಿಂಗ್‌ನ ಗಂಭೀರ ಆರೋಪದ ಪ್ರಕರಣಗಳು ಇವೆ ಹೀಗಾಗಿ ಅವರ ಪಕ್ಷದ ಚಟುವಟಿಕೆಗಳನ್ನು ನಿರ್ಬಂಧಿಸಬೇಕು ಎಂದು ದೂರಿನ ಮನವಿಯಲ್ಲಿ ಉಲ್ಲೇಖಿಸಲಾಗಿದೆ.
ಜನಾರ್ಧನರೆಡ್ಡಿಯವರು ಎದುರಿಸುತ್ತಿರುವ ಅಕ್ರಮ ಗಣಿಗಾರಿಕೆ ಪ್ರಕರಣಗಳಿಗೆ ಸಂಬಂಧಿಸಿ ನ್ಯಾಯಾಲಯದ ಆದೇಶಗಳು, ಕಾನೂನು ಮತ್ತು ತನಿಖಾ ಪ್ರಾಧಿಕಾರಗಳು ನಡೆಸುತ್ತಿರುವ ತನಿಖೆಯ ವಿವರ ಹಾಗೂ ಸುಪ್ರೀಂ ಕೋರ್ಟ್ ನಿಂದ ರಚಿಸಲ್ಪಟ್ಟಿದ್ದ ಕೇಂದ್ರ ಉನ್ನತಾಧಿಕಾರ ಸಮಿತಿ ನೀಡಿರುವ ವರದಿಗೆ ಸಂಬಂಧಿಸಿದ ದಾಖಲೆಗಳನ್ನು ದೂರಿನೊಂದಿಗೆ ನೀಡಿದ್ದಾರಂತೆ.
ರಾಜ್ಯದಲ್ಲಿ ಸರ್ಕಾರಕ್ಕೆ ಸೇರಿದ ಅಪಾರ ಕಬ್ಬಿಣ ಅದಿರಿನ ಸಂಪತ್ತನ್ನು ಲೂಟಿ ಮಾಡಿದ ಆರೋಪ ಹೊತ್ತಿರುವ ಜನಾರ್ಧನರೆಡ್ಡಿ ಹಾಗೂ ಅವರ ಪತ್ನಿ ಲಕ್ಷ್ಮೀ ಅರುಣ ಅವರು ನೂತನ ಪಕ್ಷ ಸ್ಥಾಪಿಸಿ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿರುವುದನ್ನು ತಡೆಯಲು ಸಂಬಂಧಿಸಿದ ಸಕ್ಷಮ ಪ್ರಾಧಿಕಾರಗಳಿಗೆ ನಿರ್ದೇಶನ ನೀಡಬೇಕೆಂದು ರಾಷ್ಟ್ರಪತಿಗಳಿಗೆ ಮನವಿ ಮಾಡಿದೆ.
ಅಕ್ರಮ ಗಣಿಗಾರಿಕೆ ಮೂಲಕ ಕೋಟ್ಯಾಂತರ ರೂ.ಗಳನ್ನು ಸಂಪಾದಿಸಿರುವ ಅವರು ಕೆ.ಆರ್.ಪಿ. ಪಕ್ಷ ಸ್ಥಾಪಿಸಿದ್ದು, ಅವರ ಮೇಲಿರುವ ಪ್ರಕರಣಗಳು ತಾರ್ಕಿಕ ಅಂತ್ಯ ಕಾಣುವವರೆಗೆ ಅವರ ಪಕ್ಷದ ಚಟುವಟಿಕೆಗಳಿಗೆ ನಿರ್ಬಂಧಿಸಬೇಕು ಎಂದಿದ್ದಾರೆ.