ಜನಸ್ಪಂದನ ಸಭೆ ದೂರು ನೀಡುವ ವೇದಿಕೆಯಾಗಬಾರದು

ದಾವಣಗೆರೆ ಏ.೯; ಸರ್ಕಾರದ ಸೌಲಭ್ಯ ಪಡೆಯಲು ಸಾರ್ವಜನಿಕರು ಎದುರಿಸುವ ಸಮಸ್ಯೆಗಳು, ಮೂಲಭೂತ ಸೌಕರ್ಯಗಳ ಕೊರತೆ ನೀಗಿಸುವುದು ಸೇರಿದಂತೆ ಜನರ ಸಮಸ್ಯೆಗಳನ್ನು, ಜಿಲ್ಲಾ ಮಟ್ಟದಲ್ಲಿ ನಿವಾರಿಸುವ ಉದ್ದೇಶದಿಂದ ನಡೆಸಲಾಗುತ್ತಿರುವ ಜನಸ್ಪಂದನ ಸಭೆ, ಅಧಿಕಾರಿಗಳ ಹಾಗೂ ವ್ಯವಸ್ಥೆ ವಿರುದ್ಧ ದೂರುಗಳನ್ನು ನೀಡುವ ವೇದಿಕೆಯಲ್ಲ ಎಂದು ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಹೇಳಿದರು. ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ  ಏರ್ಪಡಿಸಲಾದ ಜನಸ್ಪಂದನ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿ, ಸರ್ಕಾರಿ ಸೌಲಭ್ಯ ಪಡೆಯಲು ಕಚೇರಿಗಳಿಗೆ ಅಲೆದಾಡಿ ನೋವು ಅನುಭವಿಸಿದವರು, ಮೂಲಭೂತ ಸೌರ್ಕಯಗಳ ಕೊರತೆ ಎದುರಿಸುವವರು, ಹೀಗೆ ವಿವಿಧ ಸವಲತ್ತು ಪಡೆಯದೆ ಶೋಷಿತರಾದವರ ಧ್ವನಿಯಾಗಲು ಜನಸ್ಪಂದನ ಸಭೆ ನಡೆಸಲಾಗುತ್ತಿದೆ. ಈ ಸಭೆಯ ಮೂಲಕ ಹಲವರ ಸಮಸ್ಯೆಗಳಿಗೆ ಪರಿಹಾರವನ್ನೂ ಕಂಡುಕೊಳ್ಳಲಾಗುತ್ತಿದೆ. ಆದರೆ ಇತ್ತೀಚಿನ ದಿನಗಳಲ್ಲಿ ಜನಸ್ಪಂದನ ಸಭೆಗಳಲ್ಲಿ ಅಧಿಕಾರಿಗಳ ವಿರುದ್ಧ ದೂರು ಅರ್ಜಿ, ವೈಯಕ್ತಿಕ ಅಥವಾ ಇನ್ನಿತರೆ ದ್ವೇಷದ ಹಿನ್ನೆಲೆಯಲ್ಲಿ ಅಧಿಕಾರಿಗಳ ಹಾಗೂ ವ್ಯವಸ್ಥೆಯ ವಿರುದ್ಧ ದೂರು ನೀಡಿಕೆಯ ಅರ್ಜಿಗಳು ಹೆಚ್ಚು ಸಲ್ಲಿಕೆಯಾಗುತ್ತಿರುವುದನ್ನು ಗಮನಿಸಲಾಗಿದೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದ ಜಿಲ್ಲಾಧಿಕಾರಿಗಳು, ಜನರ ಸಮಸ್ಯೆಗಳಿಗೆ ಸ್ಪಂದಿಸುವ ಕಳಕಳಿಯನ್ನಿಟ್ಟುಕೊಂಡು ನಡೆಸಲಾಗುತ್ತಿರುವ ಜನಸ್ಪಂದನ ಸಭೆಯನ್ನು ದೂರು ನೀಡುವ ವೇದಿಕೆಯನ್ನಾಗಿಸಿಕೊಂಡರೆ ಅದನ್ನು ಸಹಿಸುವುದಿಲ್ಲ ಎಂದರು. ಅಧಿಕಾರಿಗಳೂ ಕೂಡ ಸಾರ್ವಜನಿಕ ಕುಂದುಕೊರತೆಗಳು, ಸಮಸ್ಯೆಗಳಿಗೆ ಸಂಬAಧಿಸಿದ ಅರ್ಜಿಗಳನ್ನು ಸಂಕುಚಿತ ಮನೋಭಾವದಿಂದ ನೋಡದೆ, ವಿಶಾಲ ಮನಸ್ಸಿನಿಂದ ನೋಡಬೇಕು. ಜನರ ಸಮಸ್ಯೆಗಳಿಗೆ ಸ್ಪಂದಿಸಿ, ಜಿಲ್ಲಾಡಳಿತಕ್ಕೆ ಹಾಗೂ ಸರ್ಕಾರಕ್ಕೆ ಒಳ್ಳೆಯ ಹೆಸರು ತರುವಂತೆ ಕೆಲಸ ಮಾಡಿ ಎಂದು ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಹೇಳಿದರು. ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಎಂಬ ಕಾರ್ಯಕ್ರಮದಡಿ ಪ್ರತಿ ತಿಂಗಳ ಮೂರನೆ ಶನಿವಾರದಂದು ಕುಗ್ರಾಮಗಳಿಗೆ ತೆರಳಿ ಗ್ರಾಮ ವಾಸ್ತವ್ಯ ಮಾಡಲಾಗುತ್ತಿದೆ. ತಹಸಿಲ್ದಾರರು ಕೂಡ ಆಯಾ ತಾಲ್ಲೂಕು ಮಟ್ಟದಲ್ಲಿ ಗ್ರಾಮ ವಾಸ್ತವ್ಯ ಮಾಡಿ, ಸ್ಥಳೀಯ ಸಮಸ್ಯೆಗಳಿಗೆ ಸ್ಥಳೀಯವಾಗಿಯೇ ಪರಿಹಾರ ನೀಡಲಾಗುತ್ತಿದೆ. ಜಿಲ್ಲೆಯಲ್ಲಿ ಈಗಾಗಲೆ ಎರಡು ಬಾರಿ ಗ್ರಾಮ ವಾಸ್ತವ್ಯ ಮಾಡಿದ್ದು, ಸಮಸ್ಯೆಗಳನ್ನು ಹೊತ್ತು ಜಿಲ್ಲಾಧಿಕಾರಿಗಳ ಕಚೇರಿಗೆ ಬರುವವರ ಸಂಖ್ಯೆಯೂ ಕಡಿಮೆಯಾಗಿದೆ. ಕೋವಿಡ್ ಸೋಂಕು ಹರಡುವ ಭೀತಿ ಇದ್ದು, ಸದ್ಯ ದಾವಣಗೆರೆ ಜಿಲ್ಲೆಯಲ್ಲಿ ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆದರೂ ಸಾರ್ವಜನಿಕರು ಮೈಮರೆಯುವ ಹಾಗಿಲ್ಲ, ತಪ್ಪದೆ ಮಾಸ್ಕ್ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಡ್ಡಾಯವಾಗಿದೆ ಎಂದರು. ದಾವಣಗೆರೆಯಲ್ಲಿ ಜಯದೇವ ಹೃದ್ರೋಗ ಉಪಕೇಂದ್ರವನ್ನು ಪ್ರಸಕ್ತ ಬಜೆಟ್‌ನಲ್ಲಿ ಸರ್ಕಾರ ಮಂಜೂರು ಮಾಡಿದ್ದು, ಇದಕ್ಕಾಗಿ ಪ್ರಕ್ರಿಯೆ ಪ್ರಾರಂಭಿಸಲಾಗಿದೆ. ದಾವಣಗೆರೆ ನಗರ ವ್ಯಾಪ್ತಿಯಲ್ಲಿ ಕನಿಷ್ಟ 2 ಎಕರೆ ಭೂಮಿಯ ಅಗತ್ಯವಿದೆ, ನಿವೇಶನ ಗುರುತಿಸಿ, ಮಂಜೂರು ಮಾಡುವಂತೆ ದಾವಣಗೆರೆ ಚಿಗಟೇರಿ ಜಿಲ್ಲಾಸ್ಪತ್ರೆ ಶಸ್ತçಚಿಕಿತ್ಸಕ ಡಾ. ಜಯಪ್ರಕಾಶ್ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು. ದಾವಣಗೆರೆ ನಗರ ವ್ಯಾಪ್ತಿಯಲ್ಲಿ 2 ಎಕರೆಯಷ್ಟು ವಿಸ್ತಾರದ ಭೂಮಿ ದೊರೆಯುವುದು ಕಷ್ಟ, ಹೀಗಾಗಿ ನಗರಕ್ಕೆ ಸಮೀಪದಲ್ಲಿ ಭೂಮಿ ಗುರುತಿಸಿ, ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ಉಪವಿಭಾಗಾಧಿಕಾರಿಗಳಿಗೆ ಸೂಚನೆ ನೀಡಿದರು. ಪೊಲೀಸ್ ಇಲಾಖೆಯಲ್ಲಿ ಹೆಡ್‌ಕಾನ್ಸ್ಟೇಬಲ್ ಆಗಿ ಕೆಲಸ ಮಾಡುತ್ತಿದ್ದ ತನ್ನ ಪತಿ ಅಪಘಾತಕ್ಕೊಳಗಾಗಿ ಕೋಮಾ ಸ್ಥಿತಿಯಲ್ಲಿದ್ದಾರೆ, ಹೀಗಾಗಿ ತಮ್ಮ ಕುಟುಂಬ ತೀವ್ರ ತೊಂದರೆಗೆ ಸಿಲುಕಿದೆ, ಆರ್ಥಿಕ ಹಾಗೂ ಚಿಕಿತ್ಸಾ ನೆರವು ಒದಗಿಸುವಂತೆ ಮಹಿಳೆ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸದರು, ಇದಕ್ಕೆ ಪ್ರತಿಕ್ರಿಯಿಸಿದ ಜಿಲ್ಲಾಧಿಕಾರಿಗಳು, ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಗತ್ಯ ನೆರವು ಒದಗಿಸುವ ಭರವಸೆ ನೀಡಿದರು. ಬೀದಿಬೀದಿಗಳಲ್ಲಿ ತಿರುಗಾಟ ನಡೆಸಿ ಮಸಾಲೆ ವ್ಯಾಪಾರ ಮಾಡುವ ದಾವಣಗೆರೆಯ ವ್ಯಕ್ತಿಯೊಬ್ಬರು ತಮ್ಮ ಪತ್ನಿ ಕೂಡ ವ್ಯಾಪಾರ ಮಾಡಲು ಸಿದ್ಧವಿದ್ದು, ಅಗತ್ಯ ಸಾಲ ಸೌಲಭ್ಯ ಒದಗಿಸುವಂತೆ ಕೋರಿ ಸಲ್ಲಿಸಿದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿಗಳು, ದಂಪತಿಗಳಿಬ್ಬರಿಗೂ ವ್ಯಾಪಾರ ಚಟುವಟಿಕೆ ನಡೆಸಲು ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಒಂದು ವಾರದ ಒಳಗಾಗಿ ಆರ್ಥಿಕ ಸೌಲಭ್ಯ ಒದಗಿಸಬೇಕು ಎಂದು ಮಹಾನಗರಪಾಲಿಕೆ ಆಯುಕ್ತರು ಹಾಗೂ ಲೀಡ್‌ಬ್ಯಾಂಕ್ ವ್ಯವಸ್ಥಾಪಕರಿಗೆ ಸ್ಥಳದಲ್ಲಿಯೇ ಸೂಚನೆ ನೀಡಿದರು. ದಾವಣಗೆರೆ ನಗರದ ವೃದ್ಧ ಬಸಪ್ಪ ಎಂಬುವವರು ತಮಗೆ ವಾಸಿಸಲು ಮನೆಯಿಲ್ಲ, ವಸತಿ ಸೌಲಭ್ಯ ನೀಡುವಂತೆ ಈ ಹಿಂದೆ ಹಲವು ಬಾರಿ ಅರ್ಜಿ ಸಲ್ಲಿಸಿದರೂ, ಮನೆ ಮಂಜೂರು ಆಗಿಲ್ಲ ಎಂದು ಜಿಲ್ಲಾಧಿಕಾರಿಗಳಿಗೆ ತಮ್ಮ ಅಳಲು ತೋಡಿಕೊಂಡರು. ಜಿಲ್ಲಾಧಿಕಾರಿಗಳು ಪ್ರತಿಕ್ರಿಯಿಸಿ, ಸದ್ಯ ನಗರ ವ್ಯಾಪ್ತಿಯಲ್ಲಿ ಮನೆ ನಿರ್ಮಿಸುತ್ತಿಲ್ಲ, ಮನೆಗಳನ್ನು ನಿರ್ಮಿಸುವ ಸಲುವಾಗಿ ನಿವೇಶನ ಗುರುತಿಸುವ ಕಾರ್ಯ ನಡೆಯುತ್ತಿದೆ. ಬರುವ ದಿನಗಳಲ್ಲಿ ತಮಗೆ ಆದ್ಯತೆ ಮೇರೆಗೆ ಮನೆ ಮಂಜೂರು ಮಾಡಲಾಗುವುದು ಎಂದು ಜಿಲ್ಲಾಧಿಕಾರಿಗಳು ಭರವಸೆ ನೀಡಿದರು. ಹೊನ್ನಾಳಿ ಮಾಜಿ ಶಾಸಕ ಶಾಂತನಗೌಡ ಅವರು, ಅರ್ಜಿ ಸಲ್ಲಿಸಿ ಗ್ರಾಮವೊಂದರಲ್ಲಿ ನೀರಿನ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲು ಯಾರೂ ಸ್ಥಳಾವಕಾಶ ನೀಡದಿದ್ದಾಗ ಆ ಗ್ರಾಮದ ಗಂಗೀಬಾಯಿ ಎಂಬುವವರ ಮನವೊಲಿಸಿ, ಅವರಿಗೆ ಬೋರ್‌ವೆಲ್ ಕೊರೆಯಿಸಿಕೊಡುವ ಭರವಸೆ ನೀಡಿ, ಅವರಿಗೆ ಸಂಬಂಧಿಸಿದ ಸ್ಥಳದಲ್ಲಿ ತಾವು ಶಾಸಕರಾಗಿದ್ದಾಗ ಓವರ್‌ಹೆಡ್ ಟ್ಯಾಂಕ್ ನಿರ್ಮಾಣ ಮಾಡಲಾಗಿತ್ತು. ಅಂಬೇಡ್ಕರ್ ಅಭಿವೃದ್ಧಿ ನಿಗಮದ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಿದ್ದು, ಆದರೆ ಇದುವರೆಗೂ ಅವರಿಗೆ ಬೋರ್‌ವೆಲ್ ಕೊರೆಯಿಸಿಕೊಟ್ಟಿಲ್ಲ. ಇದಕ್ಕೆ ರಾಜಕೀಯ ಕಾರಣಗಳಿದ್ದು, ನ್ಯಾಯ ಒದಗಿಸುವಂತೆ ಮನವಿ ಮಾಡಿದರು. ನಿಗಮದ ಅಧಿಕಾರಿಗಳು ಪ್ರತಿಕ್ರಿಯಿಸಿ, ನಿಗಮದ ವ್ಯವಸ್ಥಾಪಕ ನಿರ್ದೇಶಕರು, ರದ್ದುಪಡಿಸಿ ಆದೇಶ ನೀಡಿದ್ದಾರೆ ಎಂದು ಆದೇಶದ ಪ್ರತಿಯನ್ನು ಸಲ್ಲಿಸಿದರು.  ಗುತ್ತಿಗೆ ಆಧಾರದಲ್ಲಿ ಪ್ರಯೋಗಶಾಲಾ ತಂತ್ರಜ್ಞರ ಹುದ್ದೆಗೆ ತಮ್ಮನ್ನು 06 ತಿಂಗಳ ಅವಧಿಗೆ ನೇಮಿಸಲಾಗಿತ್ತು. ಆದರೆ ಕೇವಲ ಎರಡು ತಿಂಗಳ ಒಳಗಾಗಿಯೇ ತಮ್ಮನ್ನು ಕೆಲಸದಿಂದ ತೆಗೆದುಹಾಕಿದ್ದಾರೆ, ತಮ್ಮನ್ನು ಸೇವೆಯಲ್ಲಿ ಮುಂದುವರಿಯಲು ಅನುವು ಮಾಡಿಕೊಡಬೇಕು ಎಂದು ಮೂವರು ಮಹಿಳಾ ಅಭ್ಯರ್ಥಿಗಳು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು. ಆರೋಗ್ಯ ಇಲಾಖೆಯ ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅಧಿಕಾರಿಗಳೊಂದಿಗೆ ಚರ್ಚಿಸಿ ನೆರವು ಒದಗಿಸುವ ಭರವಸೆಯನ್ನು ಜಿಲ್ಲಾಧಿಕಾರಿಗಳು ನೀಡಿದರು. ಸಭೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಹನುಮಂತರಾಯ, ಅಪರ ಜಿಲ್ಲಾಧಿಕಾರಿ ಪೂಜಾರ್ ವೀರಮಲ್ಲಪ್ಪ, ಉಪವಿಭಾಗಾಧಿಕಾರಿ ಮಮತಾ ಹೊಸಗೌಡರ್, ದಾವಣಗೆರೆ ಮಹಾನಗರಪಾಲಿಕೆ ಆಯುಕ್ತ ವಿಶ್ವನಾಥ ಮುದಜ್ಜಿ ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.