
ಸಂಜೆವಾಣಿ ವಾರ್ತೆ
ಶಿವಮೊಗ್ಗ, ನ.೫: ಸ್ಥಳೀಯ ಸಂಸ್ಥೆಗಳ ಅಧಿಕಾರಿ/ನೌಕರರು ಜನರ ಕಷ್ಟಗಳಿಗೆ ಉತ್ತಮವಾಗಿ ಸ್ಪಂದಿಸುವ ಮೂಲಕ ಜನಸ್ನೇಹಿಯಾಗಿ ಕೆಲಸ ಮಾಡಬೇಕು. ಜೊತೆಗೆ ಪ್ರಗತಿಗೆ ಹೆಚ್ಚಿನ ಗಮನ ನೀಡಬೇಕು ಎಂದು ಪೌರಾಡಳಿತ ನಿರ್ದೇಶನಾಲಯದ ನಿರ್ದೇಶಕರಾದ ಪ್ರಭುಲಿಂಗ ಕವಳಿಕಟ್ಟಿ ತಿಳಿಸಿದರು.ಮಹಾನಗರಪಾಲಿಕೆ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಪಾಲಿಕೆಯ ಪ್ರಗತಿ ಪರಿಶೀಲನೆ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ತಾಳ್ಮೆಯಿಂದ ಸಾರ್ವಜನಿಕರ ಅಹವಾಲು ಮತ್ತು ಕಷ್ಟಗಳಿಗೆ ಸ್ಪಂದಿಸಬೇಕು. ಜನಸ್ನೇಹಿ ಆಗುವ ಜೊತೆ ಜೊತೆಗೆ ಆಸ್ತಿ ತೆರಿಗೆ ವಸೂಲಾತಿ, ಉದ್ದಿಮೆ ಪರವಾನಗಿಯಂತಹ ಕೆಲಸಗಳನ್ನು ರಾಜೀಯಾಗದೇ ಗಟ್ಟಿಯಾಗಿ ನಿರ್ವಹಿಸಬೇಕು ಎಂದರು.ರಾಜ್ಯದಲ್ಲಿ ಮಾತ್ರವಲ್ಲ ರಾಷ್ಟ್ರ ಮಟ್ಟದಲ್ಲಿ ಗುರುತಿಸುವಂತೆ ಉತ್ತಮ ರೀತಿಯಲ್ಲಿ ಕೆಲಸ ಮಾಡಬೇಕು. ಹಲವಾರು ಮಾನದಂಡಗಳಲ್ಲಿ ಪಾಲಿಕೆ ನಿಗದಿತ ಗುರಿಗಿಂತ ಹೆಚ್ಚಿನ ಪ್ರಗತಿ ಸಾಧಿಸಿರುವುದು ಅಭಿನಂದನೀಯ. ಹಾಗೆಯೇ ಕಸ ನಿರ್ವಹಣೆ, ಪೌರ ಕಲ್ಯಾಣ ಸೇವೆಗಳಲ್ಲಿ ಇನ್ನೂ ಉತ್ತಮ ಸಾಧನೆ ಮಾಡಬೇಕು. ನಗರ ಸ್ವಚ್ಚ ಮತ್ತು ಸುಂದರವಾಗಿದೆ ಎಂದರೆ ಅದಕ್ಕೆ ಕಾರಣ ಪೌರಕಾರ್ಮಿಕರು. ಪೌರ ಕಾರ್ಮಿಕರು ಇನ್ನೂ ಹೆಚ್ಚಿನ ಶ್ರದ್ದೆಯಿಂದ ತಮ್ಮ ಕೆಲಸ ಮಾಡಬೇಕು. ಏನಾದರೂ ಬೇಡಿಕೆಗಳಿದ್ದಲ್ಲಿ ಪಾಲಿಕೆ ಅಥವಾ ತಮಗೆ ಸಲ್ಲಿಸಬಹುದೆಂದರು.ಯಾವುದೇ ಯೋಜನೆಯ ಅಂದಾಜು ಪಟ್ಟಿಯನ್ನು ತಯಾರಿಸುವಾಗ ಮೂಲ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ತಯಾರಿಸಬೇಕು. ಉಳಿಕೆ, ವ್ಯತ್ಯಾಸಗಳು ಆಗದಂತೆ ನೋಡಿಕೊಳ್ಳಬೇಕು. ಸಕಾಲಿಕವಾಗಿ ಪ್ರಸ್ತಾವನೆಗಳನ್ನು ನೀಡಿ ಅಪ್‍ಡೇಟ್ ಮಾಡಬೇಕು ಎಂದರು.14 ನೇ ಹಣಕಾಸು ಯೋಜನೆಯಡಿ ಇನ್ನೂ ಅನುದಾನ ಬಾಕಿ ಉಳಿಸಿಕೊಳ್ಳಲಾಗಿದೆ. 14 ನೇ ಹಣಕಾಸು ಅನುದಾನ ಖರ್ಚು ಮಾಡಿದರೆ 15 ನೇ ಹಣಕಾಸು ಬಿಡುಗಡೆಯಾಗುತ್ತದೆ. ನಿಗದಿತ ಅವಧಿಯೊಳಗೆ ಅನುದಾನ ಬಳಕೆ ಮಾಡಿಕೊಳ್ಳಬೇಕು.ಹಾಗೂ ಪೌರ ಕಾರ್ಮಿಕರ ಗೃಹಭಾಗ್ಯ ಯೋಜನೆಯಡಿ ಶೇ.50 ಕೆಲಸ ಮಾತ್ರ ಆಗಿದ್ದು, ಪೂರ್ಣಗೊಳಿಸಲು ಕ್ರಮ ವಹಿಸಬೇಕು. ಪೌರಕಾರ್ಮಿಕರ ಆರೋಗ್ಯ ತಪಾಸಣೆ, ಸಮರ್ಪಕವಾದ ಪರಿಕರಗಳನ್ನು ನೀಡುವುದರೊಂದಿಗೆ ಪೌರ ಕಾರ್ಮಿಕ ಕಲ್ಯಾಣ ಯೋಜನೆಗಳನ್ನು ಅವರಿಗೆ ತಲುಪಿಸಬೇಕೆಂದರು.ಪಾಲಿಕೆ ಆಯುಕ್ತರಾದ ಮಾಯಣ್ಣ ಗೌಡ ಪಾಲಿಕೆಯ ವಿವಿಧ ಯೋಜನೆಗಳ ಪ್ರಗತಿಯನ್ನು ವಿವರಿಸಿ, ಆಶ್ರಯ ಯೋಜನೆಯಡಿ ಗೋವಿಂದಾಪುರದಲ್ಲಿ 3000 ಜಿ+2 ಮಾದರಿಯ ಮನೆಗಳ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದ್ದು 624 ಮನೆಗಳು ಪೂರ್ಣಗೊಂಡು ಫಲಾನುಭವಿಗಳಿಗೆ ನೀಡಲಾಗಿದೆ. ಮುಂದಿನ ಮಾರ್ಚ್ ಒಳಗೆ 600 ಮನೆಗಳು ಪೂರ್ಣಗೊಳ್ಳಲಿವೆ. ಬ್ಯಾಂಕ್ ಸಾಲ ಸಮಸ್ಯೆಗೆ ಸಂಬಧಿಸಿದಂತೆ ಬ್ಯಾಂಕ್‍ನವರೊಂದಿಗೆ ಸಭೆಗಳನ್ನು ನಡೆಸಿ ಪರಿಹರಿಸಲಾಗುತ್ತಿದೆ. ಗೋಪಿಶೆಟ್ಟಿಕೊಪ್ಪದಲ್ಲಿ 1836 ಜಿ +2 ಮನೆಗಳು ಮಂಜೂರಾಗಿದ್ದು ಕಾಮಗಾರಿ ಸದ್ಯಕ್ಕೆ ಸ್ಥಗಿತವಾಗಿದೆ. ಮುಂದುವರೆಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.