ಜನಸ್ವರಾಜ್ ಯಾತ್ರೆಗೆ ಸಿದ್ದು ಕಿಡಿ

ಬೆಂಗಳೂರು,ನ.೨೧- ರಾಜ್ಯದಲ್ಲಿ ಅಕಾಲಿಕ ಮಳೆಯಿಂದಾಗಿ ರೈತರು, ಜನರು ಸಂಕಷ್ಟದಲ್ಲಿ ಬದುಕು ಸಾಗಿಸುತ್ತಿರುವಾಗ ರಾಜ್ಯ ಬಿಜೆಪಿ ನಾಯಕರು ಜನಸ್ವರಾಜ್ ಯಾತ್ರೆ ಕೈಗೊಂಡಿರುವುದಕ್ಕೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಕಿಡಿಕಾರಿ ತಕ್ಷಣವೇ ಮುಖ್ಯಮಂತ್ರಿಗಳಿಂದ ಹಿಡಿದು ಸಚಿವರು, ಶಾಸಕರು ಜನರ ನೆರವಿಗೆ ಧಾವಿಸಬೇಕೆಂದು ಒತ್ತಾಯಿಸಿದ್ದಾರೆ.
ಅರ್ಧ ರಾಜ್ಯ ಅಕಾಲಿಕ ಮಳೆಯಿಂದ ತತ್ತರಿಸಿದೆ. ಕೈಗೆ ಬಂದ ಬೆಳೆ ಬಾಯಿಗೆ ಬರದೆ ರೈತರು ಗೋಳಾಡುತ್ತಿದ್ದಾರೆ. ಬಿಜೆಪಿ ಟೂರಿಂಗ್ ಟಾಕೀಸ್ ರೀತಿ ಜನಸ್ವರಾಜ್ ಎಂಬ ನಾಟಕ ಪ್ರದರ್ಶನ ಮಾಡಿಕೊಂಡು ಹೊರಟಿದೆ. ಇದು ಜನಸ್ವರಾಜ್ ಅಲ್ಲ, ಜನ ಬರ್ಬಾದ್ ಯಾತ್ರೆ ಎಂದು ಹರಿಹಾಯ್ದಿದ್ದಾರೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರೇ ನಿಮ್ಮ ಹನಿಮೂನ್ ಕಾಲ ಮುಗಿದಿದೆ. ನಾಟಕ ಪ್ರದರ್ಶನದ ಈ ಯಾತ್ರೆಯನ್ನು ಮೊದಲು ನಿಲ್ಲಿಸಿ, ಸಂಕಷ್ಟದಲ್ಲಿರುವ ಜನರ ನೆರವಿಗೆ ಧಾವಿಸಿ ಎಂದು ಅವರು ಒತ್ತಾಯಿಸಿದ್ದಾರೆ.
ಸಚಿವರುಗಳು ಅಧಿಕಾರಿಗಳ ತಂಡ ಕಟ್ಟಿಕೊಂಡು ಹೋಗಿ ಮಳೆ ನಷ್ಟದ ಅಂದಾಜು ನಡೆಸಿ ತಾತ್ಕಾಲಿಕ ಪರಿಹಾರ ನೀಡಲು ಸೂಚನೆ ನೀಡಿ ಅಗತ್ಯವಿರುವ ಕಡೆ ಗಂಜಿ ಕೇಂದ್ರಗಳನ್ನು ಆರಂಭಿಸಿ ಎಂದು ಸರ್ಕಾರಕ್ಕೆ ಸಲಹೆ ಮಾಡಿರುವ ಅವರು, ಮಳೆ ನಷ್ಟದ ಬಗ್ಗೆ ಸಮೀಕ್ಷೆ ನಡೆಸಿ ಹೆಚ್ಚಿನ ಪರಿಹಾರಕ್ಕೆ ಕೇಂದ್ರಕ್ಕೂ ಮನವಿ ಮಾಡಿ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.