ಜನಾಂಗೀಯ ಪೋಸ್ಟ್ ಉಪಪ್ರಧಾನಿ ಕ್ಷಮೆ

ಹೆಲ್ಸಿಂಕಿ (ಫಿನ್‌ಲ್ಯಾಂಡ್), ಜು.೧೨- ಸುಮಾರು ೧೨ ವರ್ಷಗಳ ಹಿಂದೆ ಮಾಡಿದ್ದ ಜನಾಂಗೀಯ ದ್ವೇಷದ ಕಾಮೆಂಟ್‌ಗಳಿಗೆ ಸಂಬಂಧಿಸಿದಂತೆ ಫಿನ್‌ಲ್ಯಾಂಡ್‌ನ ನೂತನ ಬಲಪಂಥೀಯ ಹಣಕಾಸು ಸಚಿವೆ, ಉಪಪ್ರಧಾನಿ ರಿಯಿಕ್ಕಾ ಪುರ್ರಾ ಅವರು ಇದೀಗ ಕ್ಷಮೆ ಯಾಚಿಸಿದ್ದಾರೆ.
ಮೂರು ವಾರಗಳ ಹಿಂದೆ ಫಿನ್‌ಲ್ಯಾಂಡ್‌ನಲ್ಲಿ ಹೊಸದಾಗಿ ಅಧಿಕಾರಕ್ಕೆ ಬಂದಿರುವ ಕನ್ಸರ್ವೇಟಿವ್ ಸರ್ಕಾರದಲ್ಲಿ ಪುರ್ರಾ ಅವರ ಫಿನ್ಸ್ ಪಕ್ಷವು ಉನ್ನತ ಮಟ್ಟದ ಕ್ಯಾಬಿನೆಟ್ ಹುದ್ದೆಗಳನ್ನು ಪಡೆದುಕೊಂಡಿದೆ. ಅದೂ ಅಲ್ಲದೆ ಸ್ವತಹ ಪುರ್ರಾ ಅವರೇ ಹಣಕಾಸು ಸಚಿವೆಯಾಗಿ ಅಧಿಕಾರ ಸ್ವೀಕರಿಸಿದ್ದಾರೆ. ಆದರೆ ಸುಮಾರು ೧೫ ವರ್ಷಗಳ ಹಿಂದೆ ಪುರ್ರಾ ಅವರು ಮಾಡಿದ ಜನಾಂಗೀಯ ಸಂಬಂಧಿತ ಸರಣಿ ಕಮೆಂಟ್‌ಗಳು ಇದೀಗ ಚರ್ಚೆಗೆ ಗ್ರಾಸವಾಗಿದ್ದು, ವಿವಾದ ಮೂಡಿಸಿದೆ. ಒಂದೆಡೆ ಅಧಿಕಾರ ಗಳಿಸಿದ ಕೆಲವೇ ದಿನಗಳಲ್ಲಿ ಸರ್ಕಾರ ಮತ್ತೆ ವಿವಾದಕ್ಕೀಡಾಗಿರುವುದು, ಅದೂ ಅಲ್ಲದೆ ಗುರುವಾರ ಅಮೆರಿಕಾ ಅಧ್ಯಕ್ಷ ಜೋ ಬೈಡೆನ್ ಅವರು ಸ್ವತಹ ಫಿನ್‌ಲ್ಯಾಂಡ್‌ಗೆ ಆಗಮಿಸಲಿದ್ದು, ಇದರ ನಡುವೆ ಜನಾಂಗೀಯ ಪೋಸ್ಟ್ ವಿವಾದ ತಾರಕಕ್ಕೇರಿರುವುದು ದೇಶಕ್ಕೆ ಉತ್ತಮ ಬೆಳವಣಿಗೆ ಅಲ್ಲ ಎಂಬ ಮಾತು ಸದ್ಯ ಕೇಳಿ ಬರುತ್ತಿದೆ. ಇನ್ನು ಇದಕ್ಕೆ ಸಂಬಂಧಿಸಿದಂತೆ ಪುರ್ರಾ ಸದ್ಯ ಕ್ಷಮೆ ಯಾಚಿಸಿದ್ದಾರೆ. ಈ ಬಗ್ಗೆ ತನ್ನ ಹಳೆಯ ಪೋಸ್ಟ್‌ಗಳಿಗೆ ಪ್ರತಿಕ್ರಿಯೆ ನೀಡಿರುವ ಪುರ್ರಾ, ಇದೊಂದು ತೀರಾ ಮೂರ್ಖತನದ ವರ್ತನೆಯಾಗಿತ್ತು. ಪೋಸ್ಟ್‌ನಿಂದಾಗಿ ಯಾರಿಗಾದರೂ ಹಾನಿ ಹಾಗೂ ಅಸಮಾಧಾನ ಉಂಟಾಗಿದ್ದರೆ ಅದಕ್ಕೆ ಕ್ಷಮೆ ಯಾಚಿಸುತ್ತೇನೆ. ನಾನೊಬ್ಬಳು ಪರಿಪೂರ್ಣ ವ್ಯಕ್ತಿಯಲ್ಲ, ನಾನು ತಪ್ಪು ಮಾಡಿದ್ದೇನೆ ಎಂದು ತಿಳಿಸಿದ್ದಾರೆ. ಕಳೆದ ಎಪ್ರಿಲ್‌ನಲ್ಲಿ ನಡೆದ ಚುನಾವಣೆಯಲ್ಲಿ ವಲಸೆ ವಿರೋಧಿ ನೀತಿ ಹೊಂದಿರುವ ಫಿನ್ಸ್ ಪಕ್ಷವು ದ್ವಿತೀಯ ಸ್ಥಾನ ಪಡೆಯುವ ಮೂಲಕ ಅತ್ಯುತ್ತಮ ಫಲಿತಾಂಶಕ್ಕೆ ಕಾರಣವಾಗಿತ್ತು. ಸದ್ಯ ರಾಷ್ಟ್ರೀಯ ಒಕ್ಕೂಟದ ಪಕ್ಷದೊಂದಿಗೆ ಸಮಿಶ್ರ ಸರ್ಕಾರದೊಂದಿಗೆ ಅಧಿಕಾರ ನಡೆಸುತ್ತಿದೆ.