ಜನಸೇವಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್


ಯಶವಂತಪುರ,ಮೇ.೫: ಕ್ಷೇತ್ರದ ಮಾಗಡಿ ರಸ್ತೆಯ ಚನ್ನೇನಹಳ್ಳಿಯಲ್ಲಿರುವ ಜನಸೇವಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ಆರಂಭವಾಗಲಿದ್ದು,ಸಕಲ ವ್ಯವಸ್ಥೆಗಳು ಭರದಿಂದ ಸಾಗಿವೆ.
ಹಳೇ ವಿದ್ಯಾರ್ಥಿಗಳ ಸಹಕಾರದೊಂದಿಗೆ ವಸತಿ ಶಾಲೆಯ ಆಡಳಿತ ಮಂಡಳಿ ನೇತೃತ್ವದಲ್ಲಿ ಆರಂಭವಾಗಲಿರುವ ೧೦೦ ಹಾಸಿಗೆ ಸಾಮರ್ಥ್ಯದ ಕೋವಿಡ್ ಆರೈಕೆ ಕೇಂದ್ರ ಶೀಘ್ರದಲ್ಲೇ ಕಾರ್ಯಾರಂಭಿಸಲಿದೆ.
ಕೇರ್ ಸೆಂಟರ್ ಗೆ ಸರಕಾರಿ ವೈದ್ಯರು, ಆರೋಗ್ಯಾಧಿಕಾರಿಗಳು,ಬಿಬಿಎಂಪಿ ಸಿಬ್ಬಂದಿಯೊಂದಿಗೆ ಭೇಟಿ ನೀಡಿದ ಸಚಿವ ಎಸ್ ಟಿ ಸೋಮಶೇಖರ್ ವ್ಯವಸ್ಥೆಗಳನ್ನು ಪರಿಶೀಲಿಸಿದರು.ಅಲ್ಲಿಗೆ ಬೇಕಿರುವ ಮೂಲಸೌಕರ್ಯಗಳು,ವೈದ್ಯಕೀಯ ಅಗತ್ಯತೆಗಳ ಬಗ್ಗೆ ಮಾಹಿತಿ ಪಡೆದು ಸರಕಾರದಿಂದ ಬೇಕಾದ ಸಹಕಾರ ಕೊಡಿಸುವುದಾಗಿ ಭರವಸೆ ನೀಡಿದರು.
ಯಶವಂತಪುರ ಕ್ಷೇತ್ರದಲ್ಲಿ ಕೋವಿಡ್ ನಿಂದ ಮೃತಪಟ್ಟ ಆರ್ಥಿಕ ದುರ್ಬಲ ಕುಟುಂಬಕ್ಕೆ ವೈಯುಕ್ತಿಕವಾಗಿ ಒಂದು ಲಕ್ಷ ರೂಪಾಯಿ ನೆರವು ನೀಡುವುದಾಗಿ ಸಚಿವ ಸೋಮಶೇಖರ್ ತಿಳಿಸಿದರು.
ಕ್ರೂರಿ ಕೊರೋನಾದಿಂದ ಬಹಳಷ್ಟು ಮಂದಿ ಪ್ರಾಣ ಕಳೆದುಕೊಳ್ಳುತ್ತಿರುವುದು ದುರ್ದೈವದ ಸಂಗತಿ ಅದರಲ್ಲೂ ತಮ್ಮ ದುಡಿಮೆಯಿಂದ ಕುಟುಂಬ ನಿರ್ವಹಣೆ ಮಾಡುತ್ತಿದ್ದ ಆಧಾರಸ್ತಂಭಗಳು ಸೋಂಕಿಗೆ ಬಲಿಯಾಗಿ ಹಲವು ಕುಟುಂಬಗಳು ಅನಾಥವಾಗುತ್ತಿರುವುದನ್ನು ಮನಗಂಡು ಧನ ಸಹಾಯ ಮಾಡಲು ನಿರ್ಧರಿಸಿದ್ದೇನೆ.
ಗಟ್ಟಿಮುಟ್ಟಾಗಿದ್ದ ಯುವಕರು, ಮಧ್ಯವಯಸ್ಕರು ಮಹಾಮಾರಿಗೆ ಬಲಿಯಾಗುತ್ತಿರುವುದು ಹಲವಾರು ಕುಟುಂಬಗಳನ್ನು ಸಂಕಷ್ಟಕ್ಕೆ ದೂಡಿವೆ ಸಂತ್ರಸ್ತ ಕುಟುಂಬಗಳಿಗೆ ನಿರಂತರವಾಗಿ ನನ್ನ ಕೈಯಲಾದಷ್ಟು ಸಹಾಯ, ಸಹಕಾರ ನೀಡುತ್ತಿದ್ದೇನೆ. ದುಡಿದು ಸಾಕುತ್ತಿದ್ದ ಮನೆಯ ಸದಸ್ಯ ಮೃತಪಟ್ಟು ಜೀವನ ನಿರ್ವಹಣೆಗೂ ಪರದಾಟ ನಡೆಸುತ್ತಿರುವ ಕ್ಷೇತ್ರ ವ್ಯಾಪ್ತಿಯ ಆರ್ಥಿಕ ದುರ್ಬಲ ಕುಟುಂಬಗಳನ್ನು ಗುರುತಿಸುವ ಕಾರ್ಯಕ್ಕೆ ಚಾಲನೆ ನೀಡಲಾಗಿದ್ದು ಒಂದು ಲಕ್ಷ ರೂ ಒದಗಿಸಲಾಗುವುದು ಉಳಿದಂತೆ ಸ್ಯಾನಿಟೈಸರ್‌ಗೂ ಕ್ರಮ ಕೈಕೊಳ್ಳಲಾಗುದು ಎಂದರು.
ರಾಜರಾಜೇಶ್ವರಿನಗರ ವಲಯ ವ್ಯಾಪ್ತಿಯಲ್ಲಿ ಜನರ ಜೀವರಕ್ಷಣೆಗೆ ಪೂರಕವಾಗಿ ಜ್ಞಾನಭಾರತಿಯಲ್ಲಿ ಕೋವಿಡ್ ಆರೈಕೆ ಕೇಂದ್ರ ತೆರೆಯಲಾಗಿದೆ. ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ನಿರ್ಮಲಾನಂದನಾಥ ಸ್ವಾಮೀಜಿ ಅವರ ಸೂಚನೆ ಮೇರೆಗೆ ಕೋವಿಡ್ ತುರ್ತು ಪರಿಸ್ಥಿತಿಯನ್ನು ನಿಭಾಯಿಸಲು ಬಿಜಿಎಸ್ ಜಿಮ್ಸ್ ನಲ್ಲಿ ಆಸ್ಪತ್ರೆಯಲ್ಲಿ ಹೆಚ್ಚುವರಿ ೧೮೦ ಆಕ್ಸಿಜನ್ ಬೆಡ್ ಹಾಗೂ ೧೦ ವೆಂಟಿಲೇಟರ್ ಬೆಡ್ ಗಳನ್ನು ಸಿದ್ದಪಡಿಸಲಾಗುತ್ತಿದೆ. ಅಲ್ಲದೆ ವಲಯ ವ್ಯಾಪ್ತಿಯ ಖಾಸಗಿ ಆಸ್ಪತ್ರೆಗಳ ಆಡಳಿತ ಮಂಡಳಿಗಳೊಂದಿಗೆ ಸಮಾಲೋಚನೆ ನಡೆಸಿ ಸರ್ಕಾರ ನಿಗದಿಪಡಿಸಿರುವ ಬೆಡ್‌ಗಳನ್ನು ನೀಡಲು ಈಗಾಗಲೇ ತಿಳಿಸಿದರು
ಕೊರೋನಾ ವಾರಿಯರ್ಸ್ ಗಳಿಗೆ ಉಚಿತ ಮಾಸ್ಕ್, ಸ್ಯಾನಿಟೈಸರ್ ಒದಗಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಇದೇ ವೇಳೆ ತಿಳಿಸಿದರು ಉಪ ವಿಭಾಗಾಧಿಕಾರಿ ಶಿವಣ್ಣ, ಡಾ. ವಿವೇಕ್ ಸೇರಿದಂತೆ ಆರ್ ಆರ್ ನಗರ ವ್ಯಾಪ್ತಿಯ ವೈದ್ಯಾಧಿಕಾರಿಗಳು ಇದ್ದರು.