ಜನಸಾಮಾನ್ಯರಿಗೆ ಉತ್ತಮ ಬದುಕು ರೂಪಿಸುವುದು ಸರ್ಕಾರದ ಕರ್ತವ್ಯ

ತುಮಕೂರು, ಜು. ೨೦- ಜನತೆಯಲ್ಲಿ ಅನಗತ್ಯವಾಗಿ ಭಾವನೆಗಳನ್ನು ಕೆರಳಿಸಿ, ವಿಭಜಿಸಿ, ಕಿತ್ತಾಡಿಸುವುದಲ್ಲ, ಬದಲಿಗೆ ಜನತೆ ಉತ್ತಮ ಆಹಾರ, ಉದ್ಯೋಗ, ಶಿಕ್ಷಣ, ಆರೋಗ್ಯ ಮತ್ತು ಸಾಮರಸ್ಯ- ಸಮಭಾವದ ಮೂಲಕ ಬದುಕು ಅರಳಿಸುವುದು ಸರ್ಕಾರಗಳ ಕೆಲಸ ಅಗಬೇಕು ಎಂದು ಸಿಐಟಿಯು ರಾಜ್ಯ ಪ್ರಧಾನ ಕಾರ್ಯದರ್ಶಿ ಕಾಂ. ಮಿನಾಕ್ಷಿ ಸುಂದರಂ ಅಭಿಪ್ರಾಯಪಟ್ಟರು.
ನಗರದ ಜನಚಳವಳಿ ಕೇಂದ್ರದಲ್ಲಿ ಸಿಐಟಿಯು ಜಿಲ್ಲಾ ಮಟ್ಟದ ಪ್ರಮುಖರ ಸಭೆಯಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಇರುವುದನ್ನು ಉಳಿಸೋದು ಅಭಿವೃದ್ಧಿ ಅಲ್ಲ. ಕಳೆದ ೬ ತಿಂಗಳಲ್ಲಿ ೪೦ ಬಿಲಿಯನ್ ಡಾಲರ್ ಬಂಡವಾಳ ಹಿಂತೆಗೆತ ಆಗಿದೆ. ಅಮದು ಹೆಚ್ಚಿದೆ, ರಪ್ತು ಇಳಿಕೆಯಾಗಿದೆ. ಇದು ದೇಶವನ್ನು ಸಂಕಟಕ್ಕೆ ಸಿಲುಕಲಿದೆ ಎಂದರು. ಬಂಡವಾಳ ಶಾಹಿ ದೇಶಗಳಲ್ಲಿ ಬೆಲೆ ಏರಿಕೆ ಹೆಚ್ಚಾಗಿ ಜನತೆ ತತ್ತರಿಸುವಂತಾಗಿದೆ. ಶಾಲೆ- ಬಿಸಿಯೂಟ ನೌಕರರಿಗೆ ಬೇಳೆ- ಎಣ್ಣೆ, ಹಣ, ಗೌರವ ಧನ ನೀಡುವಂತೆ ಆಗ್ರಹಿಸಿದರು.
ಸರ್ಕಾರಿ ಶಾಲೆಗಳಲ್ಲಿ ಮಕ್ಕಳ ಬಿಸಿಯೂಟಕ್ಕೆ ಕಳೆದ ಮೂರು ತಿಂಗಳಿಂದ ಸರಿಯಾಗಿ ಅಡುಗೆ ತಯಾರಿಸಲು ಪದಾರ್ಥಗಳನ್ನು ನೀಡದೆ, ಅಡುಗೆ ಮಾಡುವವರಿಂದಲೇ ಖರ್ಚು ಮಾಡಿಸುತ್ತಿರುವ ಘಟನೆಗಳು ಜಿಲ್ಲೆಯ ಹಲವೆಡೆ ನಡೆಯುತ್ತಿದ್ದು, ಅಧಿಕಾರಿಗಳ ಈ ನಡೆಯನ್ನು ಸಿಐಟಿಯು ಖಂಡಿಸುತ್ತದೆ ಎಂದರು.
ಸಭೆಯ ಅಧ್ಯಕ್ಷತೆಯನ್ನು ಸೈಯದ್ ಮುಜಿಬ್ ವಹಿಸಿದ್ದರು. ಸಿಐಟಿಯು ಪ್ರಧಾನ ಕಾರ್ಯದರ್ಶಿ ಜಿ. ಕಮಲ, ಸುಬ್ರಮಣ್ಯ, ಅಂಗನವಾಡಿ ನೌಕರ ಸಂಘದ ಗುಲ್ಚಾರ್ ಬಾನು,ಅನಸೂಯ, ಕಟ್ಟಡ ಕಾರ್ಮಿಕರ ಸಂಘದ ಬಿ. ಉಮೇಶ್, ಗ್ರಾಮ ಪಂಚಾಯತ್ ನೌಕರರ ಸಂಘದ ನಾಗೇಶ್, ಶಂಕರಪ್ಪ, ಕಲಿಲ್, ಬಿಸಿಊಟ ನೌಕರ ಸಂಘದ ಕೆಂಚಮ್ಮ ಮತ್ತಿತರರು ಉಪಸ್ಥಿತರಿದ್ದರು.