ಜನಸಾಮಾನ್ಯರಿಗೆ ವರ-ಶಾಪವಾದ ಕೊರೊನಾ

ಮಧುಗಿರಿ, ನ. ೯- ಕೊರೊನಾ… ವರವೂ ಹೌದು, ಶಾಪವೂ ಹೌದು. ಕೊರೊನಾದಿಂದಾಗಿ ದುಬಾರಿ ಮದುವೆಗಳಿಗೆ ಕಡಿವಾಣ ಬಿದ್ದಿದ್ದು, ಸರಳ ವಿವಾಹಗಳಿಗೆ ಚಾಲನೆ ದೊರೆತಿದೆ. ಇದರಿಂದ ಬಹಳಷ್ಟು ಹೆಣ್ಣು ಹೆತ್ತ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದು, ಪೋಷಕರಿಗೆ ಕೊರೊನಾ ವರವಾಗಿ ಪರಿಣಮಿಸಿದೆ. ವಿಪರ್ಯಾಸವೆಂದರೆ ಇದೇ ಕೊರೊನಾ ೧೮ ವರ್ಷ ತುಂಬದ ಯುವತಿಯರಿಗೆ ಶಾಪವಾಗಿ ಪರಿಣಮಿಸಿದೆ. ಸರಳ ವಿವಾಹಗಳಿಗೆ ಚಾಲನೆ ದೊರೆತಿರುವುದರಿಂದ ದುಂದು ವೆಚ್ಚ ಭರಿಸಲಾರದ ಪೋಷಕರಿಗೆ ಈ ಪರಿಸ್ಥಿತಿ ಸುಸಂದರ್ಭವಾಗಿ ಕಂಡು ಬರುತ್ತಿದೆ. ಇದರಿಂದಾಗಿ ವರನ ಕಡೆಯವರು ನಾವೇ ಖರ್ಚು ಮಾಡಿ ಮದುವೆ ಮಾಡಿಕೊಂಡು ಹೋಗುತ್ತೇವೆ ಎಂದು ಹೆಣ್ಣು ಹೆತ್ತ ಪೋಷಕರನ್ನು ಗೋಗರೆಯುವುದರಿಂದ ೧೮ ವರ್ಷ ತುಂಬುವ ಮೊದಲೇ ಹೆಣ್ಣು ಮಕ್ಕಳನ್ನು ಮದುವೆ ಮಾಡಿ ಸಾಗ ಹಾಕುತ್ತಿರುವ ಪ್ರಯತ್ನಗಳು ಗ್ರಾಮಾಂತರ ಭಾಗದ ಹಳ್ಳಿಗಳಲ್ಲಿ ನಡೆಯುತ್ತಿವೆ. ಹಿಂದೆಲ್ಲಾ ಭ್ರೂಣ ಹತ್ಯೆಯಿಂದಾಗಿ ಗಂಡು-ಹೆಣ್ಣುಗಳ ಸಂಖ್ಯೆಯ ಅನುಪಾತದಲ್ಲಿ ಏರುಪೇರಾಗಿರುವುದೂ ಇಂದು ಹೆಣ್ಣು ಮಕ್ಕಳ ಕೊರತೆಗೆ ಮತ್ತೊಂದು ಕಾರಣ.
ಯುವತಿಯರ ಕನಸು ಕಸಿದ ಕೊರೊನಾ
ಜೀವನದಲ್ಲಿ ತಮ್ಮದೇ ಆದ ಕನಸನ್ನು ಹೊತ್ತು ಸಾಕಾರಗೊಳಿಸಿಕೊಳ್ಳುವ ನಿಟ್ಟಿನಲ್ಲಿ ಕಾಲೇಜು ಮೆಟ್ಟಿಲು ಹತ್ತಿದ್ದ ಯುವತಿಯರ ಕನಸುಗಳನ್ನು ಕೊರೊನಾ ನುಚ್ಚು ನೂರು ಮಾಡಿದೆ. ಕೊರೊನಾದಿಂದಾಗಿ ಕಾಲೇಜುಗಳು ಬಂದ್ ಆಗಿದ್ದು, ಯುವತಿಯರು ಮನೆ ಸೇರಿದ್ದಾರೆ. ಇದಲ್ಲದೇ ಉದ್ಯೋಗ ಅರಸಿ ಊರು ತೊರೆದು ಪಟ್ಟಣದ ಸೇರಿದ್ದ ಬಹತೇಕ ಯುವಕರು ಹಳ್ಳಿ ಸೇರಿದ್ದು, ಸಂಬಂಧಗಳಲ್ಲೂ ಬಾಲ್ಯ ವಿವಾಹಕ್ಕೆ ಅಡಿಪಾಯ ಹಾಕಿದಂತಾಗಿದೆ.
ತಾಲ್ಲೂಕು ಬರಪೀಡಿತ ಪ್ರದೇಶವಾಗಿದ್ದು, ಕೃಷಿ ಯಾವಾಗಲೋ ಕೈಕೊಟ್ಟಿದೆ. ಬಡತನ ನಿರಂತರವಾಗಿ ಕಾಡುತ್ತಿದ್ದು, ಯಾವುದೇ ಪರ್ಯಾಯ ಉದ್ಯೋಗವಿಲ್ಲದೇ ಬಹಳಷ್ಟು ಜನರು ತತ್ತರಿಸಿದ್ದಾರೆ. ಬಹುತೇಕ ಪೋಷಕರು ಅನಕ್ಷರಸ್ಥರಾಗಿರುವ ಹಿನ್ನೆಲೆಯಲ್ಲಿ ಅರಿವಿನ ಕೊರತೆಯಿಂದಾಗಿ ಬಾಲ್ಯವಿವಾಹದ ಸುಳಿಯಲ್ಲಿ ಸಿಲುಕಿಕೊಳ್ಳುತ್ತಿದ್ದಾರೆ.
ಬೆಳಕಿಗೆ ಬಂದದ್ದು ಹೇಗೆ
ಕಳೆದ ತಿಂಗಳು ಮಧುಗಿರಿ ತಾಲ್ಲೂಕು ಐ.ಡಿ.ಹಳ್ಳಿ ಹೋಬಳಿಯ ಪೋಷಕರೊಬ್ಬರು ತಮ್ಮ ಮಗಳು ಬಾಲ್ಯ ವಿವಾಹವಾಗಿರುವ ಬಗ್ಗೆ ಪೊಲೀಸ್ ಠಾಣೆಗೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ದೂರು ನೀಡಿದ ಹಿನ್ನೆಲೆಯಲ್ಲಿ ಪ್ರಕರಣಗಳು ಒಂದೊಂದೆ ಬೆಳಕಿಗೆ ಬರುತ್ತಿದೆ. ಬೆಳಗಿನ ಜಾವ ಸೂರ್ಯ ಹುಟ್ಟುವ ಮೊದಲೇ ಮದುವೆಗಳು ನಡೆದು ಹೋಗುತ್ತವೆ. ಕುಟುಂಬದ ಆರ್ಥಿಕ ಪರಿಸ್ಥಿತಿಯನ್ನು ಅರಿತೋ ಅಥವಾ ಹಾಗೊಮ್ಮೆ ಹೇಳಿದರೂ ಇದರಿಂದ ನಮ್ಮ ಪೋಷಕರಿಗೇ ಹೆಚ್ಚು ತೊಂದರೆ ಎಂಬ ಉದ್ದೇಶದಿಂದಲೋ ಏನೋ ಬಹುತೇಕ ಹೆಣ್ಣು ಮಕ್ಕಳು ತಮ್ಮ ಕನಸುಗಳಿಗೆ ಕಡಿವಾಣ ಹಾಕಿ ಮದುವೆಗಳಿಗೆ ಒಪ್ಪಿಗೆ ನೀಡಿ ಮೌನ ವಹಿಸುತ್ತಿರುವ ಸಂದರ್ಭಗಳೇ ಹೆಚ್ಚು. ಆದರೆ ಕೊರೊನಾ ಲಾಕ್‌ಡೌನ್ ಸಂದರ್ಭದಲ್ಲಿ ಪ್ಲೈಟಿಂಗ್ ಸ್ಕ್ವಾಡ್‌ಗಳು ಪ್ರತೀ ಗ್ರಾಮದಲ್ಲೂ ಗಸ್ತು ತಿರುಗುತ್ತಿದ್ದು ಸಂದರ್ಭದಲ್ಲಿ ಏಕಕಾಲಕ್ಕೆ ೧೦ ಕ್ಕೂ ಹೆಚ್ಚು ಬಾಲ್ಯ ವಿವಾಹಗಳು ಬೆಳಕಿಗೆ ಬಂದಿದ್ದು ಇಲಾಖೆ ಎಚ್ಚೆತ್ತುಕೊಳ್ಳುವಂತೆ ಮಾಡಿದೆ.
ಕೊರೊನಾದಿಂದಾಗಿ ಕಾಲೇಜುಗಳ ಬಾಗಿಲು ತೆರೆಯುವುದು ತಡವಾಗುತ್ತಿರು ವುದರಿಂದ ಗ್ರಾಮಾಂತರ ಭಾಗದಲ್ಲಿ ಬಾಲ್ಯ ವಿವಾಹ ಹೆಚ್ಚಳಕ್ಕೆ ಕಾರಣ ಎಂಬ ಮಾತುಗಳು ಕೇಳಿ ಬರುತ್ತಿವೆ. ಇದು ತಂತ್ರಜ್ಞಾನ ಯುಗ. ಗಂಡು ಮಕ್ಕಳಂತೆ ಹೆಣ್ಣು ಮಕ್ಕಳಿಗೂ ಸಮಾನ ಅವಕಾಶಗಳಿದ್ದು, ಬಾಲ್ಯ ವಿವಾಹವನ್ನು ಖಂಡಿಸಬೇಕು. ಹೆಣ್ಣೊಂದು ಕಲಿತರೆ ಶಾಲೆಯೊಂದು ತೆರೆದಂತೆ ಎಂಬ ಮಾತಿನಂತೆ ಪೋಷಕರು ಅಜ್ಞಾನ ತೊರೆದು ಹೆಣ್ಣು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸಿದಲ್ಲಿ ಅವರ ಭವಿಷ್ಯವನ್ನು ಅವರೇ ರೂಪಿಸಿಕೊಳ್ಳುತ್ತಾರೆ ಎಂದು ಜಿಲ್ಲಾ ಉಪನ್ಯಾಸಕರ ಸಂಘದ ಅಧ್ಯಕ್ಷ ಎನ್. ಮಹಲಿಂಗೇಶ್ ಹೇಳಿದ್ದಾರೆ.
೧೮ ವರ್ಷ ತುಂಬುವ ಮೊದಲೇ ಯುವತಿಯರಿಗೆ ವಿವಾಹ ಮಾಡುವುದು ಅಪರಾಧ. ಪೋಷಕರಲ್ಲಿ ಅಜ್ಞಾನ, ಬಡತನ ಹಾಗೂ ಅರಿವಿನ ಕೊರತೆಯಿಂದ ಬಾಲ್ಯವಿವಾಹಗಳ ಸಂಖ್ಯೆಯಲ್ಲಿ ಹೆಚ್ಚಳಕ್ಕೆ ಪ್ರಮುಖ ಕಾರಣ. ಅನೇಕ ಸಂದರ್ಭಗಳಲ್ಲಿ ಇಲಾಖೆಯ ಗಮನಕ್ಕೆ ಬರುವುದೇ ಇಲ್ಲ. ಲಾಕ್‌ಡೌನ್ ಸಂದರ್ಭದಲ್ಲಿ ಫ್ಲೈಯಿಂಗ್ ಸ್ಕ್ವಾಡ್‌ಗಳು ಗಸ್ತು ತಿರುಗುತ್ತಿದ್ದ ಸಂದರ್ಭದಲ್ಲಿ ಬಹಳಷ್ಟು ಪ್ರಕರಣಗಳು ಬೆಳಕಿಗೆ ಬಂದಿದ್ದು, ಯುವತಿಯರು ಬಾಲ್ಯವಿವಾಹಕ್ಕೆ ಒಳಗಾಗಿ ತಮ್ಮ ಭವಿಷ್ಯವನ್ನು ಹಾಳು ಮಾಡಿಕೊಳ್ಳುವುದು ಸರಿಯಲ್ಲ. ಯಾವುದೇ ಸಂದರ್ಭದಲ್ಲೂ ದೃತಿಗೆಡದೇ ಇಲಾಖೆಯ ಚೈಲ್ಡ್ ಹೆಲ್ಪ್ ಲೈನ್ ೧೮೧ ಮತ್ತು ಉಮನ್ಸ್ ಹೆಲ್ಪ್ ಲೈನ್ ೧೦೯೮ ಸಂಖ್ಯೆಗೆ ಕರೆ ಮಾಡಿದಲ್ಲಿ ತಕ್ಷಣ ಇಲಾಖೆ ಸಂತ್ರಸ್ತ ಯುವತಿಯ ನೆರವಿಗೆ ಧಾವಿಸಲಿದೆ ಎಂದು ಮಧುಗಿರಿ ಸಿಡಿಪಿಓ ಅನಿತಾ ತಿಳಿಸಿದ್ದಾರೆ.