
ದಾವಣಗೆರೆ.ಮಾ.೧೫: ಮಹಾನಗರ ಪಾಲಿಕೆಯಲ್ಲಿ ಮಹಾಪೌರರ ಸ್ಥಾನಕ್ಕೆ ನಾನು ಆಯ್ಕೆ ಆಗಿದ್ದು, ನನಗೆ ದೊರೆತ ಅವಕಾಶವನ್ನು ಬಳಸಿಕೊಂಡು ಮಹಾನಗರದ ಸಮಗ್ರ ಅಭಿವೃದ್ದಿಗೆ ಶ್ರಮಿಸಿತ್ತೇನೆ ಎಂದು ಪಾಲಿಕೆಯ ನೂತನ ಮೇಯರ್ ವಿನಾಯಕ್ ಪೈಲ್ವಾನ್ ಹೇಳಿದರು. ನಗರದ ಚೇತನ ಹೋಟೆಲ್ ರಸ್ತೆಯಲ್ಲಿನ ನಾಯಕ ವಿದ್ಯಾರ್ಥಿ ನಿಲಯದಲ್ಲಿ ನಾಯಕ ವಿದ್ಯಾರ್ಥಿ ನಿಲಯ, ಜಿಲ್ಲಾ ವಾಲ್ಮೀಕಿ ನಾಯಕ ಸಮಾಜ ಹಾಗೂ ವಿವಿಧ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಮಹಾನಗರ ಪಾಲಿಕೆ ಮಹಾಪೌರರಾಗಿ ಆಯ್ಕೆಯಾದ ಹೆಚ್.ಬಿ.ವಿನಾಯಕ ಪೈಲ್ವಾನ್ ಸನ್ಮಾನ ಸ್ವೀಕರಿಸಿ ಮಾತನಾಡಿ, ಎಲ್ಲಾ ಸಮಾಜದ ಮುಖಂಡರು, ಎಲ್ಲಾ ಪಕ್ಷಗಳ ಮಾರ್ಗದರ್ಶನ ಪಡೆದು ಜನ ಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸುವುದಾಗಿ ಹೇಳಿದರು. ಅಧ್ಯಕ್ಷತೆ ವಹಿಸಿದ್ದ ನಾಯಕ ಸಮಾಜದ ಅಧ್ಯಕ್ಷ ಬಿ.ವೀರಣ್ಣ ಮಾತನಾಡಿ, ಸರ್ವ ಸಮುದಾಯದ ಜನರ ವಿಶ್ವಾಸ ಗಳಿಸುವ ಮುಖಾಂತರ ಅಧಿಕಾರಾವಧಿಯಲ್ಲಿ ವಿನಾಯಕ್ ಪೈಲ್ವಾನ್ ಉತ್ತಮ ಪ್ರಗತಿಪರ ಕೆಲಸ ಮಾಡಲಿ. ನಾನೂ ಕೂಡ ಕೆಳಮಟ್ಟದ ರಾಜಕಾರಣದಿಂದ ಬಂದವನು. ಅನೇಕ ಸಮಸ್ಯೆ ಎದುರಿಸಿ ರಾಜಕೀಯದಲ್ಲಿ ವಿವಿಧ ಸ್ಥಾನಮಾನ ಗಳಿಸಿ ಸಮರ್ಥವಾಗಿ ನಿಭಾಯಿಸಿದ್ದೇನೆ. ಅಂತೆಯೇ, ವಿನಾಯಕ ಪೈಲ್ವಾನ್ ಅವರು ಕೂಡ ತಮಗೆ ದೊರೆತ ಮೇಯರ್ ಹುದ್ದೆಯನ್ನ ಸಮರ್ಥವಾಗಿ ಬಳಸಿಕೊಂಡು ಅವಕಾಶ ವಂಚಿತರಿಗೆ, ಬಡಜನರಿಗೆ ಅಗತ್ಯ ಸೌಲಭ್ಯ ಒದಗಿಸಲು ಕಾರ್ಯೋನ್ಮುಖರಾಗಲಿ ಎಂದರು.ಜಿ.ಟಿ.ಚಂದ್ರಶೇಖರಪ್ಪ ಮಾತನಾಡಿ, ಸಮಾನತೆ ಮತ್ತು ಸಾಮಾಜಿಕ ನ್ಯಾಯದ ಪರಿಕಲ್ಪನೆಯಡಿ ಸಂವಿಧಾನದಲ್ಲಿ ಡಾ.ಅಂಬೇಡ್ಕರ್ ಮೀಸಲಾತಿ ಕಲ್ಪಿಸಿದ್ದರಿಂದ ಮೇಯರ್ ಆಗುವ ಅವಕಾಶ ದೊರಕಿದೆ. ಮಹಾಪೌರರ ಹುದ್ದೆ ದೊಡ್ಡ ಹುದ್ದೆಯಾಗಿದ್ದು ವಿನಾಯಕ ಪೈಲ್ವಾನ್ ಸಮರ್ಥವಾಗಿ ದೊರೆತ ಅಧಿಕಾರ ನಿಭಾಯಿಸಲಿ ಎಂದು ಆಶಿಸಿದರು.ಈ ವೇಳೆ ಕೆ.ಹಚ್ ತಿಪ್ಪಣ್ಣ, ಹದಡಿ ಹಾಲಪ್ಪ, ಶಾಮನೂರು ಪ್ರವೀಣ್, ಎಂ.ಎನ್.ಆಂಜನೇಯ, ವಿಜಯಲಕ್ಷ್ಮಿ, ಗುಮ್ಮನೂರು ಶಂಭುಲಿಂಗಪ್ಪ, ತುಪ್ಪದಹಳ್ಳಿ ಹನುಮಂತಪ್ಪ, ಲಕ್ಷೀದೇವಿ ವೀರಣ್ಣ, ಶ್ಯಾಗಲೆ ಮಂಜುನಾಥ, ಬಿ.ಶ್ರೀನಿವಾಸ ನಾಯಕ, ಗುಮ್ಮನೂರು ಮಲ್ಲಿಕಾರ್ಜುನ್, ಕರಿಲಕ್ಕೆನಹಳ್ಳಿ ತಿಪ್ಪಣ್ಣ, ಉಚ್ಚೆಂಗೆಪ್ಪ, ಟಿ.ಬಿ.ರಾಜು. ಮಂಡಕ್ಕಿ ಸುರೇಶ, ಟಿ.ಚಂದ್ರಪ್ಪ ಇತರರು ಇದ್ದರು.