
ಕೆಂಗೇರಿ.ನ೧೬:ಪೊಲೀಸ್ ಅಧಿಕಾರಿಗಳು ಜನತೆ ಜೊತೆ ಸೌಜನ್ಯದಿಂದ ವರ್ತಿಸಿ ನ್ಯಾಯ ದೊರಕಿಸಿಕೊಡಬೇಕು ಎಂದು ಗೃಹ ಸಚಿವ ಜಿ.ಪರಮೇಶ್ವರ್ ಹೇಳಿದರು. ಮೈಸೂರು- ಬೆಂಗಳೂರು ರಸ್ತೆಯಲ್ಲಿ ನಿರ್ಮಾಣವಾಗಿರುವ ಸುಮಾರು ೪ ಕೋಟಿ ವೆಚ್ಚದ ಕುಂಬಳಗೋಡು ನೂತನ ಪೊಲೀಸ್ ಠಾಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ಅನಿರೀಕ್ಷಿತವಾಗಿ ನಡೆಯುವ ಅಪರಾಧ ಪ್ರಕರಣಗಳನ್ನು ಕೆಲವೇ ಗಂಟೆಗಳಲ್ಲಿ ಭೇಧಿಸುವ ಮೂಲಕ ರಾಜ್ಯ ಪೊಲೀಸ್ ವ್ಯವಸ್ಥೆಯು ದೇಶಕ್ಕೆ ಮಾದರಿಯಾಗಿದೆ. ನ್ಯಾಯೋಚಿತವಾಗಿ ವರ್ತಿಸುವ ಮೂಲಕ ಪೊಲೀಸರು ಜನತಂತ್ರ ವ್ಯವಸ್ಥೆಯನ್ನು ಬಲಪಡಿಸಬೇಕು ಎಂದು ಹೇಳಿದರು.
ಯಶವಂತಪುರ ಕ್ಷೇತ್ರದ ಅಭಿವೃದ್ದಿಗೆ ಅನುದಾನದ ಬೇಡಿಕೆ ಸಲ್ಲಿಸಲಾಗಿತ್ತು. ಹೀಗಾಗಿ ಅನುದಾನ ಬಿಡುಗಡೆಯಾಗಿದೆ. ಅನುದಾನಕ್ಕಾಗಿ ಆರೋಪ ಮಾಡುವ ಬದಲು ಮುನಿರತ್ನ ಅವರು ಬೇಡಿಕೆ ಸಲ್ಲಿಸಲಿ.
ಪರಿಶೀಲಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ಎಸ್.ಟಿ.ಸೋಮಶೇಖರ್ ಅವರಿಗೂ ನನಗೆ ವಿಶೇಷ ಸಂಬಂಧ. ಹಾಗಾಗಿ ಅವರ ಕ್ಷೇತ್ರದ ಕಾರ್ಯಕ್ರಮಗಳಿಗೆ ಹಾಜರಾಗಿದ್ದೇನೆ. ಭೇಟಿಗೆ ವಿಶೇಷ ಅರ್ಥ ಕಲ್ಪಿಸಬೇಕಿಲ್ಲ ಎಂದರು.
ಪಕ್ಷಾಂತರಕ್ಕಾಗಿ ಯಶವಂತಪುರ ಕ್ಷೇತ್ರಕ್ಕೆ ಕ್ಷೇತ್ರಕ್ಕೆ ಅನುದಾನ ನೀಡುತ್ತಿಲ್ಲ. ಸ್ಥಳೀಯ ಶಾಸಕರು ಸರ್ಕಾರದೊಂದಿಗೆ ಸಮನ್ವಯ ಕಾಯ್ದುಕೊಂಡಿದ್ದಾರೆ. ಎಸ್.ಟಿ.ಎಸ್ ಅವರನ್ನು ತೆರೆಮರೆಯಿಂದ ಕಾಂಗ್ರೆಸ್ಸಿಗೆ ಸೆಳೆಯುವ ಪ್ರಶ್ನೆಯಿಲ್ಲ. ಮಾಧ್ಯಮದವರ ಉಪಸ್ಥಿತಿ ನಡುವೆ ಆ ಘೋಷಣೆ ಮಾಡಲಾಗುವುದು ಎಂದು ಚಟಾಕಿ ಹಾರಿಸಿದರು. ಬಿ ವೈ ವಿಜಯೇಂದ್ರ ನೇಮಕಾತಿ ಬಿಜೆಪಿಯ ಆಂತರಿಕ ವಿಷಯ. ಈ ಬಗ್ಗೆ ಪ್ರತಿಕ್ರಿಯಿಸುವುದಿಲ್ಲ. ಬಿಜೆಪಿ ನಡೆಯಿಂದ ಪಕ್ಷಕ್ಕೆ ಯಾವುದೇ ಆತಂಕವೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಇದೇ ವೇಳೆ ಮಾತನಾಡಿದ ಶಾಸಕ ಎಸ್.ಟಿ.ಸೋಮಶೇಖರ್ ಪೊಲೀಸ್ ಠಾಣೆ ಉದ್ಘಾಟನೆ ದಿನಾಂಕ ಮೊದಲೇ ನಿಗದಿಯಾಗಿತ್ತು. ಹೀಗಾಗಿ ಬಿ ವೈ ವಿಜಯೇಂದ್ರ ಅವರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಹಾಜರಾಗಲು ಸಾಧ್ಯವಾಗಲಿಲ್ಲ ಎಂದು ಹೇಳಿದರು.ವಿಧಾನ ಪರಿಷತ್ ಸದಸ್ಯ ಟಿ.ಎ. ಶರವಣ, ಸರ್ಕಲ್ ಇನ್ಸ್ಪೆಕ್ಟರ್ ಶಿವಾರೆಡ್ಡಿ, ಕುಂಬಳಗೋಡು ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮಕೃಷ್ಣ,ಉಪಾಧ್ಯಕ್ಷ ಗೋಪಾಲಕೃಷ್ಣ, ಮಾಜಿ ಅಧ್ಯಕ್ಷ ಚಿಕ್ಕರಾಜು,ಎನ್. ನರಸಿಂಹಮೂರ್ತಿ,ವೆಂಕಟೇಗೌಡ, ಪಂಚಾಯತಿ ಸದಸ್ಯರಾದ ಎನ್. ದೇವರಾಜು, ಅನೀಸ್,ಅನೀಫ್, ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ನಂಜೇಗೌಡ, ಧರ್ಮಯ್ಯ,ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ ಮಾಜಿ ಪ್ರಧಾನ ಕಾರ್ಯದರ್ಶಿ ಬಿ. ಆರ್. ಶಿವಮಾದಯ್ಯ, ಮತ್ತಿತರರು ಉಪಸ್ಥಿತರಿದ್ದರು