ಜನಸಂಖ್ಯೆ ನಿಯಂತ್ರಣ ಅರಿವು ಅಗತ್ಯ

ದೇವದುರ್ಗ,ಜು.೧೨-
ಆರೋಗ್ಯಕರ ಜೀವನ ಮತ್ತು ಸಣ್ಣ ಕುಟುಂಬಗಳ ಪ್ರಾಮುಖ್ಯತೆ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈವರ್ಷದ ಜನಸಂಖ್ಯಾ ದಿನಾಚರಣೆ ಧ್ಯೇಯವಾಕ್ಯವಾಗಿದೆ. ಜನಸಂಖ್ಯೆ ನಿಯಂತ್ರಣದ ಬಗ್ಗೆ ಜನರಿಗೆ ಅರಿವು ಮೂಡಿಸುವುದು ತುರ್ತು ಅಗತ್ಯವಾಗಿದೆ ಎಂದು ಸಾರ್ವಜನಿಕ ಆಸ್ಪತ್ರೆ ವೈದ್ಯಾಧಿಕಾರಿ ನಾಗರಾಜ ಮಲ್ಕಾಪುರ ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಆಯೋಜಿಸಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಹಾಗೂ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಲಿಂಗ ಸಮಾನತೆ ಸಾರುವುದು ಪ್ರಮುಖ ದಿನಾಚರಣೆ ಉದ್ದೇಶವಾಗಿದೆ. ದಿನೇದಿನೆ ಜನಸಂಖ್ಯೆ ಬೆಳವಣಿಗೆ ಏರಿಕೆ ಕಾಣುತ್ತಿರುವುದು ಉತ್ತಮ ಬೆಳವಣಿಗೆಯಲ್ಲ.
ಜನಸಂಖ್ಯೆ ನಿಯಂತ್ರಣ ಮಾಡದಿದ್ದರೆ ಜನರಿಗೆ ನಾನಾ ಸಮಸ್ಯೆಗಳು ಎದುರಾಗಲಿವೆ. ಪ್ರತಿಯೊಬ್ಬರೂ ಸ್ವಯಂ ಪ್ರೇರಣೆಯಿಂದ ಕುಟುಂಬ ಯೋಜನೆ ಅನುಸರಿಸಬೇಕು. ಜನಸಂಖ್ಯೆ ಹೆಚ್ಚಾದರೆ ಅಗತ್ಯ ವಸ್ತುಗಳು ಸಿಗುವುದು ಕಷ್ಟವಾಗಲಿದೆ. ಇದರಿಂದ ನಾನಾ ಸಮಸ್ಯೆಗಳು, ಹಲವು ಸವಾಲುಗಳು ಎದುರಾಗಲಿವೆ. ಬಹುಮುಖ್ಯವಾಗಿ ಆಹಾರ ಸಮಸ್ಯೆ ಎದುರಾಗಲಿದೆ. ಈ ಬಗ್ಗೆ ಜನರಿಗೆ ಅರಿವು ಮೂಡಿಸುವುದು ಅಗತ್ಯವಾಗಿದೆ. ಭಾರತ ಜಗತ್ತಿನಲ್ಲೆ ಅತಿಹೆಚ್ಚು ಜನಸಂಖ್ಯೆ ಹೊಂದಿದ ದೇಶವಾಗಿದೆ ಎಂದರು.
ಆರೋಗ್ಯ ನಿರೀಕ್ಷಣಾಧಿಕಾರಿ ಚನ್ನಬಸವಯ್ಯ ಹಿರೇಮಠ, ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ ಭೂಮನಗುಂಡ, ಪಾರಂಪರಿಕ ವೈದ್ಯ ಮಹಾಮನಿ, ಇಮಾನ್‌ಅಲಿ, ವಿಶ್ವನಾಥ, ರಾಘವೇಂದ್ರಗೌಡ, ಮಂಜುನಾಥ, ಶೋಭಾ, ರೋಹಿತ್ ಅಮಾನ್, ಉಮಾದೇವಿ, ದೇವರಾಜ ಬುಂಕಲದೊಡ್ಡಿ, ಚಾಂದಬೀ, ಸುಮಿತ್ರಾ, ಬಸಪ್ಪ ಮಿಯ್ಯಾಪುರ ಇತರರಿದ್ದರು.