ಜನಾಗ್ರಹ ಆಂದೋಲನ’ ಸಮಿತಿಯ ಆನ್ ಲೈನ್ ಸಭೆ

ಸಾಣೇಹಳ್ಳಿ, ಮೇ.19; ರಾಜ್ಯದ ಜನಪರ ಸಂಘಟನೆಗಳ ಮುಖಂಡರು, ಸಮಾಜದ ಗಣ್ಯರು ಹಾಗೂ ಎಲ್ಲಾ ರಾಜಕೀಯ ಪಕ್ಷಗಳ ಮುಖಂಡರನ್ನೊಳಗೊಂಡ `ಜನಾಗ್ರಹ ಆಂದೋಲನ’ ಸಮಿತಿ ಆನ್‌ಲೈನ್‌ನಲ್ಲಿ ಆಯೋಜಿಸಿದ್ದ ತುರ್ತು ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳು ಬಸವಣ್ಣನವರ ಒಲೆ ಹತ್ತಿ ಉರಿದೊಡೆ ನಿಲಬಹುದಲ್ಲದೆ ಧರೆಹತ್ತಿ ಉರಿದೊಡೆ ನಿಲಬಹುದೇ? ಎನ್ನುವ ವಚನ ಈ ಕರೋನಾ ಕಾಲಘಟ್ಟದಲ್ಲಿ ಅರ್ಥಪೂರ್ಣವಾಗಿದೆ. ಪ್ರಸ್ತುತ ವಚನವನ್ನು ಈ ಕಾಲಘಟ್ಟಕ್ಕೆ ಹೋಲಿಸಿ ನೋಡುವುದಾದರೆ ಇಂದು ವಿಶ್ವಕ್ಕೆ ಬೆಂಕಿ ಬಿದ್ದಂತಿದೆ. ಈ ಸೂಕ್ಷö್ಮ ಸಂದರ್ಭವನ್ನು ಸೂಕ್ತ ರೀತಿಯಲ್ಲಿ ನಿಭಾಯಿಸಬೇಕಿದ್ದ ಕೇಂದ್ರ ಮತ್ತು ರಾಜ್ಯ ಸರ್ಕಾರಗಳೆಲ್ಲವೂ ಕೈಚೆಲ್ಲಿ `ಧರೆ ಹತ್ತಿ ಉರಿಯುವಂತೆ’ ಮಾಡಿವೆ. ಸರ್ಕಾರಗಳು ತನ್ನ ಹೊಣೆಗಾರಿಕೆಯನ್ನು ಅರ್ಥ ಮಾಡಿಕೊಂಡು ಈ ಸನ್ನಿವೇಶವನ್ನು ನಿಭಾಯಿಸಲು ಸನ್ನದ್ಧವಾಗಬೇಕು. ಆದರೆ ಇಂತಹ ಕಷ್ಟಕಾಲದಲ್ಲೂ ಕೆಲವರು ನಾವು ಎಷ್ಟು ಬಾಚೋದು, ಎಷ್ಟು ದೋಚೋದು ಎಂದು ಆಲೋಚಿಸುತ್ತಿರುವುದು ವಿಷಾದದ ಸಂಗತಿ. ಕೂಲಿಕಾರ್ಮಿಕರ ಮತ್ತು ಬಡವರ ಬದುಕು ಮೂರಾಬಟ್ಟೆಯಾಗಿದೆ. ಸರ್ಕಾರ ಬಡ-ಕೂಲಿಕಾರ್ಮಿಕರ ಕುಟುಂಬಗಳ ಹೊಟ್ಟೆ-ಬಟ್ಟೆಗೆ ಸೂಕ್ತ ವ್ಯವಸ್ಥೆ ಮಾಡಬೇಕು. ಆಸ್ಪತ್ರೆಗಳಲ್ಲಿ ಸಮರ್ಪಕವಾಗಿ ಬೆಡ್, ಆಕ್ಸಿಜನ್ ಮತ್ತು ಉಚಿತ ಚಿಕಿತ್ಸೆ ಒದಗಿಸಬೇಕು, ಕೃಷಿಕರಿಗೆ ಬೀಜ-ಗೊಬ್ಬರ, ಪರಿಕರಗಳನ್ನು ಕಡಿಮೆ ಬೆಲೆಗೆ ಕೊಡಬೇಕು. ಕೋಟ್ಯಾಧಿಪತಿಗಳಿಗೆ ಹೆಚ್ಚಿನ ತೆರಿಗೆ ವಿಧಿಸಿ, ಆ ಹಣವನ್ನು ಇಂಥ ಕೆಲಸ-ಕಾರ್ಯಗಳಿಗೆ ಬಳಸಲು ಮುಂದಾಗಬೇಕೆಂದು ಒತ್ತಾಯಿಸಿದರು. ಈ ಸರ್ವ ಪಕ್ಷಗಳ ಮತ್ತು ಸರ್ವ ಸಂಘಟನೆಗಳ ತುರ್ತು ಸಭೆಯಲ್ಲಿ ಧಾರವಾಡ ಸನಾ ಚಾರಿಟಬಲ್ ಟ್ರಸ್ಟ್ನ ವ್ಯವಸ್ಥಾಪಕ ಟ್ರಸ್ಟಿಗಳಾದ ಅಶ್ರಫ್ ಅಲಿ ಬಶೀರ್ ಅಹಮದ್ ಅವರು ಹಾಗೂ ಬಿಜಾಪುರದ ಅನೌಪಚಾರಿಕ ಶಿಕ್ಷಣ ಸಂಸ್ಥೆ  ನಿರ್ದೇಶಕರಾದ ಫಾ. ಟಿಯೋಲ್ ಅವರ ಮುಂದಾಳತ್ವದಲ್ಲಿ  `ಬದುಕು ಉಳಿಸುವ ಧ್ಯೇಯ’ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. `ಬದುಕು ಉಳಿಸುವ ಧ್ಯೇಯ’ದ ತಂಡಗಳು ಇನ್ನು ಮುಂದೆ ಪ್ರತಿಜಿಲ್ಲೆಯಲ್ಲಿಯೂ ನೊಂದವರನ್ನು ತಲುಪಿ ಸಹಾಯಹಸ್ತ ಚಾಚಲು ಸನ್ನದ್ಧವಾಗಿವೆ.ಸಭೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ಮಾಜಿ ಐಎಎಸ್ ಅಧಿಕಾರಿ ಶಶಿಕಾಂತ್ ಸೆಂಥಿಲ್, ಹಿರಿಯ ಬಂಡಾಯ ಸಾಹಿತಿ ಬರಗೂರು ರಾಮಚಂದ್ರಪ್ಪ, ದಲಿತ ಸಂಘರ್ಷ ಸಮಿತಿಯ ಮಾವಳ್ಳಿ ಶಂಕರ್, ಕರ್ನಾಟಕ ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ, ಹೈಕೋರ್ಟ್ನ ಹಿರಿಯ ವಕೀಲ ಕಾ ಎಸ್ ಬಾಲನ್, ಗ್ರಾಮೀಣ ಕೂಲಿಕಾರರ ಸಂಘಟನೆಯ ಸ್ವರ್ಣಾಭಟ್, ಮಾಜಿ ಸಚಿವೆ ಬಿ ಟಿ ಲಲಿತಾನಾಯಕ್, ಜವಹರಲಾಲ್ ನೆಹರೂ ವಿಶ್ವವಿದ್ಯಾಲಯದ ನಿವೃತ್ತ ಪ್ರಾಧ್ಯಾಪಕ ಪುರುಷೋತ್ತಮ ಬಿಳಿಮಲೆ, ಬೆಳಗಾವಿಯ ಹಿರಿಯ ರೈತ ನಾಯಕ ಸಿದ್ದನಗೌಡ ಮೊದಗಿ, ಜಮಾತೆ ಇಸ್ಲಾಮಿ ಹಿಂದ್‌ನ ರಾಜ್ಯ ಉಪಾಧ್ಯಕ್ಷ ಮೊಹಮ್ಮದ್ ಯೂಸಫ್ ಖನ್ನಿ ಇತರರಿದ್ದರು.