ಜನಸಂಖ್ಯಾ ಸ್ಫೋಟ ದೇಶದ ಸಮಸ್ಯೆ;ನಕ್ವಿ

ನವದೆಹಲಿ,ಜು.೧೩- ಜನಸಂಖ್ಯಾ ಸ್ಫೋಟ ಕೇವಲ ಒಂದು ಪ್ರಾಂತ್ಯಕ್ಕೆ ಮಾತ್ರ ಸೀಮಿತವಾಗಿರುವುದಿಲ್ಲ. ಇದು ಇಡೀ ದೇಶಕ್ಕೆ ಸಮಸ್ಯೆಯಾಗಲಿದೆ ಎಂದು ಬಿಜೆಪಿ ಮುಖಂಡ ಹಾಗೂ ಕೇಂದ್ರದ ಮಾಜಿ ಸಚಿವ ಮುಕ್ತಾರ್ ಅಬ್ಬಾಸ್‌ನಕ್ವಿ ಹೇಳಿದ್ದಾರೆ.
ದೆಹಲಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜನಸಂಖ್ಯಾ ಸ್ಫೋಟವನ್ನು ಯಾವುದೇ ದೇಶವಾಗಲಿ ನಿರ್ಲಕ್ಷಿಸುವುದಿಲ್ಲ ಎಂದು ಹೇಳಿದರು.
ಜನಸಂಖ್ಯಾ ಸ್ಫೋಟವನ್ನು ನಿಯಂತ್ರಿಸಲು ಬಹುತೇಕ ರಾಷ್ಟ್ರಗಳು ಪರಿಣಾಮಕಾರಿ ಕ್ರಮಗಳನ್ನು ಕೈಗೊಂಡಿವೆ. ಇದಕ್ಕೆ ಸಕರಾತ್ಮಕ ಫಲಿತಾಂಶಗಳು ದೊರೆತಿವೆ. ಜನಸಂಖ್ಯೆ ಹೆಚ್ಚಾಗುವುದನ್ನು ತಡೆಗಟ್ಟಲು ಸರ್ಕಾರದ ಜತೆಗೆ ಜನರು ಕೈಜೋಡಿಸಬೇಕು ಎಂದು ಹೇಳಿದರು.
೨೦೨೩ರ ವೇಳೆಗೆ ದೇಶದ ಜನಸಂಖ್ಯೆ ಚೀನಾವನ್ನು ಮೀರಿಸಲಿದೆ ಎಂದು ವರದಿ ಪ್ರಕಟವಾಗಿರುವ ಬೆನ್ನಲ್ಲೆ ಮುಕ್ತಾರ್‌ಅಬ್ಬಾಸ್ ನಕ್ವಿ ಈ ಹೇಳಿಕೆ ನೀಡಿದ್ದಾರೆ.
ಯಾರೂ ಕೂಡ ಜನಸಂಖ್ಯಾ ಸ್ಫೋಟವನ್ನು ನಿರ್ಲಕ್ಷಿಸಬಾರದು. ಅಲ್ಲಾನ ಕರುಣೆಯಿಂದ ಮಕ್ಕಳಾಗುತ್ತಿವೆ ಎಂಬ ಸಮಾಜವಾದಿ ಪಕ್ಷದ ಸಂಸದ ಶಫೀಕ್‌ವುರ್ ರೆಹಮಾನ್ ಬಾರಕ್ ಹೇಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದರು.