ಜನಸಂಖ್ಯೆ ಆಧಾರದಲ್ಲಿ ಮೀಸಲಾತಿ : ಸಿಟಿ ರವಿ

ಬೆಂಗಳೂರು,ಜ.೧೩- ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಸರ್ಕಾರ ಮೀಸಲಾತಿಯನ್ನು ಜನಸಂಖ್ಯೆಗನುಗುಣವಾಗಿ ಕೊಡುತ್ತದೆ. ನ್ಯಾಯಾಲಯಕ್ಕೆ ಮೀಸಲಾತಿ ಬಗ್ಗೆ ಮನವರಿಕೆ ಮಾಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದರು.
ಮೀಸಲಾತಿಗೆ ಸಂಬಂಧಿಸಿದಂತೆ ವಿವಿಧ ಪ್ರವರ್ಗಗಳ ಸೃಷ್ಟಿಗೆ ಹೈಕೋರ್ಟ್ ತಡೆ ನೀಡಿರುವ ಬಗ್ಗೆ ಪ್ರತಿಕ್ರಿಯಿಸಿ ನ್ಯಾಯಾಲಯಕ್ಕೆ ಮೀಸಲಾತಿ ಬಗ್ಗೆ ಮನವರಿಕೆ ಮಾಡಿಕೊಡುವ ಕೆಲಸವನ್ನು ಸರ್ಕಾರ ಮಾಡುತ್ತದೆ. ಯಾವುದೇ ಸಮುದಾಯಗಳಿಗೆ ಅನ್ಯಾಯವಾಗದಂತೆ ಮೀಸಲಾತಿ ನೀಡಲಾಗುವುದು ಎಂದರು.
ವಿಧಾನಸೌಧದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಲಿಂಗಾಯತ ಪಂಚಮಸಾಲಿ ಸಮುದಾಯವನ್ನು೨ಎಗೆ ಸೇರ್ಪಡೆ ಮಾಡುವಂತೆ ಜಯಮೃತ್ಯುಂಜಯ ಸ್ವಾಮೀಜಿ ಪಟ್ಟು ಹಿಡಿದಿದ್ದಾರೆ. ಹಸಿದವರಿಗೆ ಊಟ ಬೇಕು, ಎಲೆಯಲ್ಲಿ ಕೊಡುತ್ತೀರೋ ತಟ್ಟೆಯಲ್ಲಿ ಕೊಡುತ್ತೀರೋ ಎಂದು ಹಸಿದವರು ಕೇಳಲ್ಲ. ಅವರಿಗೆ ಊಟ ಬಡಿಸೋದು ಮುಖ್ಯ, ಮೀಸಲಾತಿ ಕೊಡಬೇಕು ನಿಜ, ಜಯಮೃತ್ಯುಂಜಯ ಸ್ವಾಮೀಜಿಗಳಿಗೂ ಎಲ್ಲವನ್ನೂ ಮನವರಿಕೆ ಮಾಡಿ ಅವರ ಅಪೇಕ್ಷೆಗೆ ತಕ್ಕಂತೆ ಸರ್ಕಾರ ಕೆಲ ವಿಚಾರಗಳನ್ನು ಮನವರಿಕೆ ಮಾಡುತ್ತದೆ ಎಂದರು.
ಸೋಲಿನ ಭೀತಿ
ಚಾಮುಂಡೇಶ್ವರಿ ಮತ್ತು ಬಾದಾಮಿಯಲ್ಲಿ ಮತ್ತೆ ನಿಂತು ಗೆದ್ದು ಬರುವ ವಿಶ್ವಾಸವಿರದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಎರಡೂ ಕಡೆಯ ಸೋಲಿನ ಭೀತಿಯಿಂದ ಕೋಲಾರದಲ್ಲಿ ಸ್ಪರ್ಧಿಸುತ್ತಿದ್ದಾರೆ ಎಂದು ವ್ಯಂಗ್ಯವಾಡಿ, ಸಿದ್ದರಾಮಯ್ಯರವರದ್ದು ಓಲೈಕೆ ರಾಜನೀತಿ, ಪಿಎಫ್‌ಐ, ಎಸ್‌ಡಿಪಿಐ ಓಲೈಕೆ ಮಾಡುತ್ತಾರೆ. ಅವರ ವಿರುದ್ಧ ಬಿಜೆಪಿ ಗೆಲ್ಲಲಿದೆ ಎಂದರು.
ಮಾಜಿ ಮುಖ್ಯಮಂತ್ರಿ ಜಗದೀಶ್‌ಶೆಟ್ಟರ್ ಅವರನ್ನು ಪಕ್ಷದಲ್ಲಿ ಕಡೆಗಣಿಸಲಾಗುತ್ತಿದೆ ಎಂಬ ವರದಿಗಳನ್ನು ತಳ್ಳಿ ಹಾಕಿದ ಅವರು, ಶೆಟ್ಟರ್ ಅವರು ಪಕ್ಷದ ಹಿರಿಯ ನಾಯಕ, ಕಡೆಗಣಿಸುವ ಪ್ರಶ್ನೆಯೇ ಇಲ್ಲ. ಪ್ರಧಾನಿ ಕಾರ್ಯಕ್ರಮ ನಿಗದಿಯಾಗುವುದು ದೆಹಲಿಯಲ್ಲಿ. ನಿನ್ನೆ ಆಹ್ವಾನ ಪತ್ರದಲ್ಲಿ ಅವರ ಹೆಸರಿರಲಿಲ್ಲ ಅಷ್ಟೇ ಎಂದರು.
ಸ್ಯಾಂಟ್ರೊ ರವಿಯನ್ನು ಪೊಲೀಸರು ಬಂಧಿಸಿಯೇ ಬಂಧಿಸುತ್ತಾರೆ. ಆತ ಎಷ್ಟು ದಿನ ತಲೆತಪ್ಪಿಸಿಕೊಂಡು ಓಡಾಡಕ್ಕಾಗುತ್ತೆ, ಯಾರನ್ನೂ ರಕ್ಷಣೆ ಮಾಡುವ ಪ್ರಶ್ನೆಯೇ ಇಲ್ಲ. ಕಾನೂನಿಗೆ ಯಾರೂ ಅತೀಥರಲ್ಲ ಎಂದು ಸಿ.ಟಿ. ರವಿ ಹೇಳಿದರು.