ಜನಸಂಖ್ಯಾ ನಿಯಂತ್ರಣ: ಜಾಗೃತಿ ಅಗತ್ಯ

ಬ್ಯಾಡಗಿ,ಜು.20: ವಿಶ್ವದ ಜನಸಂಖ್ಯಾ ಸ್ಫೋಟದಲ್ಲಿ ಚೈನಾ ಮತ್ತು ಭಾರತದಲ್ಲಿ ಶೇ.40 ರಷ್ಟು ಪ್ರಮಾಣ ದಾಖಲಾಗುತ್ತಿದೆ. ಆದರೆ ಚೈನಾ ಜನಸಂಖ್ಯಾ ನಿಯಂತ್ರಣ ಕುರಿತು ಕೈಗೊಳ್ಳುತ್ತಿರುವ ಕಟ್ಟುನಿಟ್ಟಿನ ಕ್ರಮಗಳು ಭಾರತದಲ್ಲೂ ಕಟ್ಟುನಿಟ್ಟಾಗಿ ಪಾಲಿಸಬೇಕಿದೆ ಎಂದು ಶಾಸಕ ವಿರುಪಾಕ್ಷಪ್ಪ ಬಳ್ಳಾರಿ ಅಭಿಪ್ರಾಯಪಟ್ಟರು.
ಪಟ್ಟಣದ ಬಿಇಎಸ್‍ಎಂ ಕಾಲೇಜಿನ ರಜತ ಮಹೋತ್ಸವ ಸಭಾಂಗಣದಲ್ಲಿ ತಾಲೂಕಾ ಆರೋಗ್ಯ ಇಲಾಖೆ ಹಾಗೂ ಬಿಇಎಸ್‍ಎಂ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಏರ್ಪಡಿಸಲಾಗಿದ್ದ ವಿಶ್ವ ಜನಸಂಖ್ಯಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಇತ್ತೀಚಿನ ವರ್ಷಗಳಲ್ಲಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಭೂಮಿಯ ಮೇಲೆ ಜನಸಂಖ್ಯಾ ಅಸಮತೋಲನ ಸೃಷ್ಠಿಯಾಗಿದೆ. ಜನಸಂಖ್ಯಾ ನಿಯಂತ್ರಣದಲ್ಲಿ ಸಾರ್ವಜನಿಕರು ಜಾಗೃತೆ ವಹಿಸುವುದು ಅಗತ್ಯವಾಗಿದ್ದು, ಪುಟ್ಟ ಕುಟುಂಬದ ಮೂಲಕವೇ ದೇಶದ ಅಭಿವೃದ್ಧಿ ಸಾಧ್ಯವಿದೆ. ಈ ದಿಶೆಯಲ್ಲಿ ಜನಸಂಖ್ಯಾ ನಿಯಂತ್ರಣಕ್ಕಾಗಿ ಸರ್ಕಾರ ರೂಪಿಸುತ್ತಿರುವ ಯೋಜನೆಗಳ ಕುರಿತು ಸಾರ್ವಜನಿಕರು ಜಾಗೃತರಾಗಬೇಕಿದೆ ಎಂದು ಮನವಿ ಮಾಡಿಕೊಂಡರು.
ತಾಲೂಕಾ ಆರೋಗ್ಯಾಧಿಕಾರಿ ಡಾ.ಸುಹೀಲ್ ಹರವಿ ಮಾತನಾಡಿ, ವಿಶ್ವದಲ್ಲಿ 2023ರ ಏಪ್ರಿಲ್ ತಿಂಗಳಲ್ಲಿಯೇ ಎಂಟು ಬಿಲಿಯನ್ ಗಡಿ ದಾಟಲಿದ್ದು, ಜನಸಂಖ್ಯೆ ಹೇರಳವಾಗಿ ಬೆಳೆಯುತ್ತಿದೆ, ಆಹಾರ ಉತ್ಪಾದನೆಯು ಕಡಿಮೆಯಾಗುತ್ತಿದ್ದು, ಇದರಿಂದಾಗಿ ಜನಸಂಖ್ಯಾ ಸ್ಫೋಟದ ಅನುಭವವಾಗುತ್ತಿದೆ. ಜನಸಂಖ್ಯೆ ನಿಯಂತ್ರಣದ ಜೊತೆಗೆ ಇತ್ತೀಚೆಗೆ ಹರಡುತ್ತಿರುವ ಅನೇಕ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣಕ್ಕೂ ಕೇಂದ್ರ ಸರ್ಕಾರ ಹಲವು ಜನಪರ ಕಾರ್ಯಕ್ರಮಗಳನ್ನು ರೂಪಿಸಿದೆ. ಜನರು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಹೇಳಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಜಿ.ಎಸ್.ವೈದ್ಯ ಅವರು ಜನಸಂಖ್ಯಾ ಸ್ಫೋಟ ಹಾಗೂ ನಿಯಂತ್ರಣದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯಕ್ರಮದಲ್ಲಿ ಪುರಸಭಾಧ್ಯಕ್ಷೆ ಸರೋಜಾ ಉಳ್ಳಾಗಡ್ಡಿ. ಉಪಾಧ್ಯಕ್ಷೆ ಗಾಯತ್ರಿ ರಾಯ್ಕರ್, ಫಕ್ಕೀರಮ್ಮ ಛಲವಾದಿ, ಸುರೇಶ ಉದ್ಯೋಗಣ್ಣನವರ, ಜಿತೇಂದ್ರ ಸುಣಗಾರ, ವಿರೇಂದ್ರ ಶೆಟ್ಟರ, ಎಸ್.ಎನ್. ಯಮನಕ್ಕನವರ, ಸದಾನಂದ ಚಿಕ್ಕಮಠ, ವೈ.ಎನ್.ಹಿರಿಯಕ್ಕನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.