ಜನಾಕ್ರೋಶಕ್ಕೆ ಮಣಿದ ಸರ್ಕಾರ

ಬೆಂಗಳೂರು,ಜು.೧೬- ಸರ್ಕಾರಿ ಕಚೇರಿಗಳಲ್ಲಿ ಫೋಟೊ ವೀಡಿಯೊ ಚಿತ್ರೀಕರಣ ನಿರ್ಬಂಧದ ಆದೇಶವನ್ನು ಸರ್ಕಾರ ರಾತ್ರೋ ರಾತ್ರಿ ವಾಪಸ್ ಪಡೆದಿದೆ.
ಸರ್ಕಾರಿ ಕಚೇರಿಗಳಲ್ಲಿ ಫೊಟೊ ವೀಡಿಯೊ ಮಾಡುವಂತಿಲ್ಲ ಎಂದು ನಿನ್ನೆ ಡಿಪಿಎಆರ್ ಹೊರಡಿಸಿದ್ದ ಆದೇಶಕ್ಕೆ ವ್ಯಾಪಕ ಟೀಕೆ, ಸಾರ್ವಜನಿಕ ಆಕ್ರೋಶ ವ್ಯಕ್ತವಾದ ಬೆನ್ನಲ್ಲೆ ರಾತ್ರೋ ರಾತ್ರಿ ಸರ್ಕಾರ ಈ ಆದೇಶವನ್ನು ವಾಪಸ್ ಪಡೆದಿದೆ.
ಸರ್ಕಾರಿ ಕಚೇರಿಗಳಲ್ಲಿ ವೀಡಿಯೊ ಮತ್ತು ಫೋಟೊ ಚಿತ್ರೀಕರಣ ನಿರ್ಬಂಧದ ಆದೇಶವನ್ನು ವಾಪಸ್ ಪಡೆದಿರುವ ಬಗ್ಗೆ ನಿನ್ನೆ ಮಧ್ಯರಾತ್ರಿ ೨ರ ಸುಮಾರಿಗೆ ಮುಖ್ಯಮಂತ್ರಿ ಕಚೇರಿಯಿಂದ ಮಾಹಿತಿ ಹೊರ ಬಿದ್ದಿದೆ.
ರಾಜ್ಯದ ಸರ್ಕಾರಿ ನೌಕರರ ಸಂಘ ಸರ್ಕಾರಿ ಕಚೇರಿಗಳಲ್ಲಿ ಫೋಟೊ ಮತ್ತು ವೀಡಿಯೊ ಚಿತ್ರೀಕರಣವನ್ನು ನಿರ್ಬಂಧಿಸುವಂತೆ ಮನವಿ ಸಲ್ಲಿಸಿತ್ತು. ಈ ಮನವ ಆಧರಿಸಿ ಡಿಪಿಎಆರ್ ನಿನ್ನೆ ಆದೇಶ ಹೊರಡಿಸಿ ಇನ್ನು ಮುಂದೆ ರಾಜ್ಯದ ಯಾವುದೇ ಸರ್ಕಾರಿ ಕಚೇರಿಗಳಲ್ಲಿ ಫೋಟೊ ವೀಡಿಯೊ ಮಾಡುವುದನ್ನು ನಿರ್ಬಂಧಿಸಿ ಆದೇಶ ಹೊರಡಿಸಿತ್ತು.ಸರ್ಕಾರಿ ಕಚೇರಿಗಳಿಗೆ ಆಗಮಿಸುವ ಕೆಲವರು ನೌಕರರ ಫೋಟೊ ವೀಡಿಯೊ ಮಾಡಿ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಅದರಲ್ಲೂ ಮಹಿಳಾ ಸರ್ಕಾರಿ ನೌಕರರಿಗೆ ಸಮಸ್ಯೆಯಾಗುತ್ತಿದೆ. ಹಾಗಾಗಿ, ಈ ಆದೇಶ ಹೊರಡಿಸಿರುವುದಾಗಿ ಸರ್ಕಾರ ಹೇಳಿತ್ತು.
ಸರ್ಕಾರದ ಈ ಆದೇಶಕ್ಕೆ ವ್ಯಾಪಕ ಟೀಕೆ ವ್ಯಕ್ತವಾಗಿ ಸಾಮಾಜಿಕ ಜಾಲತಾಣಗಳಲ್ಲೂ ಆಕ್ರೋಶ ವ್ಯಕ್ತವಾಗಿದೆ. ಶೇ. ೪೦ರ ಲಂಚದ ಆರೋಪಕ್ಕೆ ಗುರಿಯಾಗಿರುವ ಸರ್ಕಾರ, ಭ್ರಷ್ಟಾಚಾರ ಅನಿರ್ಬಂಧಿತವಾಗಿ ನಡೆಯಲು ಅನುಕೂಲ ಮಾಡಿಕೊಡುವುದಕ್ಕೆ ಫೋಟೊ ವೀಡಿಯೊ ಚಿತ್ರೀಕರಣ ನಿಷೇಧ ಹೇರಿದೆ ಎಂದು ಟೀಕೆಗಳು ವ್ಯಕ್ತವಾಗಿದ್ದವು.ಸಾರ್ವಜನಿಕರ ಟೀಕೆ, ಆಕ್ರೋಶಗಳಿಗೆ ಮಣಿದ ಸರ್ಕಾರ, ರಾತ್ರೋ ರಾತ್ರಿ ಈ ಆದೇಶವನ್ನು ವಾಪಸ್ ಪಡೆದಿದೆ. ಮುಖ್ಯಮಂತ್ರಿ ಸೂಚನೆ
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಸೂಚನೆ ಮೇರೆಗೆ ಈ ಆದೇಶವನ್ನು ವಾಪಸ್ ಪಡೆಯಲಾಗಿದೆ. ಡಿಪಿಎಆರ್ ಹೊರಡಿಸಿದ್ದ ಈ ಆದೇಶವನ್ನು ಪರಿಶೀಲನೆ ನಡೆಸಿದ ಮುಖ್ಯಮಂತ್ರಿಗಳು, ರಾತ್ರಿಯೇ ಆದೇಶ ವಾಪಸ್ ಪಡೆಯುವ ಹೊಸ ಆದೇಶವನ್ನು ಹೊರಡಿಸುವಂತೆ ಸೂಚನೆ ನೀಡಿದ್ದರು. ಅದರಂತೆ ನಿನ್ನೆ ಮಧ್ಯರಾತ್ರಿ ೨ ಗಂಟೆ ವೇಳೆಗೆ ಫೋಟೊ ಮತ್ತು ವೀಡಿಯೊ ಚಿತ್ರೀಕರಣ ನಿರ್ಬಂಧದ ಆದೇಶವನ್ನು ವಾಪಸ್ ಪಡೆಯುವ ಆದೇಶ ಹೊರ ಬಿದ್ದಿದೆ.

ಗಮನಕ್ಕೆ ಬಂದಿರಲಿಲ್ಲ- ಸಿಎಂ
ಸರ್ಕಾರಿ ಕಚೇರಿಗಳಲ್ಲಿ ಫೋಟೊ ವೀಡಿಯೊ ಮಾಡದಂತೆ ನಿರ್ಬಂಧ ವಿಧಿಸಿ ಹೊರಡಿಸಿದ್ದ ಆದೇಶ ನನ್ನ ಗಮನಕ್ಕೆ ಬಂದಿರಲಿಲ್ಲ. ಈ ರೀತಿ ಯಾವುದೇ ನಿಷೇಧ ಹೇರಬಾರದು ಎಂಬ ಕಾರಣಕ್ಕೆ ಈ ಆದೇಶವನ್ನು ವಾಪಸ್ ಪಡೆಯುವ ತಾತ್ವಿಕ ತೀರ್ಮಾನ ಮಾಡಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಬೆಂಗಳೂರಿನ ಆರ್‌ಟಿ ನಗರದ ತಮ್ಮ ನಿವಾಸದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರ ಪಾರದರ್ಶಕವಾಗಿ ನಡೆಯುತ್ತಿದೆ. ನಾವು ಯಾವುದನ್ನೂ ಮುಚ್ಚಿಡುವುದಿಲ್ಲ. ಯಾರೂ ಏನೇ ಹೇಳಲಿ ನಮ್ಮ ಪಾರದರ್ಶಕ ಸರ್ಕಾರ ಎಂದರು.
ಕೆಲ ಸರ್ಕಾರಿ ನೌಕರರು ಕಚೇರಿಗಳಲ್ಲಿ ಫೋಟೊ ವೀಡಿಯೊ ನಿರ್ಬಂಧ ಮಾಡುವಂತೆ ಕೋರಿಕೆ ಸಲ್ಲಿಸಿದ್ದರು. ಅವರು ಹೇಳುವುದರಲ್ಲೂ ಅರ್ಥವಿದೆ. ಕೆಲವರು ಹೆಣ್ಣು ಮಕ್ಕಳ ಫೋಟೊ ತೆಗೆದು ತೊಂದರೆಯಾಗಿತ್ತು. ಏನೇ ಇರಲಿ ಫೋಟೊ ವೀಡಿಯೊ ಚಿತ್ರೀಕರಣದ ಆದೇಶ ವಾಪಸ್ ಪಡೆದು ಮೊದಲು ಇದ್ದಂತೆ ಎಲ್ಲವೂ ಇರಲಿ ಎಂದು ಸೂಚಿಸಿದ್ದೇನೆ ಎಂದರು.