ಜನಸಾಮಾನ್ಯರಲ್ಲಿ ಸ್ವಚ್ಚತೆ ಬಗ್ಗೆ ಅರಿವು ಮೂಡಿಸುತ್ತಿರುವ ಪೌರಾಯುಕ್ತ

??????

ಅರಸೀಕೆರೆ, ಮಾ. ೨೭- ಎಲ್ಲೆಂದರಲ್ಲಿ ಕಸ ಸುರಿಯುವ ನಗರದ ಜನತೆಯ ಮನಸ್ಥಿತಿ ಬದಲಿಸಲು ಸ್ವತಃ ಮುಂದಾಗಿರುವ ನಗರಸಭೆ ಪೌರಾಯುಕ್ತ ಚಲಪತಿ ಅವರು ಸಂಗ್ರಹವಾಗಿದ್ದ ತ್ಯಾಜ್ಯವನ್ನು ವಿಲೇವಾರಿ ಮಾಡಿ ಆ ಸ್ಥಳದಲ್ಲಿ ನೀರಾಕಿ ರಂಗೋಲಿ ಬಿಡಿಸಿ ಪರಿಸರ ಸ್ವಚ್ಛತೆ ಕುರಿತು ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡುವ ಮೂಲಕ ಗಮನ ಸೆಳೆದರು.
ಆರೋಗ್ಯ ನಿರೀಕ್ಷಕರು ಹಾಗೂ ಪೌರ ಕಾರ್ಮಿಕರೊಂದಿಗೆ ರಸ್ತೆಗಿಳಿದ ಆಯುಕ್ತರು, ರಸ್ತೆ ಬದಿ ಹಾಗೂ ಜನವಸತಿ ಬಡಾವಣೆಗಳ ಸುತ್ತಮುತ್ತ ಸಂಗ್ರಹವಾಗಿದ್ದ ತ್ಯಾಜ್ಯವನ್ನು ಸ್ವತಃ ತಾವೇ ಮುಂದೆ ನಿಂತು ವಿಲೇವಾರಿ ಮೂಡಿಸಿದರಲ್ಲದೆ ಅಸ್ವಚ್ಛತೆ ಸಾರುತ್ತಿದ್ದ ಸ್ಥಳಗಳಲ್ಲಿ ನೀರು ಹಾಯಿಸಿ ರಂಗೋಲಿ ಬಿಡಿಸಿ ನಮ್ಮ ಸುತ್ತಮುತ್ತಲಿನ ಪ್ರದೇಶ ಸ್ವಚ್ಛವಾಗಿದ್ದರೆ ನಮ್ಮಆರೋಗ್ಯ ಕೂಡಾ ಸದೃಢವಾಗಿರುತ್ತದೆ ಎಂದು ನೆರೆದಿದ್ದ ಸಾರ್ವಜನಿಕರಿಗೆ ಮನವರಿಕೆ ಮಾಡಿಕೊಟ್ಟರು.
ನಗರಸಭೆ ಈ ಕಾರ್ಯವೈಖರಿ ಪರಿಸರ ಸ್ವಚ್ಚತೆ ಮರೆತು ಎಲ್ಲೆಂದರಲ್ಲಿ ಕಸ ಸುರಿಯುತ್ತಿದ್ದ ಮಂದಿಗೆ ತಮ್ಮ ತಪ್ಪಿನ ಅರಿವಾದರೆ ನಗರಸಭೆ ಅಧಿಕಾರಿಗಳ ಈ ವಿನೂತನ ಕಾರ್ಯಕ್ರಮ ಮತ್ತೊಂದೆಡೆ ಸಾರ್ವಜನಿಕರ ಮೆಚ್ಚುಗೆಗೆ ಕಾರಣವಾಯಿತು.
ಈ ಕುರಿತು ಮಾತನಾಡಿದ ಪೌರಾಯುಕ್ತ ಚಲಪತಿ, ನಮ್ಮ ಮನೆ ಹೇಗೆ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ ಹಾಗೆ ನಮ್ಮ ಸುತ್ತ ಮುತ್ತಲಿನ ಪ್ರದೇಶವನ್ನು ಸ್ವಚ್ಛವಾಗಿ ಇಟ್ಟುಕೊಳ್ಳುವ ಸಂಕಲ್ಪವನ್ನು ಪ್ರತಿಯೊಬ್ಬರು ಮಾಡಬೇಕು ಸ್ವಚ್ಛತೆಯಿಂದ ಮಾತ್ರಕೊರೊನಾ ಸೇರಿದಂತೆ ಸಾಂಕ್ರಾಮಿಕ ರೋಗಗಳನ್ನು ಸಮಾಜದಿಂದದೂರಇಡಲು ಸಾಧ್ಯವಾಗುತ್ತದೆಎಂದು ಕಿವಿಮಾತು ಹೇಳಿದರು.
ನಗರದ ಜನತೆ ತಮ್ಮ ಮನೆಯ ತ್ಯಾಜ್ಯಗಳನ್ನು ಹಾಗೂ ನಿರುಪಯುಕ್ತ ವಸ್ತುಗಳನ್ನು ಒಂದೆಡೆ ಸಂಗ್ರಹಿಸಿ ಪ್ರತಿದಿನ ತಮ್ಮ ಮನೆ ಮುಂದೆ ಬರುವ ನಗರಸಭೆ ತ್ಯಾಜ್ಯ ಸಂಗ್ರಹಿಸುವ ವಾಹನಗಳಿಗೆ ನೀಡುವ ಮೂಲಕ ನಗರದ ಸ್ವಚ್ಛತೆಗೆ ಸಹಕಾರ ನೀಡುವಂತೆ ಇದೇ ಸಂದರ್ಭದಲ್ಲಿ ಪೌರಾಯುಕ್ತರು ಮನವಿ ಮಾಡಿದರು.
ಈ ಸಂದರ್ಭದಲ್ಲಿ ನಗರಸಭೆಯ ಎಇಇ ರುದ್ರೇಶ್‌ಗೌಡ, ನಗರಸಭೆ ಆರೋಗ್ಯ ನಿರೀಕ್ಷಕರಾದ ರೇವಣ್ಣ, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು.