ಜನಸಂಖ್ಯೆಯಲ್ಲಿ ಭಾರತಕ್ಕೆ ಅಗ್ರಪಟ್ಟ

ದೆಹಲಿ, ಎ.೨೫- ಸದ್ಯ ಜಾಗತಿಕ ಮಟ್ಟದಲ್ಲಿ ಎಲ್ಲರ ಕುತೂಹಲಕ್ಕೆ ಕಾರಣವಾಗಿರುವ ಭಾರತದ ಜನಸಂಖ್ಯೆಯು ಇದೇ ವಾರದಲ್ಲಿ ಮತ್ತೆ ಎಲ್ಲರ ಗಮನ ಸೆಳೆಯಲಿದೆ. ಇದೇ ವಾರದಲ್ಲಿ ಚೀನಾವನ್ನು ಹಿಂದಿಕ್ಕಿ ಭಾರತ ವಿಶ್ವದಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರವಾಗಿ ಹೊರಹೊಮ್ಮಲಿದೆ ಎಂದು ವಿಶ್ವಸಂಸ್ಥೆ ಅಧಿಕೃತವಾಗಿ ಪ್ರಕಟಿಸಿದೆ. ಭಾರತದ ಜನಸಂಖ್ಯೆ ೧.೪೩ ಶತಕೋಟಿಯನ್ನು ತಲುಪಲಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ.
ಈ ತಿಂಗಳ ಅಂತ್ಯದ ವೇಳೆಗೆ, ಭಾರತದ ಜನಸಂಖ್ಯೆಯು ೧,೪೨೫,೭೭೫,೮೫೦ ಜನರನ್ನು ತಲುಪುವ ನಿರೀಕ್ಷೆಯಿದೆ, ಇದು ಚೀನಾದ ಮುಖ್ಯ ಭೂಭಾಗದ ಜನಸಂಖ್ಯೆಯನ್ನು ಮೀರುತ್ತದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ನಿನ್ನೆ ಪ್ರಕಟಿಸಿದೆ. ಇನ್ನು ಪ್ರಸಕ್ತ ವರ್ಷದ ಮಧ್ಯದ ವೇಳೆಗೆ ಭಾರತ ಜಗತ್ತಿನಲ್ಲಿ ಅತೀ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಹೊರಹೊಮ್ಮಲಿದೆ ಎಂದು ಕಳೆದ ವಾರ ವಿಶ್ವಸಂಸ್ಥೆ ತಿಳಿಸಿತ್ತು. ಆದರೆ ಇದೀಗ ಇದೇ ವಾರದಲ್ಲೇ ಈ ಮನ್ನಣೆಗೆ ಭಾರತ ಪಾತ್ರವಾಗಲಿದೆ ಎಂದು ಪ್ರಕಟಿಸಿದೆ. ೫ ನೇ ಶತಮಾನದ ಸಿಇಯಲ್ಲಿ ರೋಮನ್ ಸಾಮ್ರಾಜ್ಯದ ಪತನದ ನಂತರ ವಿಶ್ವದ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶವಾಗಿ ಚೀನಾ ಪರಿಗಣಿಸಲ್ಪಟ್ಟಿತ್ತು. ಯುಎನ್ ಪ್ರಕ್ಷೇಪಗಳ ಪ್ರಕಾರ ಈ ಶತಮಾನದ ಅಂತ್ಯದ ವೇಳೆಗೆ ಸುಮಾರು ೧೦೦ ಕೋಟಿ ಆಸುಪಾಸಿನಲ್ಲಿ ಚೀನಾದ ಜನಸಂಖ್ಯೆ ಕುಸಿತ ಕಾಣಲಿದೆ ಎಂದು ತಿಳಿಸಿದೆ. ಅತ್ತ ಮಧ್ಯ ಶತಮಾನದ ವೇಳೆಗೆ ಭಾರತದ ಜನಸಂಖ್ಯೆಯು ೧.೫ ಶತಕೋಟಿಯನ್ನು ತಲುಪಲಿದೆ ಎಂದು ಯುಎನ್‌ನ ಪ್ರಕ್ಷೇಪಣ ಸರಾಸರಿ ವರದಿ ತಿಳಿಸಿದೆ. ವೇಗವಾಗಿ ವೃದ್ಧಿಸುತ್ತಿರುವ ಜನಸಂಖ್ಯೆಯ ಹಿನ್ನೆಲೆಯಲ್ಲಿ ಹಲವು ವರ್ಷಗಳ ಹಿಂದೆ ಚೀನಾದಲ್ಲಿ ಕಟ್ಟುನಿಟ್ಟಿನ ಒಂದು ಮಗುವಿನ ನೀತಿಯನ್ನು ತರಲಾಗಿತ್ತು. ಆದರೆ ಇದರಿಂದ ಚೀನಾದಲ್ಲಿ ಜನಸಂಖ್ಯೆ ಬೆಳವಣಿಗೆ ತೀವ್ರ ಮಟ್ಟಕ್ಕೆ ಕುಸಿತ ಕಂಡ ಹಿನ್ನೆಲೆಯಲ್ಲಿ ೨೦೧೬ರಲ್ಲಿ ಈ ನೀತಿಯನ್ನು ಸ್ಥಗಿತಗೊಳಿಸಲಾಗಿತ್ತು. ಆದರೆ ನೀತಿ ಸ್ಥಗಿತದ ಹೊರತಾಗಿಯೂ ಚೀನಾದಲ್ಲಿ ಜನಸಂಖ್ಯೆ ತೀವ್ರ ಮಟ್ಟಕ್ಕೆ ಕುಸಿತ ಕಂಡಿತ್ತು. ಹಲವು ದಶಕಗಳ ಬಳಿಕ ಅಲ್ಲಿ ಜನಸಂಖ್ಯೆ ಪ್ರಮಾಣ ತಗ್ಗಿತ್ತು. ಸಹಜವಾಗಿಯೇ ಇದು ಚೀನಾ ಆಡಳಿತಕ್ಕೆ ಆತಂಕ ತಂದಿದೆ ಎನ್ನಲಾಗಿದೆ.