ಜನಸಂಖ್ಯೆ ಬೆಳವಣಿಗೆ ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ಮಾರಕವಾಗಬಾರದು

ಬೀದರ್:ಜು.30: ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯ ಬೀದರ, ಸಮಾಜಶಾಸ್ತ್ರ ಅಧ್ಯಾಯನ ವಿಭಾಗ, ರೆಡ್‍ಕ್ರಾಸ್ ಘಟಕ ಹಾಗೂ ಫ್ಯಾಮಿಲಿ ಪ್ಲ್ಯಾನಿಂಗ್ ಅಸೋಸಿಯೆಶನ್ ಆಫ್ ಇಂಡಿಯಾ ಬೀದರ ಇವರುಗಳ ಸಂಯುಕ್ತಾಶ್ರಯದಲ್ಲಿ ನಿನ್ನೆ ಬಿ.ವ್ಹಿ. ಭೂಮರೆಡ್ಡಿ ಪದವಿ ಮಹಾವಿದ್ಯಾಲಯದ ಸಭಾಂಗಣದಲ್ಲಿ “ವಿಶ್ವ ಜನಸಂಖ್ಯೆ ದಿನ” ಕುರಿತು ವಿಶೇಷ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.

ಕಾರ್ಯಕ್ರಮದಲ್ಲಿ ಅತಿಥಿ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ ಭಾರತೀಯ ಕುಟುಂಬ ಯೋಜನಾ ಸಂಘದ ಶಾಖಾ ವ್ಯವಸ್ಥಾಪಕ ಶ್ರೀನಿವಾಸ ಬಿರಾದಾರ ಮಾತನಾಡಿ, ಜನಸಂಖ್ಯೆ, ಅದರ ಸ್ಥಿತಿಗತಿ ಮತ್ತು ಅಧಿಕ ಜನಸಂಖ್ಯೆಯಿಂದ ದೇಶ ಮತ್ತು ಜನರ ಮೇಲಾಗುವ ಪರಿಣಾಮಗಳ ಕುರಿತು ವಿವರವಾಗಿ ತಿಳಿಸಿದರು. ಯುವಕರು ಉತ್ತಮ ಗುಣಗಳನ್ನು ಬೆಳೆಸಿಕೊಂಡರೆ ಮಾತ್ರ ದೇಶದ ಭವಿಷ್ಯ ಉಜ್ವಲವಾಗುತ್ತದೆ. ಜೀವನದ ಮೌಲ್ಯಗಳನ್ನು ಅರಿಯಬೇಕು, ಆವಾಗ ಮಾತ್ರ ಸಧೃಢ ಸಮಾಜ ನಿರ್ಮಾಣ ಮಾಡಲು ಸಾಧ್ಯ. ಇದರಲ್ಲಿ ಜನಸಂಖ್ಯಾ ಸ್ಪೋಟ, ಮತ್ತು ನಿಯಂತ್ರಣ ತುಂಬಾ ಪ್ರಮುಖವಾದ ಅಂಶಗಳು. ಇದನ್ನು ಅರಿತು ಯುವ ಜನರು ತಮ್ಮ ಭವಿಷ್ಯ ರೂಪಿಸಿಕೊಳ್ಳಬೇಕು ಎಂದು ತಿಳಿಸುತ್ತಾ ಕುಟುಂಬ ಯೋಜನೆಯ ವಿಧಾನಗಳ ಬಗ್ಗೆ ಅರಿವು ಮೂಡಿಸಿದರು ಹಾಗೂ ಜನಸಂಖ್ಯೆ ಬೆಳವಣಿಗೆಯು ಸಾಮಾಜಿಕ, ಆರ್ಥಿಕ ಅಭಿವೃದ್ದಿಗೆ ಪೂರಕವಾಗಿರಬೇಕೇ ಹೊರತು ಮಾರಕವಾಗಿರಬಾರದು ಎಂದು ಕರೆ ನೀಡಿದರು.

ಮಹಾವಿದ್ಯಾಲಯದ ಪ್ರಾಚಾರ್ಯ ಡಾ. ಪಿ. ವಿಠ್ಠಲ ರೆಡ್ಡಿ ಇವರು ತಮ್ಮ ಅಧ್ಯಕ್ಷೀಯ ನುಡಿಗಳನ್ನಾಡಿ, ಜನಸಂಖ್ಯೆ ನಿಯಂತ್ರಣದಲ್ಲಿ ಯುವಕರ ಪಾತ್ರದ ಮಹತ್ತರವಾಗಿದೆ ಹಾಗೂ ಯುವ ಪೀಳಿಗೆ ಬೆಳೆಯುತ್ತಿರುವ ಜನಸಂಖ್ಯೆ, ಅದರ ಪರಿಣಾಮಗಳನ್ನು ಅರಿತು ತಮ್ಮ ಭವಿಷ್ಯ ರೂಪಿಸಿಕೊಳ್ಳವುದು ತುಂಬಾ ಅವಶ್ಯವಾಗಿದೆ ಎಂದು ತಿಳಿಸಿದರು.

ಮಹಾವಿದ್ಯಾಲಯದ ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥರು ಹಾಗೂ ಯುವ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿಗಳಾದ ಡಾ. ಹಣಮಂತಪ್ಪಾ ಸೇಡಂಕರ್ ಇವರು ಕಾರ್ಯಕ್ರಮದ ಕುರಿತು ಹಾಗೂ ರೆಡ್‍ಕ್ರಾಸ್ ಸಂಸ್ಥೆಯ ಸಮಾಜಮುಖಿ ಕಾರ್ಯಗಳ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಉಪ ಪ್ರಾಚಾರ್ಯ ಅನೀಲಕುಮಾರ ಅಣದೂರೆ ಮಾತನಾಡಿದರು.

ಮೊದಲಿಗೆ ಬಿ.ಕಾಂ..4ನೇ ಸೆಮಿಸ್ಟರಿನ ವಿದ್ಯಾರ್ಥಿ ಶಿವಸಾಗರ ಪ್ರಾರ್ಥನೆ ಗೀತೆ ಹಾಡಿದರು ಮಹಾವಿದ್ಯಾಲಯದ ಪ್ರಾಧ್ಯಾಪಕ ಡಾ. ಮಲ್ಲಿಕಾರ್ಜುನ ಕೋಟೆ, ಸ್ವಾಗತಿಸಿದರೆ, ರೇಣುಕಾದೇವಿ ವಂದಿಸಿದರು ಶೈಲಜಾ ಸಿ. ಕಾರ್ಯಕ್ರಮ ನಿರೂಪಣೆ ಮಾಡಿದರು.