ಜನಸಾಮಾನ್ಯರಿಗೆ ಜ್ಞಾನ ಸಂಪತ್ತು ಮುಕ್ತವಾಗಿ ದೊರೆವಂತಾಗಬೇಕು


ಸಂಜೆವಾಣಿ ವಾರ್ತೆ
ಹೊಸಪೇಟೆ ಏ16: ಜನಸಾಮಾನ್ಯರಿಗೆ ಜ್ಞಾನ ಸಂಪತ್ತು ಮುಕ್ತವಾಗಿ ದೊರೆಯಂತಾಗಬೇಕು, ನಮ್ಮಲ್ಲಿನ ಅಮೂಲ್ಯ ಜ್ಞಾನ ಸಂಪತ್ತನ್ನು ಡಿಜಿಟಲೈಜೇಶನ್ ಮೂಲಕ ಜಗತ್ತಿನ ಮುಂದೆ ತೆರೆದಿಡಲು ಸಾಧ್ಯ ಎಂದು ಪಬ್ಲಿಕ್ ರಿಸೋರ್ಸ್ ಆರ್ಗ್ ಇಂಕ್ ಸಂಸ್ಥೆಯ ಅಧ್ಯಕ್ಷ ಕಾರ್ಲ ಮಲಮದ್ ಹೇಳಿದರು.
ಕನ್ನಡ ವಿಶ್ವವಿದ್ಯಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜ್ಞಾನ ಸತ್ಯಾಗ್ರಹ ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜ್ಞಾನ ನಾಗರಿಕತೆಯ ತಳಹದಿ. ಜ್ಞಾನ ಮುಕ್ತವಾಗಿ ಎಲ್ಲರಿಗೂ ಎಲ್ಲಡೆಯೂ ದೊರೆಯುವಂತಾಗಬೇಕು. ಪ್ರಸ್ತುತ ದಿನಗಳಲ್ಲಿ ಜ್ಞಾನ ಸತ್ಯಾಗ್ರಹದ ಮೂಲಕ ಜ್ಞಾನವನ್ನು ಜನ ಸಾಮಾನ್ಯರಿಗೆ ದೊರೆಯುವಂತೆ ಮಾಡುವುದು ಇಂದಿನ ತುರ್ತು ಅಗತ್ಯ ಎಂದು ಅಭಿಪ್ರಾಯಪಟ್ಟರು.
ಗ್ರಂಥಾಲಯಗಳು ಸ್ವಯಂ ಅಧ್ಯಯನದ ಕೇಂದ್ರಗಳು. ಇವು ಜೀವನ ಪರ್ಯಾಂತ ಓದುಗರ ಮಾರ್ಗದರ್ಶಿಯಂತೆ ಕೆಲಸ ಮಾಡುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಜನ ಸಾಮಾನ್ಯರಿಗೆ ಗ್ರಂಥಾಲಯದ ಮಹತ್ವ ತಿಳಿಸುವ ಮೂಲಕ ಶಿಕ್ಷಣ ನೀಡುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದರು. ಮಹಾತ್ಮ ಗಾಂಧೀಜಿ ಹಾಗೂ ಅಂಬೇಡ್ಕರ್ ಅವರು ಗ್ರಂಥಾಲಯವನ್ನು ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದರು. ಆದರೆ ಇಂದು ಎಲ್ಲವೂ ಆನ್‍ಲೈನ್ ಮೂಲಕವೇ ದೊರೆಯುತ್ತಿದ್ದು, ಭೌತಿಕ ಗ್ರಂಥಾಲಯಗಳ ಬಳಕೆಯ ಪ್ರಮಾಣ ಕಡಿಮೆಯಾಗಿದೆ. ಈ ಹಿನ್ನೆಲೆಯಲ್ಲಿ ಪ್ರಾದೇಶಿಕ ಭಾಷೆಗಳಲ್ಲಿರುವ ಸ್ಥಳೀಯ ಜ್ಞಾನ ಸಂಪತ್ತನ್ನು ಜಗತ್ತಿಗೆ ಪರಿಚಯಿಸುವಲ್ಲಿ ಡಿಜಿಟಲೀಕರಣ ಸಹಕಾರಿಯಾಗಲಿದೆ. ಈ ನಿಟ್ಟಿನಲ್ಲಿ ಸರ್ವೆಂಟ್ಸ್ ಆಫ್ ನಾಲೆಡ್ಜ್ ಮೂಲಕ ಈಗಾಗಲೇ  ಗ್ರಂಥಾಲಯಗಳಲ್ಲಿನ ಪುಸ್ತಕಗಳನ್ನು, ನಿಯತಕಾಲಿಕೆಗಳನ್ನು ಮತ್ತು ಪತ್ರಿಕೆಗಳನ್ನು ಡಿಜಿಟಲೀಕರಣಗೊಳಿಸಲಾಗಿದೆ ಎಂದರು.
ಕುಲಸಚಿವ ಡಾ.ವಿಜಯ್ ಪೂಣಚ್ಚ ತಂಬಂಡ ಮಾತನಾಡಿ, ಅಂಗೈಯಲ್ಲಿ ಕನ್ನಡ ವಿಚಾರಗಳು ಸಾರ್ವಜನಿಕಗೊಂಡಾಗ ಕನ್ನಡದ ಮಹತ್ವ ಜಗತ್ತಿಗೆ ಪರಿಚಯವಾಗುತ್ತಿದೆ. ಈ ನಿಟ್ಟಿನಲ್ಲಿ ಕನ್ನಡದ ಪಠ್ಯ-ಪುಸ್ತಕಗಳು, ಗ್ರಂಥಗಳನ್ನು, ನಿಯತಕಾಲಿಕೆಗಳನ್ನು ಮತ್ತು ಪತ್ರಿಕೆಗಳನ್ನು ಡಿಜಿಟಲೀಕರಣಗೊಳಿಸುವ ಮೂಲಕ ಕನ್ನಡದ ಕೆಲಸ ಸಬಲೀಕರಣವಾಗಬೇಕಿದೆ ಎಂದರು.
ವಿಭಾಗದ ಮುಖ್ಯಸ್ಥ ಡಾ.ಶೈಲಜ ಇಂ. ಹಿರೇಮಠ ಸ್ವಾಗತಿಸಿದರು. ಸರ್ವೆಂಟ್ಸ್ ಆಫ್ ನಾಲೆಡ್ಜ್ ಸಂಸ್ಥೆಯ ಸಹ ಸಂಸ್ಥಾಪಕ ಓಂಶಿವಪ್ರಕಾಶ್ ಹಾಗೂ ವಿಶ್ವವಿದ್ಯಾಲಯದ ಬೋಧಕರು ಚರ್ಚೆಯಲ್ಲಿ ಭಾಗವಹಿಸಿದ್ದರು. ಪತ್ರಿಕೋದ್ಯಮ ವಿಭಾಗದ ತಾತ್ಕಾಲಿಕ ಅಧ್ಯಾಪಕಿ ಪದ್ಮಾವತಿ ಕೆ. ನಿರೂಪಿಸಿದರು. ಮಹಿಳಾ ಅಧ್ಯಯನ ವಿಭಾಗದ ಸಂಶೋಧನಾರ್ಥಿ ಶ್ಯಾಮಣ್ಣ ವಂದಿಸಿದರು. ಈ ಸಂದರ್ಭದಲ್ಲಿ ವಿವಿಧ ನಿಕಾಯಗಳ ಡೀನರು, ಮುಖ್ಯಸ್ಥರು, ಪ್ರಾಧ್ಯಾಪಕರು, ಸಂಶೋಧನಾರ್ಥಿಗಳು ಉಪಸ್ಥಿತರಿದ್ದರು.
ಜ್ಞಾನಕ್ಕೆ ಭಾಷೆ ತೊಡುಕಾಗಬಾರದು. ಜ್ಞಾನವು ಭಾಷೆಯನ್ನು ಮೀರಿ ಹೋಗಬೇಕು. ಜ್ಞಾನವನ್ನು ಎಲ್ಲರಿಗೂ ಎಲ್ಲಡೆಯೂ ಉಚಿತವಾಗಿ ಸಿಗುವಂತೆ ಮಾಡುವಲ್ಲಿ ಡಿಜಿಟಲೀಕರಣದ ಪಾತ್ರ ಮಹತ್ತರವಾದುದು. ಡಿಜಿಟಲೀಕರಣದಿಂದ ಕಾಪಿರೈಟ್ ಮತ್ತು ಜ್ಞಾನ ಸತ್ಯಾಗ್ರಹದ ನಡುವೆ ಸಂಘರ್ಷವೂ ಇದೆ. ಮನುಷ್ಯ ಪ್ರಕೃತಿಯ ಕೂಸು. ಮನುಷ್ಯನ ಮನಸ್ಸಿನಲ್ಲಿನ ಆಲೋಚನೆಗಳು ಕೂಡ ಪ್ರಕೃತಿಗೆ ಸೇರಿದ್ದು. ಜ್ಞಾನ ಎಲ್ಲರ ಸ್ವತ್ತು. ಹೀಗಾಗಿ ಇಂದು ಜ್ಞಾನದ ಹಕ್ಕು ಸ್ವಾಮ್ಯವನ್ನು ಸಾರ್ವಜನಿಕಗೊಳಿಸಬೇಕು. 
ಡಾ.ಡಿ.ವಿ. ಪರಮಶಿವಮೂರ್ತಿ, ಕುಲಪತಿಗಳು, ಕನ್ನಡ ವಿಶ್ವವಿದ್ಯಾಲಯ.

One attachment • Scanned by Gmail