ಜನಸ್ನೇಹಿ ಕಾನೂನು ಸುವ್ಯವಸ್ಥೆಗೆ ಮೊದಲ ಆದ್ಯತೆ:ಚೇತನ ಆರ್

ಕಲಬುರಗಿ:ಜ.14: ಕಲಬುರಗಿ ಪೊಲೀಸ್ ಆಯುಕ್ತಾಲಯದ ವ್ಯಾಪ್ತಿಯಲ್ಲಿ ಕಾನೂನು ಸುವ್ಯವಸ್ಥೆ ಪಾಲನೆಗೆ ಮೊದಲ ಆದ್ಯತೆ ನೀಡಲಾಗುತ್ತಿದ್ದು, ಮುಖ್ಯವಾಗಿ ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ರಕ್ಷಣೆಗೆ ಜನಸ್ನೇಹಿ ಪೊಲೀಸ್ ವ್ಯವಸ್ಥೆಗಾಗಿ ಸಹಾಯವಾಣಿ-112 ಸಕ್ರಿಯಗೊಳಿಸಲಾಗುವುದು ಎಂದು ನೂತನ ಪೊಲೀಸ್ ಕಮಿಷನರ್ ಚೇತನ್ ಆರ್. ಸ್ಪಷ್ಟಪಡಿಸಿದರು.

ಇಲ್ಲಿನ ಪೊಲೀಸ್ ಕಮಿಷನರ್ ಕಚೇರಿಯ ಸಭಾಂಗಣದಲ್ಲಿ ಕರೆದಿದ್ದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಪೊಲೀಸ್ ಇಲಾಖೆಯಲ್ಲಿ ಸಹಾಯವಾಣಿ (112) ಸಕ್ರಿಯ ಸ್ಥಿತಿಯಲ್ಲಿದ್ದರೆ ಅಪರಾಧಗಳು ಸಂಭವಿಸುವುದಕ್ಕಿಂತಲೂ ಮೊದಲೇ ಪೊಲೀಸರು ಅಲರ್ಟ್ ಆಗಲು ಸಾಧ್ಯವಾಗುತ್ತದೆ. ಹಾಗಾಗಿ, ದುರ್ಬಲ ವರ್ಗದವರು, ಮಹಿಳೆಯರು ಮತ್ತು ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಗಳಿಗೆ ಕಡಿವಾಣ ಹಾಕುವುದು ಸಾಧ್ಯವಾಗುವಂತೆ ಇಲಾಖೆಯನ್ನು ಸನ್ನದ್ಧ ಸ್ಥಿತಿಯಲ್ಲಿ ಇರಿಸಲಾಗುವುದು ಎಂದು ಹೇಳಿದರು.

ಆಯುಕ್ತಾಲಯದ ವ್ಯಾಪ್ತಿಯಲ್ಲಿ ನೈಟ್ ಬೀಟ್ ವ್ಯವಸ್ಥೆ ಮತ್ತಷ್ಟು ಬಲಪಡಿಸಲಾಗುವುದು. ಅದರಲ್ಲೂ ಮುಖ್ಯವಾಗಿ ವರ್ತುಲ ರಸ್ತೆ ಮತ್ತು ಹೆಚ್ಚು ಜನ ಸಂಚಾರ ಇಲ್ಲದ ಪ್ರದೇಶಗಳಲ್ಲಿ ಅಪರಾಧ ಕೃತ್ಯಗಳಿಗೆ ಆಸ್ಪದವಿಲ್ಲದಂತೆ ಇಂತಹ ಪ್ರದೇಶಗಳಲ್ಲಿ ನೈಟ್ ಬೀಟ್ ಸಕ್ರಿಯಗೊಳಿಸಲಾಗುವುದು ಎಂದರು.

ಅತ್ಯಧಿಕ ಭಾರದ ಮರಳಿನ ಲಾರಿಗಳು ನಗರದೊಳಗೆ ಪ್ರವೇಶಿಸುವುದರಿಂದ ರಸ್ತೆಗಳ ಗುಣಮಟ್ಟ ಹಾಳಾಗುತ್ತಿದೆ. ಮೇಲಾಗಿ, ಸಂಚಾರಿ ವ್ಯವಸ್ಥೆಗೂ ತೊಂದರೆ ಆಗುತ್ತಿದೆ ಎಂಬ ಸುದ್ದಿಗಾರರ ಆತಂಕಕ್ಕೆ ಪ್ರತಿಕ್ರಿಯಿಸಿದ ಪೊಲೀಸ್ ಕಮಿಷನರ್, ಈ ಕುರಿತು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ಬೆಳಗ್ಗೆ 9ರಿಂದ 11 ಮತ್ತು ಸಂಜೆ 5ರಿಂದ 7 ಗಂಟೆವರೆಗೆ ನಗರದಲ್ಲಿ ವಾಹನ ದಟ್ಟಣೆ ಹೆಚ್ಚಿರುತ್ತದೆ. ಈ ಅಂಶವನ್ನು ಗಮನದಲ್ಲಿಟ್ಟುಕೊಂಡು ಟ್ರಾಫಿಕ್ ವ್ಯವಸ್ಥೆ ಸುಧಾರಣೆಗೆ ಅಗತ್ಯ ಕ್ರಮಗಳನ್ನು ರೂಪಿಸಲಾಗುವುದು. ಇನ್ನು, ಪೊಲೀಸ್ ಇಲಾಖೆಯ ಸಿಬ್ಬಂದಿಯ ಪೈಕಿ ಯಾರಾದರೂ ಸಮಾಜಘಾತುಕ ಶಕ್ತಿಗಳೊಂದಿಗೆ ಶಾಮೀಲಾಗಿರುವ ಕುರಿತು ದೂರುಗಳು ಬಂದರೆ, ಪರಿಶೀಲಿಸಿ ತಕ್ಷಣ ಕ್ರಮ ಜರುಗಿಸಲಾಗುವುದು ಎಂದು ಇಲಾಖೆಯ ಸಿಬ್ಬಂದಿಗೆ ಎಚ್ಚರಿಕೆಯ ಸಂದೇಶ ರವಾನಿಸಿದರು.

ಮಣಿಕಂಠ ರಾಠೋಡ್ ಗಡಿಪಾರು ಆದೇಶದ ವಿರುದ್ಧ ಹೈಕೋರ್ಟ್ ನೀಡಿರುವ ತಡೆಯಾಜ್ಞೆ ತೆರವಿಗೆ ಮನವಿ ಸಲ್ಲಿಸಲಾಗುವುದೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಈ ಕುರಿತು ಮೊದಲು ಏನೆಲ್ಲಾ ವಿದ್ಯಮಾನಗಳಾಗಿವೆ ಎಂಬುದನ್ನು ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

ಡಿಸಿಪಿ ಅಡ್ಡೂರು ಶ್ರೀನಿವಾಸಲು ಸುದ್ದಿಗೋಷ್ಠಿಯಲ್ಲಿದ್ದರು.


ಪಾರ್ಕಿಂಗ್ ವ್ಯವಸ್ಥೆ; ಆಟೋ ಚಾಲಕರೊಂದಿಗೆ ಸಭೆ

ಕಲಬುರಗಿ ನಗರದಲ್ಲಿ ಆಟೋರಿಕ್ಷಾ ಚಾಲಕರು ಎಲ್ಲೆಂದರಲ್ಲಿ ಆಟೋ ನಿಲ್ಲಿಸುತ್ತಾರೆ. ಇದರಿಂದ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂಬ ದೂರುಗಳು ಸಾಕಷ್ಟು ಬಂದಿವೆ. ಈ ಹಿನ್ನೆಲೆಯಲ್ಲಿ ಮಹಾನಗರ ಪಾಲಿಕೆಯ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ, ಅಧಿಕೃತ ಪಾರ್ಕಿಂಗ್ ಸ್ಥಳದಲ್ಲಿಯೇ ಪಾರ್ಕ್ ಮಾಡುವಂತೆ ಕ್ರಮ ಕೈಗೊಳ್ಳಲಾಗುವುದು. ಇದಕ್ಕಾಗಿ ಇಷ್ಟರಲ್ಲೇ ನಗರದ ಎಲ್ಲ ಆಟೋ ಚಾಲಕರ ಸಭೆ ಕರೆದು ಅವರೊಂದಿಗೆ ಚರ್ಚಿಸಿ ಅಗತ್ಯ ಸೂಚನೆಗಳನ್ನು ನೀಡಲಾಗುವುದು ಎಂದು ಪೊಲೀಸ್ ಕಮಿಷನರ್ ಚೇತನ್ ನುಡಿದರು.

ಠಾಣಾ ಸರಹದ್ದು; ಶೀಘ್ರ ಬೋರ್ಡ್ ವ್ಯವಸ್ಥೆ

ನಗರದ ಬೇರೆ ಬೇರೆ ಬಡಾವಣೆ ಮತ್ತು ರಸ್ತೆಗಳು ಬೇರೆ ಬೇರೆ ಪೊಲೀಸ್ ಠಾಣೆಗಳ ವ್ಯಾಪ್ತಿಗೆ ಬರುತ್ತವೆ. ಅಪಘಾತ ಮತ್ತು ತುರ್ತು ಸಂದರ್ಭಗಳಲ್ಲಿ ಯಾವ ಠಾಣೆಯನ್ನು ಸಂಪರ್ಕಿಸಬೇಕು ಎಂಬ ಗೊಂದಲ ಸಾರ್ವಜನಿಕರನ್ನು ಕಾಡುತ್ತದೆ. ಹಾಗಾಗಿ, ಇಷ್ಟರಲ್ಲೇ ಪೊಲೀಸ್ ಠಾಣೆಗಳ ಸರಹದ್ದು ಖಚಿತಪಡಿಸುವ ಬೋರ್ಡ್‍ಗಳನ್ನು ನಗರದ ಎಲ್ಲೆಡೆ ಅಳವಡಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಚೇತನ್ ಹೇಳಿದರು.