ಜನಸಾಮಾನ್ಯರಿಗೆ ಕಾನೂನಿನ ತಿಳವಳಿಕೆ ಅಗತ್ಯ

ಕಲಬುರಗಿ,ನ.10: ದೇಶದಲ್ಲಿರುವ ಪ್ರತಿಯೊಬ್ಬ ನಾಗರಿಕನೂ ತನ್ನ ಹಕ್ಕುಗಳು, ಕರ್ತವ್ಯಗಳು, ಆಡಳಿತ ಸೇರಿದಂತೆ ತಮ್ಮ ದೈನಂದಿನ ಸುಗಮ ಬದುಕಿಗೆ ಬೇಕಾದ ಕನಿಷ್ಠ ಕಾನೂನಿನ ಜ್ಞಾನವನ್ನು ಹೊಂದಿರಬೇಕು. ಇದರಿಂದ ಸಮಾಜ ಸುಸ್ಥಿರವಾಗುವ ಮೂಲಕ, ಸದೃಢ ರಾಷ್ಟ್ರ ನಿರ್ಮಾಣವಾಗಲು ಸಾಧ್ಯವಿದೆಯೆಂದು ಖ್ಯಾತ ನ್ಯಾಯವಾದಿ ಸುನೀಲಕುಮಾರ ವಂಟಿ ಹೇಳಿದರು.
ಅವರು ನಗರದ ಆಳಂದ ರಸ್ತೆಯ ಶೆಟ್ಟಿ ಕಾಂಪ್ಲೆಕ್ಸ್‍ನಲ್ಲಿರುವ ‘ಬಸವೇಶ್ವರ, ಅಕ್ಕಮಹಾದೇವಿ ಪದವಿ ಕಾಲೇಜ್’ನಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ‘ರಾಷ್ಟ್ರೀಯ ಕಾನೂನು ಸೇವೆಗಳ ದಿನಾಚರಣೆ’ಯ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.
ಸಮಾಜದಲ್ಲಿರುವ ಅಶಕ್ತ ವರ್ಗದವರಿಗೆ ಉಚಿತ ಕಾನೂನು ದೊರೆಯಬೇಕೆಂಬ ಉದ್ದೇಶದಿಂದ ‘ಕಾನೂನು ಸೇವೆಗಳ ಕಾಯ್ದೆ-1987’ರಲ್ಲಿ ರಚಿಸಿ, ನವ್ಹೆಂಬರ-9,1995 ರಲ್ಲಿ ಜಾರಿಗೊಳಿಸಲಾಯಿತು. ಈ ಕಾಯ್ದೆಯಡಿ ತಾಲೂಕಾ, ಜಿಲ್ಲಾ, ರಾಜ್ಯ ಮತ್ತು ರಾಷ್ಟ್ರ ಮಟ್ಟದಲ್ಲಿ ಲೋಕ ಅದಾಲತಗಳನ್ನು ನಡೆಸಿ ಜನಸಾಮಾನ್ಯರಿಗೆ ಉಚಿತ ಮತ್ತು ಶೀಘ್ರ ನ್ಯಾಯವನ್ನು ದೊರೆಯುವಂತೆ ಮಾಡಲಾಗುತ್ತಿದ್ದು, ಅದರ ಸದುಪಯೋಗವನ್ನು ಪಡೆಸಿಕೊಳ್ಳಬೇಕೆಂದರು.
ಕಾನೂನು ಸೇವೆಗಳಡಿಯಲ್ಲಿ ನಿರ್ಗತಿಕ ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು, ಹಿಂದುಳಿದ ವರ್ಗದವರಿಗೆ ನ್ಯಾಯವನ್ನು ಒದಗಿಸಿಕೊಡುವ ಕಾರ್ಯ ನಿರಂತರವಾಗಿ ಜರುಗುತ್ತಿದೆ. ಇದಕ್ಕಾಗಿ ‘ಕಾನೂನು ಸೇವೆಗಳ ಪ್ರಾಧಿಕಾರ’ ಘಟಕವನ್ನು ರಚಿಸಿ ಎಲ್ಲೆಡೆ ಕಾನೂನಿನ ಅರಿವು, ನೆರವು ನೀಡಲಾಗುತ್ತಿದೆ. ‘ಉಚಿತ ಕಾನೂನು ಸಲಹಾ ಕೇಂದ್ರ’ಗಳನ್ನು ಸ್ಥಾಪಿಸಲಾಗಿದೆಯೆಂದು ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಬಳಗದ ಸಂಸ್ಥಾಪಕ ಅಧ್ಯಕ್ಷ, ಉಪನ್ಯಾಸಕ ಎಚ್.ಬಿ.ಪಾಟೀಲ, ಪ್ರತಿಯೊಬ್ಬರೂ ಕಾನೂನಿನ ಬಗ್ಗೆ ನಿರ್ಲಕ್ಷ ವಹಿಸಿ ಬೇಜವಬ್ದಾರಿ ತೋರಿಸದೇ, ಅದರ ಅರಿವನ್ನು ಮೂಡಿಸಿಕೊಂಡರೆ ಸಮಾಜದಲ್ಲಿ ಶಾಂತಿ, ನೆಮ್ಮದಿ, ಶಿಸ್ತು ಬೆಳವಣಿಗೆಯಾಗಲು ಸಾಧ್ಯವಿದೆ. ಕಾನೂನುಗಳು ವ್ಯಕ್ತಿ ಹಾಗೂ ದೇಶವನ್ನು ರಕ್ಷಿಸುತ್ತವೆಯೆಂದರು.
ಕಾರ್ಯಕ್ರಮದಲ್ಲಿ ಸಂಸ್ಥೆ ಅಧ್ಯಕ್ಷ ಡಾ.ಅಂಬಾರಾಯ ಎಸ್.ಹಾಗರಗಿ, ಪ್ರಮುಖರಾದ ನರಸಪ್ಪ ಬಿರಾದಾರ ದೇಗಾಂವ, ಸೋಮಶೇಖರ ಬಿ.ಮೂಲಗೆ, ರಾಜಕುಮಾರ ಬಟಗೇರಿ ಸಂಜಯಕುಮಾರ ಖಜೂರಿ, ವೀರಭದ್ರಯ್ಯ ಹಿರೇಮಠ, ನಾಗೇಶ ತಿಮಾಜಿ, ಶ್ರೀಮಂತ ಕೋಟನೂರ, ಹನುಮಯ್ಯ ಗುತ್ತೇದಾರ, ಸುಜಯ್ ಎಸ್.ವಂಟಿ ಸೇರಿದಂತೆ ಮತ್ತಿತರರು ಇದ್ದರು.