ಜನಸಂಖ್ಯಾ ಸ್ಪೋಟ ಆರ್ಥಿಕ ಅಭಿವೃದ್ಧಿಗೆ ಮಾರಕ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಜು.೪; ಜನಸಂಖ್ಯಾ ಹೆಚ್ಚಳದಿಂದ ಬಡತನ, ನಿರುದ್ಯೋಗ ಸಮಸ್ಯೆ, ಆಹಾರ, ನೀರು, ಕೊರತೆಯಾಗಿ, ಪರಿಸರ ಮಾಲಿನ್ಯ ಹೆಚ್ಚುತ್ತಿದೆ. ಜನಸಂಖ್ಯಾ ಸ್ಪೋಟ ಆರ್ಥಿಕ ಅಭಿವೃದ್ಧಿಗೆ ಮಾರಕವಾಗಿದೆ. ನವೀನ ವಿಧಾನಗಳ ಅಳವಡಿಕೆಯಿಂದ ಕುಟುಂಬ ನಿಯಂತ್ರಣ ಸಾಧ್ಯವಿದೆ ಎಂದು ಡಾ.ಜಯಶ್ರೀ ಹೇಳಿದರು.ಚಿತ್ರದುರ್ಗ ತಾಲೂಕಿನ ಲಕ್ಷ್ಮೀಸಾಗರದ ವಿಜಾಪುರ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ  ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ದಂಪತಿಗಳನ್ನು ಕುರಿತು ಅವರು ಮಾತನಾಡಿದರು.ದಂಪತಿಗಳು ಒಂದು ಮಗುವಿನಿಂದ  ಮತ್ತೊಂದು ಮಗುವಿಗೆ ಅಂತರ ಕಾಯ್ದುಕೊಳ್ಳಲು ಹಲವಾರು ತಾತ್ಕಾಲಿಕ ವಿಧಾನಗಳು ಸರ್ಕಾರಿ ಆಸ್ಪತ್ರೆಗಳಲ್ಲಿ ಲಭ್ಯವಿವೆ. ಹೆಣ್ಣು ಮಕ್ಕಳಿಗೆ ಮೂರು ತಿಂಗಳಿಗೊಮ್ಮೆ ಡಿಂಪ  ಇಂಜೆಕ್ಷನ್ ಮತ್ತು ಕಾಪರ್ ಟಿ ಅಳವಡಿಕೆ, ವಾರಕ್ಕೊಮ್ಮೆ ಛಾಯಾ  ಮಾತ್ರೆ, ತುರ್ತು ಗರ್ಭ ನಿರೋಧಕಗಳು ಹಾಗೂ ಪುರುಷರಿಗೆ ನಿರೋದ್‍ಗಳು ಉಚಿತವಾಗಿ ನೀಡಲಾಗುತ್ತದೆ. ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು. ಇಂದಿನ ಆಧುನಿಕ ಸಮಾಜದಲ್ಲಿ ಚಿಕ್ಕ ಕುಟುಂಬ ಹೊಂದುವುದು ಅನಿವಾರ್ಯವಾಗಿದೆ. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಪರಿಸರ ಮಾಲಿನ್ಯ, ಶಬ್ದ ಮಾಲಿನ್ಯ ಹೆಚ್ಚಾಗಿ ಆರೋಗ್ಯದ ಮೇಲೆ ಹೆಚ್ಚು ದುಷ್ಪರಿಣಾಮಗಳು ಉಂಟಾಗಿ ಜೀವನ  ಕಷ್ಟಕರವಾಗಬಹುದು ಎಂದರು.ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್. ಮಂಜುನಾಥ್ ಮಾತನಾಡಿ,  ಕುಟುಂಬ ಯೋಜನೆ ರಾಷ್ಟ್ರೀಯ ಕಾರ್ಯಕ್ರಮವನ್ನು ಪ್ರಾರಂಭಿಸಿದ ವಿಶ್ವದ ಮೊದಲ ದೇಶ ಭಾರತವಾಗಿದೆ. ಕೆಲವೇ ವರ್ಷಗಳಲ್ಲಿ ಜನಸಂಖ್ಯಾ ಹೆಚ್ಚಳದಲ್ಲಿ ಭಾರತ ಚೀನಾ ದೇಶವನ್ನು ಹಿಂದಕ್ಕೆ ತಳ್ಳುವುದರಲ್ಲಿ ಸಂದೇಹವಿಲ್ಲ. ಮುಂಬರುವ ಸಮಸ್ಯೆಗಳನ್ನು ಅರಿತು ಪ್ರತಿಯೊಬ್ಬರು ಜನಸಂಖ್ಯಾ ಸ್ಥಿರತೆ ಕಾಯ್ದುಕೊಂಡು ಆರೋಗ್ಯವಂತ ರಾಷ್ಟ್ರ ಕಟ್ಟಲು ಶ್ರಮಿಸಬೇಕಾಗುತ್ತದೆ ಎಂದರು.ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಬಿ. ಮೂಗಪ್ಪ. ಮಾತನಾಡಿ, ಕುಟುಂಬ ಕಲ್ಯಾಣ ಶಾಶ್ವತ ವಿಧಾನಗಳಲ್ಲಿ ಒಂದಾದ ಪುರುಷ ಸಂತಾನ ನಿರೋಧ ಶಸ್ತ್ರ ಚಿಕಿತ್ಸೆ 1970ರ ದಶಕದಿಂದಲೂ ಚಾಲ್ತಿಯಲ್ಲಿದೆ. ಇದರ ಯಶಸ್ವಿಗೆ ಪುರುಷರ ಸಹಭಾಗಿತ್ವದ ಅವಶ್ಯಕತೆ ಇದೆ.ರಾಸಾಯನಿಕ ಬಳಕೆ ಮಾಡಿದ ಆಹಾರ ಪದಾರ್ಥಗಳನ್ನು ಸೇವಿಸಿದ ಎಲ್ಲರಲ್ಲಿಯೂ ಒಂದಿಲ್ಲೊಂದು ಅನಾರೋಗ್ಯ ಸಮಸ್ಯೆ ಕಂಡು ಬರುತ್ತಿದೆ. ಅಪೌಷ್ಟಿಕತೆ, ರಕ್ತ ಹೀನತೆ, ಇನ್ನಿತರ ಸಮಸ್ಯೆಯಿಂದ ಹೆಣ್ಣು ಮಕ್ಕಳು ಬಳಲುತ್ತಿದ್ದರೆ ಪುರುಷರು ಸಂತಾನ ಹರಣ ಚಿಕಿತ್ಸೆಗೆ ಮುಂದೆ ಬರಬೇಕು. ಪುರುಷರ ಸಂತಾನ ಹರಣ ಚಿಕಿತ್ಸೆ ಸುಲಭವಾಗಿದ್ದು ಯಾವುದೇ ಹೊಲಿಗೆ ಗಾಯ ವಾಗುವುದಿಲ್ಲ. ಪುರುಷತ್ವಕ್ಕೆ ಹಾನಿಯಾಗುವುದಿಲ್ಲ.  ಯಾವುದೇ ಸಾಮಾಜಿಕ ಕಳಂಕ ಮತ್ತು ಮುಜುಗರಕ್ಕೆ ಒಳಗಾಗದೆ ಪುರುಷರು ಸಂತಾನ ಶಸ್ತ್ರ ಚಿಕಿತ್ಸೆ ಮಾಡಿಸಿಕೊಂಡು ಸುಖಮಯ ದಾಂಪತ್ಯ ಜೀವನ ನಡೆಸಬಹುದು ಎಂದರು.ಈ ಸಂದರ್ಭದಲ್ಲಿ ತಾಲೂಕಾ ಆರೋಗ್ಯ ಅಧಿಕಾರಿ ಡಾ.ಗಿರೀಶ್. ಆರೋಗ್ಯ ನಿರೀಕ್ಷಣಾಧಿಕಾರಿ ರಂಗಾರೆಡ್ಡಿ. ಹಿರಿಯ ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ ಗೌರಮ್ಮ, ಪ್ರಯೋಗಶಾಲಾ ತಂತ್ರಜ್ಞಾಧಿಕಾರಿ ಸುಪುತ್ರಪ್ಪ, ಶುಶ್ರೂಷಣಾಧಿಕಾರಿ ಗೀತಮ್ಮ ಸೇರಿದಂತೆ ಇತರೆ ಆರೋಗ್ಯ ಸಿಬ್ಬಂದಿ, ಅರ್ಹ ದಂಪತಿಗಳು ಭಾಗವಹಿಸಿದ್ದರು.