ಜನಾಭಿಪ್ರಾಯ ಸಭೆ ರದ್ದು ಪಡಿಸುವಂತೆ ಒತ್ತಾಯ

ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮಾ.05: ತಾಲೂಕಿನ ಕೋರಮಂಡಲ್ ಸಕ್ಕರೆ ಕಾರ್ಖಾನೆಯವರು ಆರಂಭಿಸಲು ಹೊರಟಿರುವ ಎಥೆನಾಲ್ ಘಟಕ ಮತ್ತು ಡಿಸ್ಟಿಲರಿ ಘಟಕಗಳು ಪರಿಸರಕ್ಕೆ ಹಾನಿಕಾರಕವಾಗಿದ್ದರೂ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ಕಾರ್ಖಾನೆಯ ಪರನಿಂತು ಬುಧವಾರ (ಮಾರ್ಚಿ06)ದಂದು ಕಾರ್ಖಾನೆಯ ಆವರಣದಲ್ಲಿ ಜನಾಭಿಪ್ರಾಯ ಸಭೆ ಕರೆದಿರುವುದನ್ನು ಜಿಲ್ಲಾ ರೈತಸಂಘದ ಮಾಜಿ ಅಧ್ಯಕ್ಷ ಎಂ.ವಿ.ರಾಜೇಗೌಡ ಖಂಡಿಸಿದ್ದು ತಕ್ಷಣವೇ ಜನಾಭಿಪ್ರಾಯ ಸಭೆಯನ್ನು ರದ್ದುಪಡಿಸುವಂತೆ ಆಗ್ರಹಿಸಿದ್ದಾರೆ.
ಕೇವಲ ಸಕ್ಕರೆ ಉತ್ಪಾದನೆಯ ಉದ್ದೇಶದಿಂದ ತಾಲೂಕಿನಲ್ಲಿ ಆರಂಭವಾದ ಕೋರಮಂಡಲ್ ಕಾರ್ಖಾನೆ ಅನಂತರದ ದಿನಗಳಲ್ಲಿ ಕೋಜನರೇಷನ್ ವಿದ್ಯುತ್ ಉತ್ಪಾದನಾ ಘಟಕ ಮತ್ತು ಡಿಸ್ಟಿಲರಿ ಘಟಕ ಆರಂಭಕ್ಕೆ ಮುಂದಾಗಿತ್ತು. ಈ ಸಂದರ್ಭದಲ್ಲಿ 2012 ರ ಡಿಸಂಬರ್ ತಿಂಗಳಿನಲ್ಲಿ ಕಾರ್ಖಾನೆಯ ಆವರಣದಲ್ಲಿ ನಡೆದ ಜನಾಭಿಪ್ರಾಯ ಸಂಗ್ರಹ ಸಭೆಯಲ್ಲಿ ಕೇವಲ ಇಬ್ಬರು ವ್ಯಕ್ತಿಗಳನ್ನು ಹೊರತುಪಡಿಸಿ ನೂರಾರು ರೈತರು ಕಾರ್ಖಾನೆಯ ನೂತನ ಘಟಕಗಳ ಆರಂಭಕ್ಕೆ ವಿರೋಧ ವ್ಯಕ್ತಪಡಿಸಿದ್ದರು. ಕಾರ್ಖಾನೆ ಹೇಮಾವತಿ ನದಿ ದಂಡೆಯಲ್ಲಿರುವ ಕಾರಣ ಈಗಾಗಲೇ ಇಲ್ಲಿ ಪರಿಸರ ಮಾಲಿನ್ಯ ಸಮಸ್ಯೆ ಕಾಣಿಸಿಕೊಂಡಿದೆ. ಹಾರುಬೂದಿ ಸಮಸ್ಯೆ, ಕಾರ್ಖಾನೆಯ ತ್ಯಾಜ್ಯ ನೀರಿನ ಸಮಸ್ಯೆಗಳು ಈ ಭಾಗದ ಜನರನ್ನು ಕಾಡುತ್ತಿವೆ. ಕಾರ್ಖಾನೆಯ ನೂತನ ಘಟಕಗಳಿಗೆ ಜನಾಭಿಪ್ರಾಯ ವಿರುದ್ದವಾಗಿರುವುದನ್ನು 2012 ರ ಸಭೆಯಲ್ಲಿಯೇ ಜಿಲ್ಲಾಡಳಿತ ಮತ್ತು ಪರಿಸರ ಮಾಲಿನ್ಯ ನಿಯಂತ್ರಣ ಮಂಡಲಿ ಕಂಡುಕೊಂಡಿದೆ. ಆ ವಿರೋಧದ ನಡುವೆಯೂ ಕಾರ್ಖಾನೆ ತನ್ನು ವಿದ್ಯುತ್ ಉತ್ಪಾದನಾ ಘಟಕವನ್ನು ಆರಂಭಿಸಿದ ಕಾರಣ ರಾಜ್ಯ ರೈತಸಂಘ ಚೆನ್ನೈನ ಹಸಿರು ನ್ಯಾಯಾಧೀಕರಣದಲ್ಲಿ ಅಪೀಲು ಸಂಖ್ಯೆ 121/2016 ರಲ್ಲಿ ಪ್ರಶ್ನಿಸಿತು. ಹಸಿರು ನ್ಯಾಯಾಧೀಕರಣದಲ್ಲಿ ವಿಚಾರಣೆ ನಡೆಯುತ್ತಿದ್ದ ಸಂದರ್ಭದಲ್ಲಿ ಕೋರಮಂಡಲ್ ಕಾರ್ಖಾನೆ ಡಿಸ್ಟಿಲರಿ ಘಟಕವನ್ನು ಸ್ಥಾಪನೆ ಮಾಡುವುದಿಲ್ಲ. ರೈತರಿಂದ ದೊರೆಯಬಹುದಾದ ನೈಸರ್ಗಿಕ ಉರುವಲನ್ನು ಬಳಸಿ ವಿದ್ಯುತ್ ಉತ್ಪಾದನೆ ಮಾಡುವ ಷರತ್ತಿನೊಂದಿಗೆ ಕೋಜನ್ ಘಟಕ ಆರಂಭಿಸಿ ವಿದ್ಯುತ್ ಉತ್ಪಾದನೆ ಮಾಡುತ್ತಿದೆ. ಇದೀಗ ನ್ಯಾಯಾಲಯಕ್ಕೆ ನೀಡಿದ್ದ ಮಾತಿನಂತೆ ನಡೆದುಕೊಳ್ಳದೆ ಎಥೆನಾಲ್ ಘಟಕ ಮತ್ತು ಡಿಸ್ಟಿಲರಿ ಘಟಕ ಸ್ಥಾಪನೆಗೆ ಮುಂದಾಗಿದ್ದು ಹೇಮಾವತಿ ನದಿ ದಂಡೆಯ ಜನರಿಗೆ ಮತ್ತು ಕಾರ್ಖಾನೆ ಸುತ್ತಮುತ್ತಲ ಗ್ರಾಮಗಳ ರೈತರ ಬದುಕಿಗೆ ಮರಣ ಶಾಸನ ಬೆರಯಲು ಮುಂದಾಗಿದೆ.
ಕಾರ್ಖಾನೆಯ ನೂತನ ಘಟಕಗಳ ಸ್ಥಾಪನೆಯಿಂದ ಹೇಮಾವತಿ ನದಿ ಮತ್ತು ಕಾರ್ಖನೆಯ ಸುತ್ತಮುತ್ತಲ ಪರಿಸರದ ಮೇಲಾಗುವ ದುಷ್ಪರಿಣಾಮಗಳನ್ನು ಅಧ್ಯಯನ ಮಾಡಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕಾಗಿದ್ದ ಪರಿಸರ ಇಲಾಖೆ ಮತ್ತು ಮಂಡ್ಯ ಜಿಲ್ಲಾಧಿಕಾರಿಗಳು ತಮ್ಮ ಕರ್ತವ್ಯ ಮತ್ತು ಜವಾಬ್ದಾರಿಯನ್ನು ಮರೆತು ಕಾರ್ಖಾನೆಯ ಪರ ಕೆಲಸ ಮಾಡುತ್ತಿದ್ದಾರೆ. ಡಿಸ್ಟಿಲರಿ ಸ್ಥಾಪಿಸಲು ಅನುವು ಮಾಡಿಕೊಡುವ ಏಕೈಕ ದುರುದ್ದೇಶದಿಂದ ಜಿಲ್ಲಾಡಳಿತ ಮಾರ್ಚಿ 06 ರ ಬುಧವಾರ ಜನಾಭಿಪ್ರಾಯ ಸಂಗ್ರಹದ ಹೆಸರಿನಲ್ಲಿ ಸಾರ್ವಜನಿಕ ಸಭೆ ಕರೆದಿದೆ. ಇದು ಹಸಿರು ನ್ಯಾಯಾಲಯದ ಮುಂದೆ ಕಾರ್ಖಾನೆ ನೀಡಿರುವ ಹೇಳಿಕೆಗೆ ವಿರುದ್ದವಾಗಿದ್ದು ಪರಿಸರ ಇಲಾಖೆ ಮತ್ತು ಜಿಲ್ಲಾಡಳಿತ ನ್ಯಾಯಪೀಠಕ್ಕೆ ತೋರಿಸುತ್ತಿರವ ಅಗೌರವವಾಗಿದೆ. ಕಾನೂನಿನ ನಿಯಮಗಳನ್ನು ಮೀರಿ ಪ್ರತಿಯೊಂದನ್ನು ಜನಾಭಿಪ್ರಾಯದ ಹೆಸರಿನಲ್ಲಿಯೇ ಮಾಡುವುದಾದರೆ ಸಂವಿದಾನದ ಅಗತ್ಯವೇ ಇರುವುದಿಲ್ಲ ಎಂದಿರುವ ರಾಜೇಗೌಡ ಜಿಲ್ಲಾಡಳಿತ ತಕ್ಷಣವೇ ಮಾರ್ಚಿ 06 ರ ಸಾರ್ವಜನಿಕ ಸಭೆಯನ್ನು ರದ್ದುಪಡಿಸಬೇಕು. ಕಾರ್ಖಾನೆಯ ನೂತನ ಘಟಕಗಳ ಆರಂಭದಿಂದ ಪರಿಸರದ ಮೇಲಾಗುವ ಹಾನಿಯನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಿ ಪರಿಸರ ಸಂರಕ್ಷಣೆಗೆ ಪೂರಕವಾದ ಕ್ರಮಗಳನ್ನು ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.